ಸಾರಾಂಶ
ಇತ್ತೀಚೆಗೆ ಸಾವನ್ನಪ್ಪಿದ 8 ಬಾರಿ ದಸರಾ ಅಂಬಾರಿ ಹೊತ್ತ ಆನೆ ಅರ್ಜುನನ ನೆನಪಿನಲ್ಲಿ ಕ್ರಿಕೇಟ್ ಪಂದ್ಯಾವಳಿ ಪ್ರಾರಂಭವಾಗಿದೆ.
ಚಿತ್ರದುರ್ಗ: ದಸರಾ ಅಂಬಾರಿ ಹೊತ್ತಿದ್ದ ಆನೆ ಅರ್ಜುನನ ನೆನಪಿಗಾಗಿ ಚಿತ್ರದುರ್ಗದ ದುರ್ಗಾ ಇಲೆವನ್ ಕ್ರಿಕೆರ್ಸ್‌ವತಿಯಿಂದ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಳಿಗೆ ಬುಧವಾರ ಸಂಜೆ ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಆವರದಲ್ಲಿ ಸಂಭ್ರಮದ ಚಾಲನೆ ನೀಡಲಾಯಿತು.
ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್ ಬ್ಯಾಟಿಂಗ್ ಮಾಡುವುದರ ಮೂಲಕ ಪಂದ್ಯಾವಳಿಗೆ ಶುಭ ಕೋರಿದರು. ನಗರಸಭೆ ಮಾಜಿ ಅಧ್ಯಕ್ಷರುಗಳಾದ ಬಿ.ಕಾಂತರಾಜ್, ಸಿ.ಟಿ.ಕೃಷ್ಣಮೂರ್ತಿ, ಉದ್ಯಮಿ ಸುರೇಶ್ ಬಾಬು, ಕಾಫಿಪುಡಿ ಪರಮೇಶ್, ರಘುಮಾರರೆಡ್ಡಿ, ಗೋಪಾಲ ಸ್ವಾಮಿ ನಾಯಕ ಉಪಸ್ಥಿತರಿದ್ದರು. ರಾಯಲ್ಸ್ ಮತ್ತು ಚಾಲುಕ್ಯ ತಂಡಗಳು ಪಂದ್ಯಾವಳಿಯಲ್ಲಿ ಮೊದಲ ಮುಖಾ ಮುಖಿಯಾಗಿ ಸೆಣೆಸಿದವು. ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 35 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ.ವಿಶೇಷ ಗ್ಯಾಲರಿ: ಅರ್ಜುನ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗಾಗಿ ಇದೇ ಮೊದಲ ಬಾರಿಗೆ ಚಿತ್ರದುರ್ಗದಲ್ಲಿ ವಿಶೇಷ ಗ್ಯಾಲರಿಗಳ ನಿರ್ಮಿಸಲಾಗಿದ್ದು, ಐದು ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಅತಿಥಿಗಳು, ಸಾರ್ವಜನಿಕರಿಗೆ ಪ್ರತ್ಯೇಕ ಗ್ಯಾಲರಿಗಳಿವೆ. ಅರ್ಜುನ ಅಂಬಾರಿ ಹೊರಲು ಶ್ರಮಿಸಿದ ಮಾವುತರಾದ ರಾಜು ಮತ್ತು ವಿನಯ್ ಅವರನ್ನು ಗೌರವಿಸಲಾಗುತ್ತಿದೆ. ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ 2 ಲಕ್ಷ ರು. ಅರ್ಜುನ ಟ್ರೋಫಿ, ದ್ವಿತೀಯ 1 ಲಕ್ಷ ರು. ನಗದು ಮತ್ತು ಬಲರಾಮ ಟ್ರೋಫಿ ಹಾಗೂ ತೃತೀಯ 50 ಸಾವಿರ ರು. ನಗದು ಮತ್ತು ದ್ರೋಣ ಟ್ರೋಫಿ ನೀಡಲಾಗುತ್ತಿದೆ.