ಸಾರಾಂಶ
ಮುಂಡರಗಿ: ಪಂಚಾಯತ ರಾಜ್ಯ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಗ್ರಂಥಾಲಯಗಳು ಅರಿವು ಕೇಂದ್ರಗಳಾಗಿ ಮಾರ್ಪಡುವ ಮೂಲಕ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳ ಸ್ನೇಹಿಯಾಗಿಯೂ ಆಕರ್ಷಿಸುವ ಮೂಲಕ ಮಕ್ಕಳ ಬರಹಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾಲೂಕಿನ ಮೇವುಂಡಿಯಲ್ಲಿ ತಾಲೂಕು ಮಕ್ಕಳ ಸಾಹಿತ್ಯ ಸಂಭ್ರಮವು ಇತ್ತೀಚೆಗೆ ಮೂರು ದಿನಗಳ ಕಾಲ ಮೇವುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿತು.
ಸಾಹಿತಿ ಮೇವುಂಡಿ ಮಲ್ಲಾರಿ ವೇದಿಕೆಯಲ್ಲಿ ನಡೆದ ಮಕ್ಕಳ ಸಾಹಿತ್ಯ ಸಂಭ್ರಮ ಮಕ್ಕಳ ಸೃಜನ ಬರವಣಿಗೆಗೆ ಇಂಬು ಕೊಡುವ ಮೂಲಕ ಯಶಸ್ವಿಯಾಗಿ ಸಮಾರೋಪಗೊಂಡಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಜಂಟಿ ಸಹಯೋಗದಲ್ಲಿ ರಾಜ್ಯಾದ್ಯಂತ 75 ತಾಲೂಕುಗಳಲ್ಲಿ ಏಳೂವರೆ ಸಾವಿರ ಮಕ್ಕಳಿಗೆ ಈ ವರ್ಷ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಸಂಘಟಿಸಿದ್ದು, ಇದರನ್ವಯ ತಾಲೂಕಿನ ಮೇವುಂಡಿ, ಡಂಬಳ ಹಾಗೂ ಹೆಸರೂರು ಗ್ರಾಪಂ ವ್ಯಾಪ್ತಿಯ 100 ಮಕ್ಕಳು ಇದರಲ್ಲಿ ಭಾಗವಹಿಸಿದ್ದರು.
ಈ ಕುರಿತು ಮಕ್ಕಳ ಸಾಹಿತಿ, ಸಾಹಿತ್ಯ ಸಂಭ್ರಮದ ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ. ನಿಂಗು ಸೊಲಗಿ ಮಾತನಾಡಿ, ಮಕ್ಕಳಲ್ಲಿ ವಾಚನಾಭಿರುಚಿ ಬೆಳೆಸಿ ಗ್ರಾಮೀಣ ಗ್ರಂಥಾಲಯದ ಸದ್ಬಳಕೆ ಮಾಡುವಂತೆ ಉತ್ತೇಜಿಸುವುದು ಹಾಗೂ ಮಕ್ಕಳ ಸೃಜನಶೀಲ ಬರವಣಿಗೆಗೆ ಅವಕಾಶ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುವ ಉದ್ದೇಶ ಸಾಹಿತ್ಯ ಸಂಭ್ರಮದ್ದಾಗಿದೆ.
ಇದಕ್ಕೆ ಪೂರಕವಾಗಿ 12 ಜನ ಸಂಪನ್ಮೂಲ ವ್ಯಕ್ತಿಗಳು ಕತೆ ಕಟ್ಟೋಣ, ಕವಿತೆ ಬರೆಯೋಣ, ನಾಟಕ ಆಡೋಣ, ನಾನೂ ರಿಪೋರ್ಟರ್ ಹೀಗೆ ನಾಲ್ಕು ಕಾರ್ನರ್ ಗಳಲ್ಲಿ ಮೂರು ದಿನಗಳ ಕಾಲ ಮಕ್ಕಳಲ್ಲಿ ಸೃಜನ ಓದು ಮತ್ತು ಬರಹದ ಕುರಿತು ವಿಭಿನ್ನ ಚಟುವಟಿಕೆ ನಡೆಸಲಾಯಿತು.
ಈ ಸಾಹಿತ್ಯ ಸಂಭ್ರಮದಲ್ಲಿ ಮಕ್ಕಳು ರಚಿಸಿದ ಕತೆ, ಕವಿತೆ, ನಾಟಕ ಮೊದಲಾದ ಬರಹಗಳನ್ನು ವಿಭಿನ್ನ ಮಾದರಿಯಲ್ಲಿ ಸಂಗ್ರಹಿಸಿದ್ದು, ನಂತರ ಇಲಾಖೆಯ ನಿರ್ದೇಶನದಲ್ಲಿ ಆಯ್ದ ಬರಹಗಳನ್ನು ಸಂಪಾದಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿ ಪಂಚಾಯ್ತಿ ಅರಿವು ಕೇಂದ್ರಗಳಿಗೆ ಹಂಚುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿ, ಮಕ್ಕಳು ಆಟ, ಹಾಡು, ಮೋಜು, ಮಸ್ತಿಯೊಂದಿಗೆ ಸಂಭ್ರಮದ ಗೀತೆ ಹಾಡುತ್ತಾ ಕಲ್ಪನೆ ವಾಸ್ತವಗಳ ಸುತ್ತ ಕತೆ, ಕವಿತೆ, ನಾಟಕ ಹೆಣೆದರು.
ಲೈಬ್ರರಿ, ಪಂಚಾಯ್ತಿಗಳನ್ನು ಸಂದರ್ಶಿಸಿ ವರದಿ ಮಾಡಿದರು, ಸಾಹಿತಿಗಳನ್ನು ಸಂದರ್ಶಿಸಿದರು, ಸಾಹಿತ್ಯ ಪ್ರಕಾರದ ಪುಸ್ತಕಗಳನ್ನು ಓದಿ ವಿಶ್ಲೇಷಿಸಿದರು. ಹೀಗೆ ಮೂರು ದಿನಗಳ ಸಾಹಿತ್ಯ ಸಂಭ್ರಮ ಮಕ್ಕಳಲ್ಲಿರುವ ಕವಿ, ಕತೆಗಾರ, ನಾಟಕಕಾರರನ್ನು ಗುರುತಿಸಿ ಬರವಣಿಗೆಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿತು ಎಂದರು.
ಮೇವುಂಡಿ ಗ್ರಾಪಂ ಅಧ್ಯಕ್ಷೆ ದುರಗಮ್ಮ ಯಮನೂರಪ್ಪ ತಳಗೇರಿ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ವಿಶ್ವನಾಥ ಹೊಸಮನಿ ಮಕ್ಕಳ ಸಾಹಿತ್ಯ ಸಂಭ್ರಮ ಶೀರ್ಷಿಕೆಯ ತೋರಣ ಅನಾವರಣಗೊಳಿಸಿ ಉದ್ಘಾಟಿಸಿದರು.
ಉಪಾಧ್ಯಕ್ಷೆ ಸತ್ಯವ್ವ ಊದಂಡಿ, ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರಶಿಕ್ಷಣಾಧಿಕಾರಿ ಎಚ್.ಎಂ.ಪಡ್ನೇಶಿ,ತಾಪಂ ಎಡಿ ಹಾಗೂ ಮಕ್ಕಳ ಸಾಹಿತ್ಯ ಸಂಭ್ರಮ ನೋಡಲ್ ಅಧಿಕಾರಿ ಪ್ರವೀಣ ಗೋಣೆಮ್ಮನವರ, ಬಿಆರ್.ಸಿ. ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ, ಪಂಚಾಯ್ತಿ ಸದಸ್ಯ ವಿರೇಶ ಸಿದ್ನೆಕೊಪ್ಪ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯುವರಾಜ ಮುಂಡರಗಿ, ಎಸ್.ಡಿ.ಎಂ.ಸಿ ಅಧ್ಯಕ್ಷ ರವಿ ಮೇಟಿ, ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಸದಸ್ಯೆ ಶಿಲ್ಪಾ ಹಳ್ಳಿಕೇರಿ, ಬಿಆರ್ ಪಿ ಹನಮರಡ್ಡಿ ಇಟಗಿ, ಮೇವುಂಡಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಂತೋಷ ಹೂಗಾರ, ಕಾರ್ಯದರ್ಶಿ ಸಂತೋಷ ಮಸೂತಿ, ಡಂಬಳ ಪಿಡಿಒ ಶಶಿಧರ ಹೊಂಬಳ, ಸಿ ಆರ್.ಪಿ. ಎನ್.ಎಂ. ಕುಕನೂರ ಮೊದಲಾದವರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಎಂ.ಜಿ. ಗಚ್ಚಣ್ಣವರ ಪಾಲ್ಗೊಂಡು ಮಾತನಾಡಿದರು. ಸಾಹಿತಿ ಪ್ರೊ.ಆರ್.ಎಲ್.ಪೊಲೀಸ್ ಪಾಟೀಲ ಅವರನ್ನು ಮಕ್ಕಳು ತಮ್ಮದೇ ಪ್ರಶ್ನೆಗಳೊಂದಿಗೆ ಸಂದರ್ಶನ ಮಾಡಿದರು. ಪಂಚಾಯ್ತಿ ಗ್ರಂಥಪಾಲಕ ಹಾಲಪ್ಪ ಕೊರ್ಲಹಳ್ಳಿ, ಗವಿಸಿದ್ದಪ್ಪ ಹಳ್ಳಾಕರ, ಮಂಜಪ್ಪ ಹಟ್ಟಿ ಮಕ್ಕಳ ಪುಸ್ತಕ ಪ್ರದರ್ಶನ ನಡೆಸಿಕೊಟ್ಟರು. ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ. ನಿಂಗು ಸೊಲಗಿ ಹಾಗೂ ಶಿಲ್ಪಾ ಹಳ್ಳಿಕೇರಿ ಸಂಯೋಜಕರಾಗಿ ವಿಶ್ವನಾಥ್ ಉಳ್ಳಾಗಡ್ಡಿ, ಎಸ್.ಡಿ.ಬಸೇಗೌಡ್ರ, ಮನೋಹರ್ ಎಸ್, ಸುಜಾತಾ ಎಸ್. ಬೆಟಗೇರಿ, ಎಸ್.ವಿ.ಅರಿಷಣದ, ಎಂ.ಎಸ್. ಶೀರನಹಳ್ಳಿ, ಅಕ್ಕಮಹಾದೇವಿ ಕೊಟ್ಟೂರಶೆಟ್ಟರ್, ಮಂಜುಳಾ ಪತ್ತಾರ್, ಎಚ್.ಎಚ್.ಸದರಬಾಯಿ, ವೈ.ಎಸ್. ದಡವಾಡ, ಮುಬೀನಾ ಕೋಲ್ಕಾರ್, ಸುಮಾ ಎಸ್. ಸೊರಟೂರ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದರು.