ಶಿಕ್ಷಣದಿಂದ ಮಾತ್ರ ಸಂಸ್ಕಾರಯುತ ಸಮಾಜ ಸಾಧ್ಯ

| Published : May 29 2024, 12:45 AM IST

ಸಾರಾಂಶ

ಪಿನ್ಯಾಕಲ್ ಕರಿಯರ್ ಬಿಲ್ಡರ್ಸ್‌ನ ಬೇಸಿಗೆ ಶಿಬಿರ ಮುಕ್ತಾಯ, ವಿದ್ಯಾರ್ಥಿಗಳ ಸನ್ಮಾನದಲ್ಲಿ ಸುನೀಲ್ ಜೈನಾಪುರ

ಕನ್ನಡಪ್ರಭ ವಾರ್ತೆ ವಿಜಯಪುರ

ಸಮಾಜವನ್ನು ಸಂಸ್ಕಾರಯುತವನ್ನಾಗಿ ಪರಿವರ್ತಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಅದರಲ್ಲೂ ಬಾಲ್ಯಾವಸ್ಥೆಯ ಹಂತದಲ್ಲೇ ದೊರೆಯುವ ಶಿಕ್ಷಣದ ಗುಣಮಟ್ಟ ನಾಳಿನ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಆ ನೆಲೆಯಲ್ಲಿ ಆರಂಭಿಕ ಹಂತದಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ ಭವಿಷ್ಯದ ಭಾರತವನ್ನು ಭದ್ರಗೊಳಿಸಬೇಕು ಎಂದು ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷ ಸುನೀಲ್ ಜೈನಾಪುರ ಹೇಳಿದರು.

ನಗರದ ಆಲಕುಂಟೆ ಬಡಾವಣೆಯಲ್ಲಿ ಪಿನ್ಯಾಕಲ್ ಕರಿಯರ್ ಬಿಲ್ಡರ್ಸ್‌ನಲ್ಲಿ ನಡೆದ ಬೇಸಿಗೆ ಶಿಬಿರದ ಮುಕ್ತಾಯ, ನೂತನ ಪೂರ್ವ ಪ್ರಾಥಮಿಕ ಶಾಲೆಯ ಉದ್ಘಾಟನೆ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಎಳೆಯ ವಯಸ್ಸಿನಿಂದಲೇ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ವಿದ್ಯಾರ್ಥಿಗಳ ಕಲಿಕಾ ಮತ್ತು ಗ್ರಹಿಕಾ ಸಾಮರ್ಥ್ಯ ಹೆಚ್ಚಿಸುವಲ್ಲಿ ಶಿಕ್ಷಕರು ಮತ್ತು ಪಾಲಕರ ಜವಾಬ್ದಾರಿ ಗುರುತರವಾಗಿದೆ ಎಂದು ವಿವರಿಸಿದರು.

ಸಾಹಿತಿ ಶಿವಶರಣಪ್ಪ ಶಿರೋರ ಮಾತನಾಡಿ, ಮಕ್ಕಳನ್ನು ಶೈಕ್ಷಣಿಕವಾಗಿ ಅಲ್ಲದೇ ದೇಶಪ್ರೇಮಿಗಳನ್ನಾಗಿ ಬೆಳೆಸಬೇಕು. ಸದೃಢ ಭಾರತ ನಿರ್ಮಾಣದ ಸದುದ್ದೇಶದಿಂದ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಅಣಿಗೊಳಿಸಬೇಕು. ಭಾರತೀಯ ಸಂಸ್ಕೃತಿ, ಆಚಾರ ವಿಚಾರಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಅತ್ಯುತ್ತಮ ನಾಗರಿಕರನ್ನಾಗಿ ರೂಪಿಸಬೇಕು ಎಂದು ಕಿವಿಮಾತು ಹೇಳಿದರು.

ಡಿಸಿಸಿ ಬ್ಯಾಂಕ್‌ ನೌಕರ ರಾಜು ರಾಠೋಡ್ ಮಾತನಾಡಿ, ನಿರಂತರ ಓದು ವಿದ್ಯಾರ್ಥಿಗಳಲ್ಲಿ ವಿಷಯದ ಮೇಲೆ ಪ್ರಭುತ್ವ ಸಾಧಿಸಲು ಸಹಕಾರಿಯಾಗುತ್ತದೆ. ಉತ್ತಮ ಆರೋಗ್ಯ ಸಂಪಾದಿಸಲು ಪೌಷ್ಟಿಕತೆ ಹೊಂದಿದ ಆಹಾರ, ನಿಯಮಿತ ವ್ಯಾಯಾಮ ಮತ್ತು ಉತ್ತಮ ಅಭಿರುಚಿಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಆರ್‌ಎಸ್‌ಎಸ್ ಪ್ರಮುಖ ಸಿದ್ದು ಕಲರಗಿ ಮಾತನಾಡಿ, ವಿದ್ಯಾರ್ಥಿಗಳು ಋಣಾತ್ಮಕ ಆಲೋಚನೆಗಳನ್ನು ಬದಿಗಿರಿಸಿ ಶ್ರದ್ಧೆ ಮತ್ತು ಪ್ರಾಮಾಣಿಕತೆಯನ್ನು ರೂಢಿಸಿಕೊಂಡಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಸಕಾರಾತ್ಮಕ ಯೋಚನೆಗಳಿಂದ ಕಲಿಕೆಯಲ್ಲಿನ ಭಾವನಾತ್ಮಕ ತೊಡಕುಗಳನ್ನು ತೊಡೆದು ಹಾಕುವ ಮೂಲಕ ಓದಿನ ವೇಗವನ್ನು ಸುಧಾರಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಿದ್ದು ಕರಲಗಿ, ಶಿವಕುಮಾರ್ ನೇಕಾರ, ಕಾಂತೇಶ್ ದಾಶ್ಯಳ, ದೇವಿಂದ್ರ ರಾಠೋಡ್, ಮಹೇಶಕುಮಾರ್ ಪತ್ತಾರ, ವಿಠ್ಠಲ್ ಅಲಕುಂಟೆ, ಅಕ್ಷಯ ಹಿರೇಮಠ, ಬಾಪೂರಾಯ್ ಮೇಡೆಗಾರ, ಮಂಜುಳಾ, ಗೀತಾ, ಬೌರಮ್ಮ, ಪ್ರೀತಿ ಬಸೋರಾ, ಪ್ರೀತಿ ಕನಸೆ, ಪ್ರಜ್ಞಾಲೋಣಿ, ನಾವ್ಯಶ್ರೀ ಪತ್ತಾರ್, ವರುಣ್ ಬಡಚಿ ಮುಂತಾದವುರು ಉಪಸ್ಥಿತರಿದ್ದರು.