ಸಾರಾಂಶ
ದೊಡ್ಡಬಳ್ಳಾಪುರ: ಕಾಮಣ್ಣನ ಹಬ್ಬಕ್ಕೆ ಪರಂಪರೆಯ ಝಲಕ್ ಈ ಬಾರಿ ಜೋರಾಗಿದೆ. ಜೊತೆಗೆ ಲೋಕ ಕಲ್ಯಾಣದ ಸಂದೇಶಕ್ಕೆ ಸಮಕಾಲೀನತೆ ಮತ್ತು ಆಧುನಿಕತೆಯ ಸ್ಪರ್ಶ ಸಹ ದೊರೆತಿರುವುದು ಈ ಬಾರಿಯ ಹೈಲೈಟ್ಸ್. ಜಗತ್ತಿನ ಜೀವನ ಕ್ರಮವನ್ನೇ ಅಲ್ಲೋಲ ಕಲ್ಲೋಲ ಮಾಡಿ ಬಿಡುವ "ಕಾಮ "ನನ್ನು ಹೋಳಿ ಹುಣ್ಣಿಮೆಯ ದಿನ ದಹಿಸುವುದು ಲೋಕಕಲ್ಯಾಣಾರ್ಥ. ಅದನ್ನು ಮಾಡಿದವರು ಸಾಕ್ಷಾತ್ ಪರಮೇಶ್ವರ. ಅದನ್ನೀಗಲೂ ಜನ ಧಾರ್ಮಿಕತೆಯ ಲೇಪ ಹಚ್ಚಿ ಆಚರಿಸಿಕೊಂಡು ಬರುತ್ತಿದ್ದಾರೆ.
ಹೋಳಿ ಹುಣ್ಣಿಮೆಯ ದಿನ ನಡೆವ ಕಾಮದಹನ ಪೌರಾಣಿಕ ಮಹತ್ವವುಳ್ಳ ಆಚರಣೆ. ನಂತರ ಬರುವ ಅಮಾವಾಸ್ಯೆಯ ದಿನ ಮತ್ತು ನಂತರದ ದಿನ, ಯುಗಾದಿ ಹಿಂದಿನ ದಿನ ರಾತ್ರಿ ಮತ್ತು ಯುಗಾದಿಯ ದಿನ ಕಾಮನ ಸ್ಮರಣೆ ನಡೆಯುತ್ತದೆ. ಅದನ್ನೇ ಜನ ಕಾಮಣ್ಣನನ್ನು ತಣ್ಣಗೆ ಮಾಡುವ ಹಬ್ಬ ಎಂದು ಕರೆಯುವುದು ಇಲ್ಲಿನ ವಾಡಿಕೆ.ಯುಗಾದಿಯ ಮುನ್ನಾದಿನವಾದ ಸೋಮವಾರ, ಹಬ್ಬದ ದಿನವಾದ ಮಂಗಳವಾರ ಹಲವೆಡೆ ಕಾಮಣ್ಣನ ಚಿತ್ತಾರಗಳನ್ನು ಬರೆಯಲಾಗಿದ್ದು, ನೋಡುಗರನ್ನು ಸೆಳೆಯುತ್ತಿವೆ.
ವಿಶೇಷ ಮಹತ್ವ:ದೊಡ್ಡಬಳ್ಳಾಪುರದಲ್ಲಿ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಪ್ರತಿವರ್ಷ ಯುಗಾದಿ ಹಬ್ಬದ ಹಿಂದಿನ ದಿನ ರಾತ್ರಿ ಇದು ನಡೆಯುತ್ತದೆ. ಕಾಮದಹನ ನಡೆಸಿರುವ ಸ್ಥಳದಲ್ಲಿ ಕಾಮಣ್ಣನ ಬೃಹತ್ ಮಣ್ಣಿನ ಮೂರ್ತಿಯ ಚಿತ್ತಾರ ಬಿಡಿಸಲಾಗುತ್ತದೆ. ನೆಲದ ಮೇಲೆ ಜೇಡಿಮಣ್ಣಿನಿಂದ ತಯಾರಾಗುವ ಈ ಮೂರ್ತಿಗಳು ಬಣ್ಣದ ಅಲಂಕಾರ, ವಿವಿಧ ಬಗೆಯ ಚಿತ್ತಾರಗಳ ಮೂಲಕ ಗಮನ ಸೆಳೆಯುತ್ತವೆ. ಸಾಮಾನ್ಯವಾಗಿ 5 ಅಡಿಗಳಿಂದ ಹಿಡಿದು, ಕೆಲವೆಡೆ 30-25 ಅಡಿ ಉದ್ದಗಲದ ಮೂರ್ತಿ ಚಿತ್ತಾರಗಳನ್ನು ಮಾಡಲಾಗುತ್ತದೆ.
ಈ ಚಿತ್ತಾರ ಬಿಡಿಸುವುದು ಸಾಧಾರಣ ಕೆಲಸವಲ್ಲ. ಇದಕ್ಕೆ ಕೌಶಲ್ಯಪೂರ್ಣ ತಾಂತ್ರಿಕತೆ ಅಗತ್ಯ. ಅದಕ್ಕಾಗಿಯೇ ಕೆಲವು ಮಂದಿ ತಜ್ಞರು ದೊಡ್ಡಬಳ್ಳಾಪುರದಲ್ಲಿದ್ದಾರೆ. ಯಾವುದೇ ಅಚ್ಚು-ನಕಲು ಇಲ್ಲಿ ಬಳಸಲಾಗುವುದಿಲ್ಲ. ಸ್ವಾಭಾವಿಕವಾಗಿಯೇ ಕರಕುಶಲ ಮಾದರಿಯಾಗಿ ಈ ಚಿತ್ತಾರ ನಿರ್ಮಾಣವಾಗುತ್ತದೆ.ಬೃಹತ್ ಮೂರ್ತಿ:
ಇಲ್ಲಿನ ರಂಗಪ್ಪ ವೃತ್ತದಲ್ಲಿರುವ ಶ್ರೀಬಾಲಾಂಜನೇಯ ವ್ಯಾಯಾಮ ಶಾಲೆ ಯುವಕರ ಬಳಗದ ನೇತೃತ್ವದಲ್ಲಿ ಊರಿನ ಅತಿ ದೊಡ್ಡದು ಎನ್ನಬಹುದಾದ ಕಾಮಣ್ಣನ ಮೂರ್ತಿಯನ್ನು ಸೃಷ್ಟಿಸಿ ಪೂಜಿಸಲಾಗಿದೆ. ಈ ಸಂಪ್ರದಾಯವನ್ನು ಹಲವು ತಲೆಮಾರುಗಳ ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಕುಶಲಕರ್ಮಿ ಹಿರಿಯ ಕಲಾವಿದರು ಈ ಚಿತ್ತಾರದ ತಂತ್ರಜ್ಞರಾಗಿರುತ್ತಾರೆ. ಅವರ ಮೂಲಕ ಶಿಷ್ಯವಂದಕ್ಕೂ ಈ ಕಲೆ ಮುಂದುವರೆದಿದೆ. ಹೀಗೇ ಯುವಪಡೆ ತರಬೇತಿ ಪಡೆದುಕೊಂಡು ಸಂಸ್ಕೃತಿಯ ಮುನ್ನಡೆಗೆ ಕಂಕಣ ತೊಟ್ಟಿದೆ.ಈ ಬಾರಿ ವಿಶೇಷ:
ಭಜನೆಹಟ್ಟಿ ರಂಗಪ್ಪ ವೃತ್ತದಲ್ಲಿ ಈ ಬಾರಿಯೂ ಬೃಹತ್ ಕಾಮಣ್ಣನನ್ನು ನಿರ್ಮಿಸಲಾಗಿದೆ. ಜೊತೆಗೆ ಇಲ್ಲಿನ ಎಲೇಪೇಟೆ, ತೇರಿನಬೀದಿ, ಕೊಂಗಾಡಿಯಪ್ಪ ಕಾಲೇಜು ರಸ್ತೆ, ಅರಳುಮಲ್ಲಿಗೆ ವೃತ್ತ, ಕಚೇರಿಪಾಳ್ಯ, ಚೈತನ್ಯನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಕಾಮಣ್ಣನ ಚಿತ್ತಾರ ಬಿಡಿಸಲಾಗಿದೆ. ಈ ಚಿತ್ತಾರಗಳು ಎಲ್ಲ ವಯೋಮಾನದ ಜನರನ್ನು ಸೆಳೆದಿವೆ. ಮನೆಗಳಲ್ಲೂ ಮಕ್ಕಳು ಕಾಮಣ್ಣನ ಚಿತ್ತಾರ ಬಿಡಿಸಿ ಸಂಭ್ರಮಿಸಿದ್ದಾರೆ.10ಕೆಡಿಬಿಪಿ6-ದೊಡ್ಡಬಳ್ಳಾಪುರದ ಭಜನೆಹಟ್ಟಿ ರಂಗಪ್ಪ ವೃತ್ತದಲ್ಲಿ ನಿರ್ಮಿಸಲಾಗಿರುವ ಬೃಹತ್ ಕಾಮಣ್ಣನ ಮೂರ್ತಿ.
10ಕೆಡಿಬಿಪಿ7-ಪುಟಾಣಿ ಮಕ್ಕಳು ಮನೆಯಂಗಳದಲ್ಲಿ ಬಿಡಿಸಿ ಪೂಜಿಸಿರುವ ಕಾಮಣ್ಣನ ಮೂರ್ತಿ.