ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲು ನೀತಿ ಸಂಹಿತೆ ಅಡ್ಡಿಯಾಗದಿದ್ದರೆ ಮಹಾನಗರ ಪಾಲಿಕೆ ಧೀಮಂತ ಪ್ರಶಸ್ತಿ ನೀಡಲು ನೀತಿ ಸಂಹಿತಿ ನೆಪ ಹೇಳಿ ಸಂಘ-ಸಂಸ್ಥೆಗಳ ಸಭೆಯನ್ನು ನಡೆಸಿಲ್ಲ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ರಾಜ್ಯ ಸರ್ಕಾರಕ್ಕಿಲ್ಲದ ನೀತಿ ಸಂಹಿತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಅನ್ವಯಿಸುತ್ತಿದೆಯೇ?

ಇಂತಹ ಪ್ರಶ್ನೆ ಇದೀಗ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಇದಕ್ಕೆ ಕಾರಣ ರಾಜ್ಯೋತ್ಸವ ಆಚರಣೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ರಾಜ್ಯೋತ್ಸವ ಆಚರಣೆಗೂ ಒಂದು ತಿಂಗಳು ಮುಂಚಿತವಾಗಿಯೇ ಕನ್ನಡಪರ ಸಂಘಟನೆಗಳು, ಸಾರ್ವಜನಿಕರು, ಹಿರಿಯ ಅಧಿಕಾರಿಗಳ ಸಭೆ ಕರೆದು ಸಾರ್ವಜನಿಕರ ಸಲಹೆ-ಸೂಚನೆ ಪಡೆಯುತ್ತಿತ್ತು. ಧೀಮಂತ ಪ್ರಶಸ್ತಿ ನೀಡಲು ಸಮಿತಿ ರಚನೆ, ಸ್ವಾಗತ ಸಮಿತಿ ಸೇರಿದಂತೆ ವಿವಿಧ ಸಮಿತಿ ರಚಿಸಿ ಜವಾಬ್ದಾರಿ ವಹಿಸುತ್ತಿತ್ತು. ಧೀಮಂತ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿ ಅಳೆದು ತೂಗಿ ಪ್ರಶಸ್ತಿಗಳ ಹೆಸರು ಪ್ರಕಟಿಸಲಾಗುತ್ತಿತ್ತು. ಆದರೆ, ಈ ವರ್ಷ ರಾಜ್ಯದಲ್ಲಿ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆ ಇತ್ತೀಚಿಗಷ್ಟೇ ಮುಗಿದಿದೆ. ಅದರ ನೀತಿ ಸಂಹಿತೆ ರಾಜ್ಯಾದ್ಯಂತ ಇರುವುದರಿಂದ ಪಾಲಿಕೆ ಯಾವುದೇ ಸಭೆ ನಡೆಸಿಲ್ಲ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಾಂಕೇತಿಕವಾಗಿ ಆಚರಿಸಲು ಮುಂದಾಗಿದೆ. ಬಳಿಕ ಎರಡ್ಮೂರು ದಿನಗಳಲ್ಲಿ ಸಭೆ ನಡೆಸಿ ಸಮಿತಿ ರಚಿಸಿ, ತದನಂತರ ಪ್ರಶಸ್ತಿ ವಿತರಣೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹದಿನೈದು ದಿನದೊಳಗೆ ನಡೆಸಲು ಪಾಲಿಕೆ ನಿರ್ಧರಿಸಿದೆ.

ಪಾಲಿಕೆಗಷ್ಟೇ ಏಕೆ?:

ಅತ್ತ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ. ಜತೆಗೆ ನೀತಿ ಸಂಹಿತೆ ಇರುವಾಗಲೇ ಆಯ್ಕೆ ಸಮಿತಿ ಎರಡ್ಮೂರು ಬಾರಿ ಸಭೆ ನಡೆಸಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದೆ. ಆದರೆ, ಪಾಲಿಕೆಯ ಧೀಮಂತ ಪ್ರಶಸ್ತಿ ಆಯ್ಕೆ, ಅದ್ಧೂರಿ ಆಚರಣೆ ಕುರಿತಂತೆ ಸಭೆ ನಡೆಸಲು ನೀತಿ ಸಂಹಿತೆ ಅಡ್ಡಿ ಆಗುವುದಾದರೆ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಅಡ್ಡಿಯಾಗಲಿಲ್ಲವೇ? ರಾಜ್ಯ ಸರ್ಕಾರಕ್ಕಿಲ್ಲದ ನೀತಿ ಸಂಹಿತೆ ಮಹಾನಗರ ಪಾಲಿಕೆಗೆ ಅನ್ವಯಿಸುತ್ತಿದೆಯೇ? ಎಂಬ ಪ್ರಶ್ನೆ ಕಾಡಲಾರಂಭಿಸುತ್ತಿದೆ.

ಈ ಪ್ರಶ್ನೆಗೆ ಅಧಿಕಾರಿ ವರ್ಗ ಸ್ಪಷ್ಟ ಉತ್ತರ ನೀಡುತ್ತಿಲ್ಲ. ಆಡಳಿತ ಮಂಡಳಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಭೆ ನಡೆಸಿಲ್ಲ. ಇದೀಗ ಸಾಂಕೇತಿಕವಾಗಿ ಆಚರಿಸಿ ನಂತರ ಪ್ರಶಸ್ತಿ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸ್ಪಷ್ಟಪಡಿಸುತ್ತಿದೆ.ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕನ್ನಡಪರ ಹಾಗೂ ಸಾರ್ವಜನಿಕ ಸಂಘ-ಸಂಸ್ಥೆಗಳ ಸಭೆ ನಡೆಸಿಲ್ಲ. ಸದ್ಯ ಸಾಂಕೇತಿಕವಾಗಿ ರಾಜ್ಯೋತ್ಸವ ಆಚರಿಸಲಾಗುವುದು. ನಂತರ ಧೀಮಂತ ಪ್ರಶಸ್ತಿ ವಿತರಣೆ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಸಭೆ ನಡೆಸಿ ನಿರ್ಧರಿಸಲಾಗುವುದು.

ಶಿವಕುಮಾರ ಮೆಣಸಿನಕಾಯಿ, ಸಭಾನಾಯಕರು, ಹು-ಧಾ ಮಹಾನಗರ ಪಾಲಿಕೆ