ಮಡಿವಾಳರನ್ನು ಪ.ಜಾತಿಗೆ ಸೇರಿಸಲು ಆಗ್ರಹ

| Published : Feb 02 2024, 01:00 AM IST

ಸಾರಾಂಶ

ಸಮಾಜದಲ್ಲಿ ಎರಡು ರೀತಿಯ ಜಾತಿಗಳಿವೆ. ಒಂದು ಆರ್‌.ಟಿ.ಸಿ ಇರುವ ಜಾತಿಗಳು. ಮತ್ತೊಂದು ಆರ್‌ಟಿಸಿ ಇಲ್ಲದ ಸಣ್ಣ ಸಣ್ಣ ಸಮುದಾಯಗಳು. ಆರ್‌.ಟಿ.ಸಿ ಅಂದರೆ ಭೂಮಿ, ಉದ್ಯೋಗ, ಶಿಕ್ಷಣ. ಇದನ್ನು ಪಡೆದುಕೊಳ್ಳಲು ಒಟ್ಟಾಗಿ ಹೋರಾಟ ಮಾಡಬೇಕು. ಒಟ್ಟಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕುಗಳನ್ನು ಪಡೆಯಲು ಸಾಧ್ಯವಿದೆ

- ಜಿಲ್ಲಾಡಳಿತದಿಂದ ಶ್ರೀ ಮಡಿವಾಳ ಮಾಚಿದೇವರ ಜಯಂತಿ---

ಕನ್ನಡಪ್ರಭ ವಾರ್ತೆ ಮೈಸೂರು

ಮಡಿವಾಳರನ್ನು ಪ.ಜಾತಿ ಮೀಸಲಾತಿಗೆ ಸೇರಿಸುವಂತೆ ಬೇಡಿಕೆ ಇದೆ. ಈಗ ಪ್ರವರ್ಗ 2ಎ ನಲ್ಲಿರುವ ಮಡಿವಾಳರನ್ನು ಪ್ರವರ್ಗ 1ಕ್ಕೆ ಸೇರಿಸಿದರೆ ಸ್ವಲ್ಪ ಅನುಕೂಲವಾಗುತ್ತದೆ ಎಂದು ಮೈಲ್ಯಾಕ್‌ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ ತಿಳಿಸಿದರು.

ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಹಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಮೀಸಲಾತಿ ಕೊಡುವ ಸಂಬಂಧ ವಿವೇಚಿಸಿ ಮಡಿವಾಳ ಸಮುದಾಯದ ಪಾಲನ್ನು ಕೊಡುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕು ಎಂದು ಅವರು ಹೇಳಿದರು.

ಸಮಾಜದಲ್ಲಿ ಎರಡು ರೀತಿಯ ಜಾತಿಗಳಿವೆ. ಒಂದು ಆರ್‌.ಟಿ.ಸಿ ಇರುವ ಜಾತಿಗಳು. ಮತ್ತೊಂದು ಆರ್‌ಟಿಸಿ ಇಲ್ಲದ ಸಣ್ಣ ಸಣ್ಣ ಸಮುದಾಯಗಳು. ಆರ್‌.ಟಿ.ಸಿ ಅಂದರೆ ಭೂಮಿ, ಉದ್ಯೋಗ, ಶಿಕ್ಷಣ. ಇದನ್ನು ಪಡೆದುಕೊಳ್ಳಲು ಒಟ್ಟಾಗಿ ಹೋರಾಟ ಮಾಡಬೇಕು. ಒಟ್ಟಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕುಗಳನ್ನು ಪಡೆಯಲು ಸಾಧ್ಯವಿದೆ ಎಂದು ಅವರು ಹೇಳಿದರು.

ಮಡಿವಾಳ ಸಮಾಜದವರು ಡೋಬಿ ಘಾಟ್‌ ಕೇಳುವುದನ್ನು ನಿಲ್ಲಿಸಿ, ಭೂಮಿ, ಉದ್ಯೋಗ ಮತ್ತು ಉತ್ತಮ ಶಿಕ್ಷಣ ಕೊಡುವಂತೆ ಸರ್ಕಾರವನ್ನು ಕೇಳಬೇಕು. ಆದರೆ ಯಾವಾಗಲೂ ಡೋಬಿ ಘಾಟ್‌ ಕಟ್ಟಿಕೊಡಿ, ಉತ್ತಮ ನೀರು ಕೊಡುವಂತೆ ಬೇಡಿಕೆ ಇಡುತ್ತಾರೆ. ಈಗ ಅವರು ಜಾಗ್ರತರಾಗಿ ವ್ಯವಸಾಯಕ್ಕೆ ಭೂಮಿ, ನಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಮನೆ ಕಟ್ಟಿಕೊಡುವಂತೆ ಕೇಳಬೇಕು. ಆಗ ಸಮಾಜ ಬದಲಾವಣೆ ಸಾಧ್ಯ ಎಂದು ಅವರು ಹೇಳಿದರು.

ಭವ್ಯ ಪರಪಂರೆಯನ್ನು ಹೊಂದಿದ ಭಾರತದಲ್ಲಿ 12ನೇ ಶತಮಾನದ ವಚನ ಕ್ರಾಂತಿಯ ವೇಳೆ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯವನ್ನು ತನ್ನ ಪ್ರಾಣವನ್ನೂ ಲೆಕ್ಕಿಸದೆ ಸಂರಕ್ಷಿಸಿದ್ದು, ಮಡಿವಾಳ ಮಾಚಿದೇವ ಎಂದು ಅವರು ಹೆಮ್ಮೆಯಿಂದ ಹೇಳಿದರು.

ಅರಸುತನ ಮೇಲಲ್ಲ ಅಗಸತನ ಕೀಳಲ್ಲ ಎಂದ ಮಾಚಿದೇವ ಮಹಾಸ್ವಾಭಿಮಾನಿ. ಮಾಚಿದೇವ ವೀರಭದ್ರನ ಅವತಾರವೆಂದು ಪುರಾಣಗಳಲ್ಲಿದೆ. ಅರಸ ಬಿಜ್ಜಳನಿಗೂ ಹೆದರದ ಧೀರ. ಅನುಭವ ಮಂಟಪ ಪ್ರವೇಶಿಸಲು ಮಡಿವಾಳ ಮಾಚಿದೇವನ ಅನುಮತಿ ಪಡೆಯಬೇಕಿತ್ತು ಎಂದರು.

ಮಡಿವಾಳ ಮಾಚಿದೇವರು 344 ವಚನಗಳನ್ನು ಬರೆದಿದ್ದಾರೆ. ಕಾಯಕ ಸಮಾಜಗಳನ್ನು ಒಗ್ಗೂಟಿಸಿದ ಬಸವಣ್ಣ ಅವರು ಸಾಮಾಜಿಕ ಕ್ರಾಂತಿ ಮಾಡಿದರು. ಇದರ ದಂಡನಾಯಕ ಮಡಿವಾಳ ಮಾಚಿದೇವ ಎಂದು ಅವರು ಹೇಳಿದರು.

ನಾವಿಂದು ಕಾಣುತ್ತಿರುವ ರಾಮರಾಜ್ಯದ ಕನಸನ್ನು ನಾಲ್ವಡಿ ಅವರು ನೀಡಿದ್ದರು. ಅಂತಹ ಪುಣ್ಯಭೂಮಿ ನಮ್ಮದು. ಈ ಕನಸನ್ನು ನಾವು ಈಗ ಕಾಣುತ್ತಿದ್ದೇವೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಕಲಾಮಂದಿರದ ವರೆಗೆ ಮಾಚಿದೇವರ ಭಾವಚಿತ್ರದ ಮೆರವಣಿಗೆ ನಡೆಯಿತು. ಈ ವೇಳೆ ವಿವಿಧ ಛದ್ಮವೇಷಧಾರಿಗಳು, ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು.

ಶಾಸಕ ಕೆ. ಹರೀಶ್‌ ಗೌಡ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಆರ್‌. ಲೋಕನಾಥ್‌‍, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌‍. ಮಲ್ಲಿಕಾರ್ಜುನ ಸ್ವಾಮಿ, ನಗರ ಪಾಲಿಕೆ ಉಪ ಆಯುಕ್ತ (ಕಂದಾಯ) ಜಿ.ಎಸ್. ಸೋಮಶೇಖರ್‌, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ಮುಖಂಡ ರವೀಂದ್ರಕುಮಾರ್‌ ಇದ್ದರು.