ಉಳ್ಳಾಲ ಸೇತುವೆಯಿಂದ ನದಿಗೆ ಹಾರಿದ ಚಿಕ್ಕಮಗಳೂರು ವ್ಯಾಪಾರಿ

| Published : Oct 31 2023, 01:15 AM IST

ಉಳ್ಳಾಲ ಸೇತುವೆಯಿಂದ ನದಿಗೆ ಹಾರಿದ ಚಿಕ್ಕಮಗಳೂರು ವ್ಯಾಪಾರಿ
Share this Article
  • FB
  • TW
  • Linkdin
  • Email

ಸಾರಾಂಶ

2020 ರಲ್ಲಿ ಆತ್ಮಹತ್ಯೆ ತಡೆಗಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಅನುದಾನದ ಮೂಲಕ ತಡೆಬೇಲಿ ಅಳವಡಿಸಲಾಯಿತು. ತದನಂತರ ನೇತ್ರಾವತಿ ಸೇತುವೆಯಲ್ಲಿ ಆತ್ಮಹತ್ಯೆಗಳು ನಿಂತಿತ್ತು.
ಕನ್ನಡಪ್ರಭ ವಾರ್ತೆ ಉಳ್ಳಾಲ ಕಳೆದ ಮೂರು ವರ್ಷಗಳಿಂದ ಆತ್ಮಹತ್ಯೆಗಳಿಂದ ನಿರಾತಂಕವಾಗಿದ್ದ ಉಳ್ಳಾಲದ ನೇತ್ರಾವತಿ ಸೇತುವೆ ಇದೀಗ ಮತ್ತೆ ವ್ಯಾಪಾರಿ ಯುವಕನೋರ್ವನ ಆತ್ಮಹತ್ಯೆ ಯತ್ನದಿಂದ ಸುದ್ದಿಯಾಗಿದೆ. 2019 ರಲ್ಲಿ ಕಾಫಿ ಡೇ ಮಾಲೀಕ ಸಿದ್ಧಾಥ್೯ ಆತ್ಮಹತ್ಯೆ ಬಳಿಕ ಸರಣಿ ಆತ್ಮಹತ್ಯೆಗಳೇ ನೇತ್ರಾವತಿ ಸೇತುವೆಯಲ್ಲಿ ನಡೆದಿತ್ತು. 2020 ರಲ್ಲಿ ಆತ್ಮಹತ್ಯೆ ತಡೆಗಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಅನುದಾನದ ಮೂಲಕ ತಡೆಬೇಲಿ ಅಳವಡಿಸಲಾಯಿತು. ತದನಂತರ ನೇತ್ರಾವತಿ ಸೇತುವೆಯಲ್ಲಿ ಆತ್ಮಹತ್ಯೆಗಳು ನಿಂತಿತ್ತು. ಇದೀಗ ಮತ್ತೆ ಕಾಫಿ ಡೇ ಮಾಲೀಕ ಸಿದ್ಧಾಥ್೯ ತವರೂರು ಚಿಕ್ಕಮಗಳೂರಿನ ಮುಗುಳಬಳ್ಳಿ ಗೋಕುಲ್ ಫಾಮ್೯ ನಿವಾಸಿ, ವ್ಯಾಪಾರಿ ಪ್ರಸನ್ನ ಕುಮಾರ್‌ (37) ಎಂಬವರು ನದಿಗೆ ಜಿಗಿದಿದ್ದು, ಕಣ್ಮರೆಯಾಗಿದ್ದಾರೆ. ಮಧ್ಯಾಹ್ನ ವೇಳೆ ತೊಕ್ಕೊಟ್ಟು ಕಡೆಯಿಂದ ಬಂದು ರಾ.ಹೆ.66 ರ ಬಳಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ಏಕಾಏಕಿ ನದಿಗೆ ಹಾರಿದ್ದಾರೆ. ಈ ಘಟನೆಯನ್ನು ಪ್ರತ್ಯಕ್ಷ ಕಂಡವರು ತಕ್ಷಣ ರಕ್ಷಣೆಗೆ ಧುಮುಕಿದರೂ ಅದಾಗಲೇ ಅವರು ನೀರುಪಾಲಾಗಿದ್ದರು. ಘಟನಾ ಸ್ಥಳದಲ್ಲಿ ಕುತೂಹಲಿಗರು ಜಮಾಯಿಸಿದ್ದರಿಂದ ರಸ್ತೆ ಸಂಚಾರದಲ್ಲಿ ಕೆಲಕಾಲ ಅಡಚಣೆಯುಂಟಾಯಿತು. ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಸೇತುವೆ ಮೇಲಿದ್ದ ಕಾರನ್ನು ವಶಪಡಿಸಿದ್ದಾರೆ. ನದಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಕಂಕನಾಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಸನ್ನ ಕುಮಾರ್‌ ಅವರು ಸ್ನೇಹಿತನೊಬ್ಬನ ಜತೆ ತರಕಾರಿ ವ್ಯಾಪಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ. ಇನ್ನೊಂದು ಮೂಲದ ಪ್ರಕಾರ ಪ್ರಸನ್ನ ಕುಮಾರ್‌ ಅವರು ಆಸ್ಪತ್ರೆಯಲ್ಲಿ ಕುಟುಂಬಿಕರನ್ನು ಬಿಟ್ಟು ಬಳಿಕ ವಾಪಸ್‌ ಬರುವಾಗ ಏಕಾಏಕಿ ನದಿಗೆ ಹಾರಿದ್ದಾರೆ ಎಂದು ಹೇಳಲಾಗಿದೆ. ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು ಎಂದು ಗೊತ್ತಾಗಿಲ್ಲ. ಕಂಕನಾಡಿ ಪೊಲೀಸು ತನಿಖೆ ನಡೆಸುತ್ತಿದ್ದಾರೆ.