ಸಾರಾಂಶ
ಕನ್ನಡಪ್ರಭ ವಾರ್ತೆ ಗದಗ
ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ ಪ್ರಕರಣದ ಕೊಲೆಗಡುಕರ ಜಾಡು ಹಿಡಿದಿರುವ ಪೊಲೀಸರಿಗೆ ಹಲವಾರು ಮಹತ್ವದ ಸುಳಿವು ಸಿಕ್ಕಿದ್ದು, ಶೀಘ್ರ ಬಂಧನವಾಗುವ ಸಾಧ್ಯತೆ ಇದೆ. ಪ್ರಕರಣ ಭೇದಿಸಲು ಶುಕ್ರವಾರದಿಂದಲೇ ಎಲ್ಲ ಆಯಾಮಗಳಲ್ಲಿ ಫಿಲ್ಡ್ ಗಿಳಿದಿದ್ದು, ಪರಿಶೀಲನೆ ಕಾರ್ಯ ನಡೆಸುತ್ತಿದ್ದಾರೆ.ಅವಳಿ ನಗರದಲ್ಲಿರುವ ಸಿಸಿ ಕ್ಯಾಮೇರಾಗಳ ಮೂಲಕ ಅನುಮಾಸ್ಪದ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಇದಕ್ಕೆ ಪೊಲೀಸ್ ಇಲಾಖೆಯಿಂದ ಜಾರಿಗೆ ತಂದಿರುವ ಥರ್ಡ್ ಐ ಯೋಜನೆಯ ಸಹಕಾರ ಪಡೆಯುತ್ತಿದ್ದಾರೆ. ಅತ್ಯಂತ ಭೀಬತ್ಸವಾಗಿ ಮಲಗಿದ್ದ ಸಮಯದಲ್ಲಿ ಮನೆಗೆ ನುಗ್ಗಿ ಹತ್ಯೆ ಮಾಡಿರುವ ಘಟನೆ ನಡೆದಿರುವುದು ಜಿಲ್ಲೆಯನ್ನೇ ತಲ್ಲಣಗೊಳಿಸಿದ್ದು, ಇಂದಿಗೂ ನಗರದ ಜನತೆಯಲ್ಲಿ ಇನ್ನೂ ಆತಂಕ ಮನೆ ಮಾಡಿದೆ.
ಕನ್ನಡಪ್ರಭಕ್ಕೆ ಲಭ್ಯವಾಗಿರುವ ಮಾಹಿತಿ ಆಧಾರದಲ್ಲಿ ಒಟ್ಟು 42 ಕ್ಕೂ ಅಧಿಕ ಸಿಸಿ ಕ್ಯಾಮೇರಾಗಳ ವಿಡಿಯೋ ಫುಟೇಜ್ ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ನಡೆದ ಅಲ್ಪ ಸಮಯದಲ್ಲಿ ಅನುಮಾನಾಸ್ಪದವಾಗಿ 6 ಜನ ಯುವಕರು ನಡೆದಾಡುವ ಸಿಸಿ ಕ್ಯಾಮೇರಾ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ದೃಶ್ಯಗಳು ಹಂತಕರದ್ದೇ ಎಂಬುದರ ಕುರಿತು ಜನರಲ್ಲಿ ಅನುಮಾನ ಮೂಡಿದೆ.ಇನ್ನೊಂದೆಡೆ ಘಟನೆ ಸ್ಥಳಕ್ಕೆ ಬಂದಿದ್ದ ಶ್ವಾನದಳ ಸಿಬ್ಬಂದಿಗಳು ನಗರವನ್ನು ಪ್ರದಕ್ಷಿಣೆ ಹಾಕಿದ್ದು, ನಗರದ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಸಂಚರಿಸಿದ್ದು, ಹಂತಕರ ಸಂಚರಿಸಿದ ಕುರಿತು ಇಲಾಖೆಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.
ತನಿಖೆ ಒಂದು ಹಂತದಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ವೇಳೆಯಲ್ಲಿಯೇ ಪೊಲೀಸರಿಗೆ ಅಂದು ರಾತ್ರಿ ಪದೇ ಪದೇ ಬಳಕೆಯಾಗಿರುವ ಹಲವಾರು ಮೊಬೈಲ್ ನಂಬರ್ ಪತ್ತೆಯಾಗಿದ್ದು, ಇದರ ಆಧಾರದಲ್ಲಿಯೂ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರಿಗೆ ಸಾಕಷ್ಟು ಶ್ರಮಿಸುತ್ತಿದ್ದು, ಇನ್ನೆರಡು ದಿನಗಳಲ್ಲಿ ನಿರ್ಣಾಯಕ ಘಟ್ಟಕ್ಕೆ ಬರಲಿದೆ.ಪೊಲೀಸ್ ಇಲಾಖೆಗೆ ತಲೆನೋವು: ಹಂತಕರು ಕೂಡಾ ಸಾಕಷ್ಟು ಚಾಲಕಿತನ ಪ್ರದರ್ಶನ ಮಾಡಿದ್ದು, ಘಟನೆ ನಂತರ ಅವರು ಎಲ್ಲಿಗೆ ಹೋದರು, ಯಾವ ಮಾರ್ಗದಲ್ಲಿ ಹೋಗಿದ್ದಾರೆ ಎನ್ನುವ ಸುಳಿವನ್ನು ಬಿಡದಂತೆ ಪರಾರಿಯಾಗಿದ್ದಾರೆ. ಅದರಲ್ಲಿಯೂ ಘಟನಾ ಮನೆಯ ಸುತ್ತಮುತ್ತಲಿನ ಮನೆಗಳು ಸಾರ್ವಜನಿಕ ಸ್ಥಳಗಳಲ್ಲಿರುವ ಸಿಸಿ ಕ್ಯಾಮೇರಾಗಳಲ್ಲಿ ಅವರ ಚಲನವಲನಗಳ ಬಗ್ಗೆ ಯಾವುದೇ ಸುಳಿವು ಸಿಗದೇ ಇರುವುದು ಕೂಡಾ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.