ಇದ್ದೂ ಇಲ್ಲದಂತಿರುವ ಶುದ್ಧ ನೀರಿನ ಘಟಕ

| Published : May 18 2024, 12:36 AM IST

ಸಾರಾಂಶ

ನೀರಿನ ಘಟಕವನ್ನು ಶೀಘ್ರದಲ್ಲೇ ದುರಸ್ತಿಗೊಳಿಸಬೇಕು. ಇದು ಹಾಳಾಗಿರುವ ಕಾರಣ ಕುಡಿವ ನೀರಿಗಾಗಿ ಅಲೆಯಬೇಕಿದೆ. ಇಲ್ಲಿನ ಘಟಕ ದುರಸ್ತಿ ಯಾದರೆ, ಸುತ್ತಮುತ್ತಲಿನ ನಾಗರಿಕರಿಗೆ ನೀರಿನ ಸಮಸ್ಯೆ ನಿವಾರಣೆ ಆಗಲಿದೆ.

ಕನ್ನಡಪ್ರಭ ವಾರ್ತೆ ಯಡ್ರಾಮಿ

ಶುದ್ಧ ನೀರಿನ ಘಟಕ ಕೆಟ್ಟು ನಿಂತಿದ್ದು, ಗ್ರಾಮಸ್ಥರು ಕುಡಿವ ನೀರಿಗಾಗಿ ಪರಿತಪಿಸು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಪ್ರದೇಶದ ನಾಗರಿಕರಂತೆ ಗ್ರಾಮೀಣ ಭಾಗದ ಜನರೂ ಸಹ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿವ ನೀರು ಕುಡಿಯಲೆಂದು ಸರ್ಕಾರ ಗ್ರಾಮಗಳಲ್ಲಿ ಶುದ್ಧ ಕುಡಿವ ನೀರಿನ ಘಟಕ ನಿರ್ಮಿಸಿದೆ.

ಆದರೆ ಅದು ಕೆಟ್ಟರೆ ಮತ್ತೆ ದುರಸ್ತಿಗೊಳಿಸದೆ ಆಡಳಿತ ಯಂತ್ರ ಕಡೆಗಣಿಸಿರುವುದರಿಂದ ಗ್ರಾಮಗಳಲ್ಲಿ ಮತ್ತೆ ಹಳೆಯ ಪದ್ಧತಿ ಮರಳುವಂತಿದೆ. ಯಡ್ರಾಮಿ ತಾಲೂಕಿನ ಮಳ್ಳಿ, ಕುಳಗೇರಿ, ಸುಂಬಡ, ಕಡಕೋಳ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಶುದ್ಧ ಕುಡಿವ ನೀರಿನ ಘಟಕ ಕೆಟ್ಟು ಹಲವು ವರ್ಷವೇ ಕಳೆದರೂ ಈವರೆಗೂ ಇದನ್ನು ಯಾರೂ ದುರಸ್ತಿಗೊಳಿಸಿಲ್ಲ. ಈ ಗ್ರಾಮಗಳಲ್ಲಿ ಪ್ಲೊರೈಡ್‌ ಅಂಶ ಅಧಿಕವಾಗಿದ್ದು, ಜನರು ಲವಣಾಂಶ ತುಂಬಿರುವ ನೀರು ಕುಡಿದು ಹಲವು ಕಾಯಿಲೆಗಳಿಗೆ ತುತ್ತಾಗಿದ್ದರು. ನಿತ್ಯ ಒಂದಲ್ಲ ಒಂದು ಅನಾರೋಗ್ಯಕ್ಕೆ ಸಿಲುಕಿ ಪರದಾಡುತ್ತಿದ್ದರು. ಈ ಹಿನ್ನೆಲೆ ಸರ್ಕಾರ ಶುದ್ಧ ನೀರಿನ ಘಟಕ ಅಳವಡಿಸಿತ್ತು. ಆದರೆ, ಯಂತ್ರಗಳು ಕೆಟ್ಟ ಬಳಿಕ ಕೇಳುವವರೇ ಇಲ್ಲ.

ಗ್ರಾಪಂ, ತಾಪಂ, ಶಾಸಕರ ನಿರ್ಲಕ್ಷ್ಯ: ಮಳ್ಳಿ ಮತ್ತು ಕುಳಗೇರಿ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ಕೆಟ್ಟು ವರ್ಷಗಳೇ ಕಳೆದರೂ, ಯಾರೂ ಗ್ರಾಮದ ಕಡೆ ಮುಖ ಮಾಡಿಲ್ಲ. ಈ ಎರಡು ಗ್ರಾಮದವರು ಶುದ್ಧ ಕುಡಿವ ನೀರು ಕುಡಿಯಲು ತರಲು 5 ಕಿ.ಮೀ. ದೂರದ ನಾಗರಹಳ್ಳಿ ಗ್ರಾಮದಲ್ಲಿ ಇರುವ ಖಾಸಗಿ ಶುದ್ಧ ನೀರಿನ ಘಟಕಕ್ಕೆ ಹೋಗಿ ಶುದ್ಧ ನೀರನ್ನು ತರುವ ಪರಿಸ್ಥಿತಿ ಎದುರಾಗಿದೆ. ಪ್ರತಿದಿನವೂ ಕೆಲಸ, ಕಾರ್ಯ ಬಿಟ್ಟು ದೂರದ ಊರುಗಳಿಗೆ ಅಲೆಯುವಂತಾಗಿದೆ. ಯಂತ್ರಗಳು ಕೆಟ್ಟಿರುವ ಬಗ್ಗೆ ಗ್ರಾಪಂಗೆ ದೂರು ನೀಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಜಿಪಂ ಎಇಇ ಗಮನಕ್ಕೆ ತಂದರೂ ಉಪಯೋಗವಾಗಿಲ್ಲ. ಇನ್ನು ಶಾಸಕರ ಗಮನಕ್ಕೆ ತಂದರೂ ಆಸಕ್ತಿ ತೋರುತ್ತಿಲ್ಲ ಎಂದು ಗ್ರಾಮದ ಹಿರಿಯರು ಆರೋಪಿಸಿದ್ದಾರೆ.

ಯಂತ್ರೋಪಕರಣ ತುಕ್ಕು ಹಿಡಿಯುತ್ತಿವೆ:

ತಾಲೂಕಿನ ಗ್ರಾಮಗಳಲ್ಲಿ ನಿರ್ಮಿಸಿರುವ ಶುದ್ಧ ನೀರಿನ ಘಟಕಗಳು ಕಾಯನಿರ್ವಹಿಸದಿರುವುದರಿಂದ ಗ್ರಾಮಸ್ಥರು ಕುಡಿವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿ, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕೆಟ್ಟು ನಿಂತಿರುವ ನೀರಿನ ಘಟಕಗಳನ್ನು ದುರಸ್ತಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕಿದೆ. ಲಕ್ಷಾಂತರ ರು. ವೆಚ್ಚ ಮಾಡಿ ನಿರ್ಮಿಸಿರುವ ಘಟಕದ ಯಂತ್ರೋಪಕರಣಗಳು ತುಕ್ಕು ಹಿಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.