ರೈತ ಕೈಮುಗಿದು ಅಂಗಲಾಚಿದರೂ ಕೆಳಗಿಳಿಯದ ಕೇಂದ್ರ ತಂಡದ ಅಧಿಕಾರಿ

| Published : Oct 08 2023, 12:03 AM IST

ರೈತ ಕೈಮುಗಿದು ಅಂಗಲಾಚಿದರೂ ಕೆಳಗಿಳಿಯದ ಕೇಂದ್ರ ತಂಡದ ಅಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮೆಕ್ಕೆಜೋಳ ಮಳೆ ಇಲ್ಲದೇ ಹಾಳಾಗಿದೆ. ನಯಾಪೈಸೆ ಬೆಳೆ ಬಾರದಂತಾಗಿದೆ. ಕೆಳಗಿಳಿದು ಪರಿಶೀಲಿಸಿ ಎಂದು ಕುಷ್ಟಗಿ ತಾಲೂಕಿನ ಬೆನಕನಾಳ ಗ್ರಾಮದ ರೈತ ಮಲ್ಲಪ್ಪ ಬಿಂಗಿಕೊಪ್ಪ ಕೈಮುಗಿದು ಬೇಡಿಕೊಂಡರೂ ಬರ ಅಧ್ಯಯನ ತಂಡದ ಅಧಿಕಾರಿ ಕೆಳಗಿಳಿಯಲಿಲ್ಲ. ಆಗ ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ನಳಿನ್ ಅತುಲ್ ಆಗಮಿಸಿ, ರೈತರ ನೆರವಿಗೆ ಧಾವಿಸಿದರೂ ಕೇಂದ್ರ ತಂಡದ ಅಧಿಕಾರಿಯ ಮನ ಕರಗಲೇ ಇಲ್ಲ.

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮೆಕ್ಕೆಜೋಳ ಮಳೆ ಇಲ್ಲದೇ ಹಾಳಾಗಿದೆ. ನಯಾಪೈಸೆ ಬೆಳೆ ಬಾರದಂತಾಗಿದೆ. ಕೆಳಗಿಳಿದು ಪರಿಶೀಲಿಸಿ ಎಂದು ಕುಷ್ಟಗಿ ತಾಲೂಕಿನ ಬೆನಕನಾಳ ಗ್ರಾಮದ ರೈತ ಮಲ್ಲಪ್ಪ ಬಿಂಗಿಕೊಪ್ಪ ಕೈಮುಗಿದು ಬೇಡಿಕೊಂಡರೂ ಬರ ಅಧ್ಯಯನ ತಂಡದ ಅಧಿಕಾರಿ ಕೆಳಗಿಳಿಯಲಿಲ್ಲ. ಆಗ ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ನಳಿನ್ ಅತುಲ್ ಆಗಮಿಸಿ, ರೈತರ ನೆರವಿಗೆ ಧಾವಿಸಿದರೂ ಕೇಂದ್ರ ತಂಡದ ಅಧಿಕಾರಿಯ ಮನ ಕರಗಲೇ ಇಲ್ಲ.

ರೈತ ಕೈಮುಗಿದು ನಿಂತಿದ್ದರೂ ಕಾರಿನ ಗ್ಲಾಸ್ ಅರ್ಧಕ್ಕೆ ಇಳಿಸಿ ಕಾಟಾಚಾರಕ್ಕೆ ಆಲಿಸಿದರು. ಕೇಂದ್ರದ ಬರ ಅಧ್ಯಯನ ತಂಡ ಸಾಗುವ ಮಾರ್ಗವಾಗಿದ್ದರೂ ಅಲ್ಲಿ ಇಳಿದು ನೋಡುವುದಕ್ಕೆ ನಿಗದಿಯಾಗಿರಲಿಲ್ಲ.‌ ಆದರೆ ರೈತನೇ ಅಡ್ಡಬಂದರೂ ಆ ರೈತನ ಹೊಲಕ್ಕೆ ಹೋಗಲೇ ಇಲ್ಲ.‌ ಆದರೂ ರೈತ ಮಲ್ಲಪ್ಪ ಕಾರಿನಲ್ಲಿ ಕುಳಿತಿದ್ದ ಅಧಿಕಾರಿಯ ಎದುರು ತನ್ನ ನೋವು ತೋಡಿಕೊಂಡು ಗೋಳಾಡಿದ.

ಮೆಕ್ಕೆಜೋಳ ಬೆಳೆಗೆ ಹತ್ತಾರು ಸಾವಿರ ರು. ಖರ್ಚು ಮಾಡಿದರೂ ಬೆಳೆ ಬಂದಿಲ್ಲ. ಕೂಡಲೇ ಪರಿಹಾರ ಕೊಡಿ. ಇಲ್ಲದಿದ್ದರೆ ನಾವು ವಿಷ ಕುಡಿಯಬೇಕಾಗುತ್ತದೆ ಎಂದು ಹೇಳುವಾಗ ಕಣ್ಣಾಲಿಗಳು ತೇವವಾಗಿದ್ದವು. ಈ ಗೋಳನ್ನು ಆಲಿಸುತ್ತಲೇ ಕಾರು ಮುಂದೆ ಸಾಗಿತು. ಇದಾದ ಮೇಲೆ ಮಾಧ್ಯಮದವರೊಂದಿಗೆ ಮಾತನಾಡಿದ ಮಲ್ಲಪ್ಪ, ಕೈಮುಗಿದರೂ ಅಧಿಕಾರಿಗಳು ಕಾರಿನಿಂದ ಕೆಳಗಿಳಿಯಲಿಲ್ಲ, ನಮ್ಮ ಹೊಲ ನೋಡಲಿಲ್ಲ ಎಂದರು. ನಮ್ಮ ಪರಿಸ್ಥಿತಿ ಯಾರಿಗೂ ಬಾರದಿರಲಿ. ಈ ವರ್ಷ ಮಳೆ ಅಭಾವದಿಂದ ನಾವು ಹಾಳಾಗಿದ್ದೇವೆ. ಬರ ನಮ್ಮನ್ನು ಸಂಕಷ್ಟಕ್ಕೆ ದೂಡಿದೆ ಎಂದರು.

ಬರದ ನೈಜ ದರ್ಶನ: ಡೊಣ್ಣೆಗುಡ್ಡದ ಚಂದ್ರಶೇಖರ ಬಡಿಗೇರ ಎಂಬವರ ಮೆಕ್ಕೆಜೋಳದ ಹೊಲ ಬಹುತೇಕ ಒಣಗಿರುವುದನ್ನು ನೋಡಿದ ಅಧಿಕಾರಿಗಳಿಗೆ ಬರದ ನಿಜವಾದ ದರ್ಶನವಾಯಿತು.

ಕೇವಲ ಮೂರು ಗಂಟೆ ಅಧ್ಯಯನ: ಕೊಪ್ಪಳ ಜಿಲ್ಲೆಯ ಬಂಡಿ ಕ್ರಾಸ್‌ಗೆ ಸಂಜೆ ನಾಲ್ಕು ಗಂಟೆಗೆ ಆಗಮಿಸಿದ ಕೇಂದ್ರದ ಬರ ಅಧ್ಯಯನ ತಂಡ ಕೇವಲ ಮೂರು ಗಂಟೆಯಲ್ಲಿ ಬರ ಅಧ್ಯಯನ ಪೂರ್ಣಗೊಳಿಸಿತು. ಕೊಪ್ಪಳ ಜಿಲ್ಲೆಯಲ್ಲಿ ಅಧ್ಯಯನ ಮುಗಿಸಿದಾಗ ಸಂಜೆ ಏಳು ಗಂಟೆಯಾಗಿತ್ತು.

ದಾರಿಯುದ್ದಕ್ಕೂ ಅಳಲು: ಬಂಡಿ ಕ್ರಾಸ್ ಬಳಿ ಶರಣಮ್ಮ ರೊಟ್ಟಿ ತಮ್ಮ ಸಜ್ಜೆ ಹೊಲದಲ್ಲಿ ನಿಂತುಕೊಂಡು, "ಹಿಂಗ್‌ ಬೆಳೆ ಬಂದಿದೆ. ಇದರಲ್ಲಿ ಒಂದು ಕಾಳ್ ಸಿಗಲ್ಲ " ಎಂದು ಅಳಲು ತೋಡಿಕೊಂಡಳು. ಹೀಗೆ ದಾರಿಯುದ್ದಕ್ಕೂ ರೈತರು ಅಧಿಕಾರಿಗಳ ಮುಂದೆ ತಮ್ಮ ನೋವು ಹೊರಹಾಕಿದರು.

ಕೇಂದ್ರದ ತಂಡದಲ್ಲಿ ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ.ರಾಜಶೇಖರ್, ಪಶುಸಂಗೋಪನೆ ಇಲಾಖೆಯ ‌ನಿರ್ದೇಶಕ ಆರ್.ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿರಾಂ, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡ ಅವರನ್ನೊಳಗೊಂಡ ತಂಡ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿತು.

ಆಧಾರ್ ಕಾರ್ಡಿಲ್ಲ: ಕುಷ್ಟಗಿ ತಾಲೂಕಿನ ಡೊಣ್ಣೆಗುಡ್ಡ ಬಸಮ್ಮ ಅಜ್ಜಿಗೆ ೭೦ ವರ್ಷವಾಗಿದ್ದರೂ ಆಧಾರ್ ಕಾರ್ಡ್ ಇಲ್ಲ ಎನ್ನುವುದು ಬರ ಅಧ್ಯಯನ ತಂಡದ ಎದುರು ಬಯಲಾಯಿತು. ಹೊಲದಲ್ಲಿ ತಮ್ಮ ಸಜ್ಜೆ ಹಾಳಾಗಿರುವುದನ್ನು ತೋರಿಸುತ್ತಿದ್ದಾಗ ಆಕೆಯೇ ಹೇಳಿಕೊಂಡಳು.‌ ನನಗೆ ಆಧಾರ್ ಕಾರ್ಡ್ ಇಲ್ಲದಿರುವುದರಿಂದ ಗೃಹಲಕ್ಷ್ಮಿ ಯೋಜನೆಯ ಹಣವೂ ಬರುತ್ತಿಲ್ಲ ಎಂದಳು.

ಬರ ಅಧ್ಯಯನದಲ್ಲಿ ಹಸಿರು ದರ್ಶನ: ಕೇಂದ್ರದ ಬರ ಅಧ್ಯಯನ ತಂಡ ಸುತ್ತಾಡಲು ನಿಗದಿ ಮಾಡಿದ ಮಾರ್ಗದುದ್ದಕ್ಕೂ ಬರ ದರ್ಶನಕ್ಕಿಂತ ಹಸಿರು ದರ್ಶನವಾಗಿದ್ದೇ ಹೆಚ್ಚು. ದಾರಿಯುದ್ದಕ್ಕೂ ಪಂಪ್‌ಸೆಟ್ ನೀರಾವರಿ ಬೆಳೆಗಳು ಕಂಗೊಳಿಸುತ್ತಿರುವುದು ಕಂಡುಬಂದಿತು. ಬರ ವಿಪರೀತ ಪ್ರದೇಶಗಳಿದ್ದರೂ ಅಧಿಕಾರಿಗಳು ಅದನ್ಮು ತೋರಿಸುವ ಬದಲು ನೀರಾವರಿ ಏರಿಯಾದಲ್ಲಿ ಸುತ್ತಾಡಿಸಿದ್ದು ಕಟುಟೀಕೆಗೆ ಗುರಿಯಾಯಿತು.

ಈ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ಜಿಲ್ಲಾಧಿಕಾರಿ ನಳಿನ್ ಅತುಲ್, ಈಗ ಇರುವುದೇ ಹಸಿರು ಬರ. ಅದನ್ನೇ ಅವರಿಗೆ ತೋರಿಸಿದ್ದೇವೆ. ಮೊದಲೇ ಸುತ್ತಾಡಿಯೇ ನಿಗದಿ‌ ಮಾಡಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ನಳಿನ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ, ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಸೇರಿದಂತೆ ಹಲವರು ಇದ್ದರು.