ಹಾವೇರಿ ನಗರದ ಲೋಕೋಪಯೋಗಿ ಇಲಾಖೆ ಆವರಣದ ಪ್ರವಾಸಿ ಮಂದಿರದ ಬಳಿ ಅಪರೂಪದ ಚಿಪ್ಪು ಹಂದಿ ಕಾಣಿಸಿಕೊಂಡ ಘಟನೆ ಸೋಮವಾರ ನಡೆದಿದೆ.

ಹಾವೇರಿ: ನಗರದ ಲೋಕೋಪಯೋಗಿ ಇಲಾಖೆ ಆವರಣದ ಪ್ರವಾಸಿ ಮಂದಿರದ ಬಳಿ ಅಪರೂಪದ ಚಿಪ್ಪು ಹಂದಿ ಕಾಣಿಸಿಕೊಂಡ ಘಟನೆ ಸೋಮವಾರ ನಡೆದಿದೆ.

ಪ್ರವಾಸಿ ಮಂದಿರ ನಿರ್ವಹಣೆ ಮಾಡುವ ಸಿಬ್ಬಂದಿ ಚಂದ್ರಣ್ಣ ಅವರ ಮನೆಯ ಶೌಚಾಲಯದ ಬಳಿ ಚಿಪ್ಪು ಹಂದಿ ಕಾಣಿಸಿಕೊಂಡಿರುವುದನ್ನು ಗಮನಿಸಿದ ಕುಟುಂಬಸ್ಥರು, ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಚಿಪ್ಪು ಹಂದಿಯನ್ನು ಸುರಕ್ಷಿತವಾಗಿ ರಕ್ಷಿಸಿ ತಮ್ಮ ವಶಕ್ಕೆ ಪಡೆದುಕೊಂಡರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಅಕ್ಷಯ್ ಪ್ರಕಾಶಕರ ಅವರ ಮಾರ್ಗದರ್ಶನದಲ್ಲಿ, ಹಾವೇರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅನುಷಾ ಎಂ., ಹಾವೇರಿ ವಲಯ ಅರಣ್ಯಾಧಿಕಾರಿ ಸಿದ್ದಮ್ಮ ಕರಿಗಾರ, ಶಹರ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಹಂಡೆರ ಹಾಗೂ ಗುತ್ತಲ ಗಸ್ತು ಅರಣ್ಯ ಪಾಲಕ ಬಸವರಾಜ ಕುಲಕರ್ಣಿ ಅವರು ಸ್ಥಳಕ್ಕೆ ತೆರಳಿ ಚಿಪ್ಪು ಹಂದಿಯನ್ನು ರಕ್ಷಿಸುವ ಕಾರ್ಯದಲ್ಲಿ ಪಾಲ್ಗೊಂಡರು. ಅರಣ್ಯ ಇಲಾಖೆಯ ಸಿಬ್ಬಂದಿಯ ಕಾರ್ಯಾಚರಣೆಯಿಂದ ಚಿಪ್ಪು ಹಂದಿಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ಚಿಪ್ಪು ಹಂದಿ ಸಾಮಾನ್ಯವಾಗಿ ರಾತ್ರಿ ವೇಳೆ ಸಂಚರಿಸುವ ಪ್ರಾಣಿಯಾಗಿದ್ದು, ಇರುವೆ, ಗೆದ್ದಲು ಮುಂತಾದ ಕೀಟಗಳನ್ನು ಆಹಾರವಾಗಿ ಸೇವಿಸುತ್ತದೆ. ಅಪಾಯ ಎದುರಾದಾಗ ತನ್ನ ದೇಹವನ್ನು ಚೆಂಡಿನಂತೆ ಮಡಚಿಕೊಂಡು, ಗಟ್ಟಿಯಾದ ಚಿಪ್ಪುಗಳ ಮೂಲಕ ರಕ್ಷಿಸಿಕೊಳ್ಳುವುದು ಇದರ ವಿಶೇಷ ಗುಣವಾಗಿದೆ. ಅಕ್ರಮ ಬೇಟೆ ಮತ್ತು ಕಳ್ಳ ಸಾಗಣೆಯಿಂದಾಗಿ ಈ ಅಪರೂಪದ ವನ್ಯಜೀವಿ ಅಪಾಯದಲ್ಲಿದೆ. ಹೀಗಾಗಿ ಸಾರ್ವಜನಿಕರು ಇಂತಹ ಪ್ರಾಣಿಗಳು ಕಂಡುಬಂದಲ್ಲಿ ಅವುಗಳನ್ನು ಹಿಡಿಯಲು ಅಥವಾ ಹಾನಿ ಮಾಡಲು ಮುಂದಾಗದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.