ಜೈಪುರ ಸಾಹಿತ್ಯೋತ್ಸವಕ್ಕೆ ವರ್ಣರಂಜಿತ ಆರಂಭ

| Published : Feb 02 2024, 01:04 AM IST

ಜೈಪುರ ಸಾಹಿತ್ಯೋತ್ಸವಕ್ಕೆ ವರ್ಣರಂಜಿತ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಜೈಪುರದ ಜನಪದ ವಾದ್ಯಮೇಳ, ಶಂಖನಾದ, ಗಣೇಶ ಸ್ತುತಿಯೊಂದಿಗೆ ಜೈಪುರ ಸಾಹಿತ್ಯೋತ್ಸವದ 17ನೇ ಸಂಚಿಕೆ ವರ್ಣರಂಜಿತವಾಗಿ ಆರಂಭಗೊಂಡಿತು. ಗುರುವಾರ ಬೆಳಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜಸ್ಥಾನದ ಉಪ ಮುಖ್ಯಮಂತ್ರಿ ದಿಯಾ ಕುಮಾರಿ ಭಾಗವಹಿಸಿದ್ದರು. ದೇಶವಿದೇಶಗಳಿಂದ ಬಂದಿದ್ದ ನೂರಕ್ಕೂ ಹೆಚ್ಚು ಲೇಖಕರು ಮತ್ತು ಸಾವಿರಾರು ಸಾಹಿತ್ಯಾಸಕ್ತರು ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದರು.

ಜೋಗಿ

ಕನ್ನಡಪ್ರಭ ವಾರ್ತೆ ಜೈಪುರ

‘ಜೈಪುರ ಈಗಾಗಲೇ ವಿಶ್ವ ಭೂಪಟದಲ್ಲಿ ಪಡೆದಿರುವ ಸ್ಥಾನವನ್ನು ಭದ್ರಪಡಿಸುವ ಕೆಲಸವನ್ನು ಜೈಪುರ ಸಾಹಿತ್ಯೋತ್ಸವ ಮಾಡುತ್ತಿದೆ. ನಾನು ಈ ಕಾರ್ಯಕ್ರಮದಲ್ಲಿ ಮೊದಲಿನಿಂದಲೂ ಭಾಗವಹಿಸುತ್ತಾ ಬಂದಿದ್ದೇನೆ. ಇದು ಜೈಪುರದ ಹೆಮ್ಮೆ’ ಎಂದು ರಾಜಸ್ಥಾನದ ಉಪ ಮುಖ್ಯಮಂತ್ರಿ ದಿಯಾ ಕುಮಾರಿ ಜೈಪುರ ಸಾಹಿತ್ಯೋತ್ಸವವನ್ನು ಮೆಚ್ಚಿಕೊಂಡರು. ದೀಪ ಬೆಳಗುವ ಮೂಲಕ ಉತ್ಸವವನ್ನು ಉದ್ಘಾಟಿಸಿದ ದಿಯಾ ಕುಮಾರಿ, ‘ಇದು ಜಗತ್ತನ್ನು ಜೈಪುರಕ್ಕೆ ಕರೆತರುವ ಮಹಾಹಬ್ಬ’ ಎಂದು ವರ್ಣಿಸಿದರು.‘ಕತೆಗಳು ಕತೆಗಳನ್ನು ಹೇಳುತ್ತಾ ಹೋಗುವ ಕಥಾಸರಿತ್ಸಾಗರ ಇದು’ ಎಂದು ಸಾಹಿತ್ಯೋತ್ಸವವನ್ನು ಹೊಗಳಿದ ಜೆಎಲ್‌ಎಫ್ ಸಹನಿರ್ದೇಶಕಿ ನಮಿತಾ ಗೋಖಲೆ, ‘ಈ ಸಲದ ಉತ್ಸವ ವಿಚಾರ-ವಿವಾದ, ಕವಿತೆ- ಕಲಾಪ, ಕತೆ-ಮಾತುಕತೆಯ ಸಂಗಮ ಆಗಿರಲಿದೆ. ಇದರಲ್ಲಿ ಜಗತ್ತಿನ ಅತ್ಯುತ್ತಮ ಲೇಖಕರು ಭಾಗವಹಿಸುತ್ತಿದ್ದಾರೆ. ಬಹುಭಾಷಾ ಲೇಖಕರ ಸಮಗ್ರ ಅನುಭವದ ಮೊತ್ತವಾಗಿ ಈ ಸಮ್ಮೇಳನ ಹೊರಹೊಮ್ಮಲಿದೆ’ ಎಂದು ನಮಿತಾ ಗೋಖಲೆ ಹೇಳಿದರು.ಸಾಹಿತ್ಯೋತ್ಸವದ ನಿರ್ದೇಶಕ ವಿಲಿಯಂ ಡಾರ್ಲಿಂಪಲ್, ‘ಸಾಹಿತ್ಯದಿಂದ ಹಣ ಹುಟ್ಟುವುದಿಲ್ಲ ಅನ್ನುತ್ತಾರೆ. ಆದರೆ ಜೈಪುರ ಸಾಹಿತ್ಯೋತ್ಸವ ಅದನ್ನು ಸುಳ್ಳು ಮಾಡಿದೆ. ನಮ್ಮ ಸಾಹಿತ್ಯೋತ್ಸವದಲ್ಲಿ ಕಲೆ ಮತ್ತು ಆರ್ಥಿಕತೆ ಒಟ್ಟಾಗಿದೆ. ಅನೇಕ ಉದ್ಯಮ ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳುತ್ತಿವೆ. ಕಳೆದ ಹದಿನೇಳು ವರ್ಷಗಳಲ್ಲಿ ನಾವು ತಲುಪಿರುವ ಎತ್ತರ ನಮಗೇ ಆಶ್ಚರ್ಯ ತರುತ್ತಿದೆ’ ಎಂದರು.