ಸಾರಾಂಶ
ಗುಳೇದಗುಡ್ಡ ಪಟ್ಟಣದ ಬಸವೇಶ್ವರ ನಗರದ ಶುದ್ಧ ಕುಡಿಯುವ ನೀರಿನ ಘಟಕ ಆರಂಭ ಆಗಿ 3-4 ವರ್ಷ ಗತಿಸಿದರೂ ಜನರು ಮಾತ್ರ ಈ ಘಟಕದ ನೀರನ್ನು ಕುಡಿಯಲು ಬಳಸುತ್ತಿಲ್ಲ. ಆದರೂ ಪುರಸಭೆಯ ಗುತ್ತಿಗೆದಾರರು ನಿತ್ಯ ಅದರ ಬಾಗಿಲು ತೆರೆಯುತ್ತಲೇ ಇದ್ದಾರೆ.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪಟ್ಟಣದ ಬಸವೇಶ್ವರ ನಗರದ ಶುದ್ಧ ಕುಡಿಯುವ ನೀರಿನ ಘಟಕ ಆರಂಭ ಆಗಿ 3-4 ವರ್ಷ ಗತಿಸಿದರೂ ಜನರು ಮಾತ್ರ ಈ ಘಟಕದ ನೀರನ್ನು ಕುಡಿಯಲು ಬಳಸುತ್ತಿಲ್ಲ. ಆದರೂ ಪುರಸಭೆಯ ಗುತ್ತಿಗೆದಾರರು ನಿತ್ಯ ಅದರ ಬಾಗಿಲು ತೆರೆಯುತ್ತಲೇ ಇದ್ದಾರೆ. ಸುಮಾರು 3-4 ವರ್ಷಗಳ ಹಿಂದೆ ಈ ಶುದ್ಧ ಕುಡಿಯುವ ನೀರಿನ ಘಟಕವನ್ನು ಪುರಸಭೆ ಅನುದಾನದಲ್ಲಿ ಸ್ಥಾಪಿಸಿ ಕಾರ್ಯರಂಭ ಮಾಡಿತು. ಆರಂಭದಲ್ಲಿ ಈ ಘಟಕದಲ್ಲಿ ಕುಡಿಯಲು ನೀರು ಒಯ್ದವರು ಮತ್ತೆ ತಿರುಗಿ ಘಟಕಕ್ಕೆ ಬರಲೇ ಇಲ್ಲ. ಇಲ್ಲಿನ ನೀರು ಅತ್ಯಂತ ಸವುಳು ಇರುವುದರಿಂದ ಘಟಕದ ಅಕ್ಕಪಕ್ಕದ ಹಾಗೂ ಬಸವೇಶ್ವರ ನಗರದ ಜನರು ದೂರದ ಭಂಡಾರಿ ಕಾಲೇಜು ಎದುರಿನ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಹೋಗಿ ಕುಡಿಯಲು ನೀರು ತರುತ್ತಿದ್ದಾರೆ.ಭಂಡಾರಿ ಕಾಲೇಜು ಹತ್ತಿರದ ಘಟಕಕ್ಕೂ ಹಾಗೂ ಈ ಘಟಕಕ್ಕೂ ಒಂದೇ ಬೋರ್‌ವೆಲ್ಲನಿಂದ ನೀರು ಬಿಡಲಾಗುತ್ತಿದೆ ಆದರೂ ಅಲ್ಲಿಯ ನೀರು ಸಿಹಿಯಾಗಿದ್ದರೆ ಇಲ್ಲಿಯ ನೀರು ಯಾಕೆ ಸವುಳಾಗಿದೆ ಎಂಬುದು ಜನರ ಪ್ರಶ್ನೆ. ಇದಕ್ಕೆ ಪುರಸಭೆಯವರು ಉತ್ತರ ನೀಡದೇ, ಶುದ್ಧ ಕುಡಿಯುವ ನೀರಿನ ಘಟಕವನ್ನು ಜನ ಬಳಸದಿದ್ದರೂ ನಿತ್ಯ ಬಾಗಿಲು ತೆರೆಯುವ ಕೆಲಸ ಮಾಡುತ್ತಿದ್ದಾರೆ.
ಬೇಸಿಗೆಯಾಗಿದ್ದರಿಂದ ಪಟ್ಟಣದಲ್ಲಿ ಕೆಲವೇ ಶುದ್ಧ ಕುಡಿಯುವ ನೀರಿನ ಘಟಕಗಳು ನೀರು ಪೂರೈಸುತ್ತಿವೆ. ಕೆಲವು ಬಾರಿ ಅವು ಕೈಕೊಟ್ಟರೆ ಮುಗಿಯಿತು, ಜನ ರಾತ್ರಿಯವರೆಗೂ ಸರದಿಯಲ್ಲಿ ನಿಂತು ಕುಡಿಯಲು ನೀರು ತರುವ ಸ್ಥಿತಿ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಪುರಸಭೆ ಬಸವೇಶ್ವರ ನಗರದಲ್ಲಿನ ನಿರುಪಯುಕ್ತ ಘಟಕವನ್ನು ಯಾಕೆ ಸರಿಪಡಿಸುತ್ತಿಲ್ಲ ಎಂದು ನಾಗರಿಕರ ಪ್ರಶ್ನೆ.ಪುರಸಭೆ ಅಧಿಕಾರಿಗಳು ಆದಷ್ಟು ಬೇಗ ಬಸವೇಶ್ವರ ನಗರದಲ್ಲಿಯ ಶುದ್ಧ ಕುಡಿಯುವ ನೀರಿನ ಘಟಕದ ತಾಂತ್ರಿಕದೋಷ ಸರಿಪಡಿಸಿ ಜನರಿಗೆ ಕುಡಿಯಲು ಯೋಗ್ಯವಾದ ಶುದ್ಧ ನೀರು ಕೊಡಬೇಕೆಂದು ಬಸವೇಶ್ವರ ನಗರದ ಆನಂದ ಸುರಪೂರ, ಚಂದ್ರು ಹೆಬ್ಬಳ್ಳಿ, ಸಚೀನ ಸಕ್ರಿ, ಗುರು ಸಂಗಮದ ಸೇರಿದಂತೆ ಇನ್ನೂ ಅನೇಕರು ಆಗ್ರಹಿಸಿದ್ದಾರೆ.
ಸಂಬಂಧಪಟ್ಟ ನೀರು ಸರಬರಾಜು ಸಿಬ್ಬಂದಿಗೆ ತಿಳಿಸಿರುವೆ. ತಾಂತ್ರಿಕ ದೋಷವೇನಾದರೂ ಇದ್ದರೆ ಒಂದೆರಡು ದಿನಗಳಲ್ಲಿ ಸರಿಪಡಿಸಿ ಸಾರ್ವಜನಿಕರಿಗೆ ನೀರು ಒದಗಿಸುತ್ತೇವೆ.-ಎ.ಎಚ್. ಮುಜಾವರ ಮುಖ್ಯಾಧಿಕಾರಿಪುರಸಭೆ ಗುಳೇದಗುಡ್ಡ