ಕತ್ತಲೆ ಬಡಾವಣೆಯಲ್ಲಿ ಬೆಳಕು ಹರಿಸದ ಪಾಲಿಕೆ!

| Published : Jul 30 2024, 12:42 AM IST

ಕತ್ತಲೆ ಬಡಾವಣೆಯಲ್ಲಿ ಬೆಳಕು ಹರಿಸದ ಪಾಲಿಕೆ!
Share this Article
  • FB
  • TW
  • Linkdin
  • Email

ಸಾರಾಂಶ

ನಗರದ 14ನೇ ವಾರ್ಡ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ರಾತ್ರಿಯಾದರೆ ಸಾಕು ಜನ ಆತಂಕಕ್ಕೆ ಒಳಗಾಗುತ್ತಾರೆ. ಕಾರಣವೆಂದರೆ ರಸ್ತೆಗಳ ಮೇಲೆ ಸರಿಯಾದ ಬೀದಿ ದೀಪಗಳು ಇಲ್ಲದಿರುವುದು. ಇಲ್ಲಿನ ಶಿಕಾರಖಾನೆ, ಅಂಬೇಡ್ಕರ್ ನಗರ, ಗಣೇಶ ನಗರ, ಮುಕುಂದ ನಗರಗಳಲ್ಲಿ ಸಂಜೆಯಾದರೇ ಸಾಕು ಕತ್ತಲು ಆವರಿಸುತ್ತದೆ. ಹೀಗಾಗಿ ಸಂಪೂರ್ಣ ಬಡಾವಣೆಗಳೆ ಹಲವು ವರ್ಷಗಳಿಂದ ಕಗ್ಗತ್ತಲಲ್ಲಿವೆ. ಮಹಾನಗರ ಪಾಲಿಕೆಯ 14ನೇ ವಾರ್ಡ್‌ನಲ್ಲಿರುವ ಅನಂತಲಕ್ಷ್ಮಿ ಮ್ಯಾರೆಜ್ ಹಾಲ್ ರಸ್ತೆ, ಚೌಧರಿ ಆಸ್ಪತ್ರೆ ರಸ್ತೆ, ಪಶು ವೈದ್ಯಕೀಯ ಆಸ್ಪತ್ರೆ ರಸ್ತೆಯ ಕಂಬಗಳಿಗೆ ಸುಮಾರು ವರ್ಷಗಳಿಂದ ಲೈಟ್‌ಗಳೇ ಇಲ್ಲ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ 14ನೇ ವಾರ್ಡ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ರಾತ್ರಿಯಾದರೆ ಸಾಕು ಜನ ಆತಂಕಕ್ಕೆ ಒಳಗಾಗುತ್ತಾರೆ. ಕಾರಣವೆಂದರೆ ರಸ್ತೆಗಳ ಮೇಲೆ ಸರಿಯಾದ ಬೀದಿ ದೀಪಗಳು ಇಲ್ಲದಿರುವುದು. ಇಲ್ಲಿನ ಶಿಕಾರಖಾನೆ, ಅಂಬೇಡ್ಕರ್ ನಗರ, ಗಣೇಶ ನಗರ, ಮುಕುಂದ ನಗರಗಳಲ್ಲಿ ಸಂಜೆಯಾದರೇ ಸಾಕು ಕತ್ತಲು ಆವರಿಸುತ್ತದೆ. ಹೀಗಾಗಿ ಸಂಪೂರ್ಣ ಬಡಾವಣೆಗಳೆ ಹಲವು ವರ್ಷಗಳಿಂದ ಕಗ್ಗತ್ತಲಲ್ಲಿವೆ. ಮಹಾನಗರ ಪಾಲಿಕೆಯ 14ನೇ ವಾರ್ಡ್‌ನಲ್ಲಿರುವ ಅನಂತಲಕ್ಷ್ಮಿ ಮ್ಯಾರೆಜ್ ಹಾಲ್ ರಸ್ತೆ, ಚೌಧರಿ ಆಸ್ಪತ್ರೆ ರಸ್ತೆ, ಪಶು ವೈದ್ಯಕೀಯ ಆಸ್ಪತ್ರೆ ರಸ್ತೆಯ ಕಂಬಗಳಿಗೆ ಸುಮಾರು ವರ್ಷಗಳಿಂದ ಲೈಟ್‌ಗಳೇ ಇಲ್ಲ.ಕೋಟ್ಯಂತರ ರುಪಾಯಿ ವ್ಯಯ:

ನಗರದಲ್ಲಿನ 35 ವಾರ್ಡ್‌ಗಳಲ್ಲಿ ಬೀದಿ ದೀಪ ನಿರ್ವಹಣೆಗಾಗಿಯೇ ಪ್ರತಿವರ್ಷ ಪಾಲಿಕೆ ಬಜೆಟ್‌ನಲ್ಲಿ ಕೋಟ್ಯಂತರ ರುಪಾಯಿ ಹಣ ಮೀಸಲಿಡಲಾಗುತ್ತಿದೆ. ಆದರೆ, ಪಾಲಿಕೆಯಿಂದ ಹಣ ಪಡೆಯುವ ಏಜೆನ್ಸಿಗಳು ಜನರನ್ನು ಕತ್ತಲೆಯಲ್ಲೇ ಕೂರಿಸಿ, ಬೀದಿ ದೀಪಗಳ ನಿರ್ವಹಣೆ ಹೊಣೆಯನ್ನು ಮರೆತಿವೆ. ಪಾಲಿಕೆ "ಹಣ "ತೆಯ ಬೆಳಕಿನಲ್ಲಿ ತಮ್ಮ ಮನೆ ಬೆಳಕಾಗಿಸಿಕೊಂಡಿದ್ದಾರೆ. ಈ ಬಡಾವಣೆಯ ಹಿಂಭಾಗದಲ್ಲಿ ರೇಷ್ಮೆ ಇಲಾಖೆಗೆ ಸೇರಿದ ಹಲವು ಎಕರೆ ಖಾಲಿ ಜಾಗದಲ್ಲಿ ಸಾಕಷ್ಟು ಕಸ, ಕೊಳಚೆ, ಮುಳ್ಳುಕಂಟೆಗಳು ಬೆಳೆದಿವೆ. ಸಂಜೆಯಾದರೆ ಸಾಕು ಇಲ್ಲಿಂದ ರಸ್ತೆಗಳ ಮೇಲೆ ಬರುವ ವಿಷ ಜಂತುಗಳ ಹಾವಳಿ ಹೆಚ್ಚಾಗಿದೆ. ಇದನ್ನು ಸಹ ಸ್ವಚ್ಛಗೊಳಿಸಬೇಕು. ಜೊತೆಗೆ ಈ ಬಡಾವಣೆಗಳಲ್ಲಿ ತಗ್ಗು-ಗುಂಡಿಗಳೇ ಹೆಚ್ಚಾಗಿದ್ದು, ಸಂಚಾರಕ್ಕೆ ಸರಿಯಾದ ರಸ್ತೆಗಳು ಇಲ್ಲವಾಗಿವೆ.

ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ:

ನಗರದ ವಾರ್ಡ್ ನಂ.14ರಲ್ಲಿರುವ ಶಿಕಾರಖಾನೆ ಬಳಿಯ ಹಳೆ ರೇಷ್ಮೆ ಇಲಾಖೆ ಸುತ್ತಮುತ್ತಲಿನ ಕಡೆಗೂ ಮಳೆ ನೀರು ನಿಂತುಕೊಳ್ಳುತ್ತದೆ. ಇದರಿಂದ ಡೆಂಘೀ, ಮಲೇರಿಯಾ ಸೇರಿದಂತೆ ವಿವಿಧ ರೋಗಗಳು ಹರಡುವ ಭೀತಿ ಇದೆ. ನಿತ್ಯ ಇದೇ ಮಾರ್ಗದಲ್ಲಿ ಶಾಲಾ ಮಕ್ಕಳು ಸಂಚರಿಸುವುದರಿಂದ ನಿಂತ ನೀರಲ್ಲಿ ಮಕ್ಕಳು ಬೀಳುವ ಸಂಭವವೂ ಇದೆ. ಇದೆಲ್ಲವನ್ನೂ ಪಾಲಿಕೆ ಗಮನಿಸಬೇಕಿದೆ. ಹೀಗಾಗಿ ಮೊದಲು ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಸ್ಥಳೀಯರ ಒತ್ತಾಯವಾಗಿದೆ.14ನೇ ವಾರ್ಡ್ ಸದಸ್ಯ ಜವಾಹರ್ ಗೋಸಾವಿ ಅವರು ತಮ್ಮ ವಾರ್ಡ್‌ನಲ್ಲಿ ಸಂಚರಿಸಿ ಜನರಲ್ಲಿನ ಆತಂಕವನ್ನು ದೂರ ಮಾಡಬೇಕಿದೆ. ಅಲ್ಲದೆ ನಗರದಲ್ಲಿರುವ ಹಲವು ವಾರ್ಡ್‌ಗಳಲ್ಲಿ ಈ ರೀತಿ ಬೀದಿ ದೀಪಗಳು, ಚರಂಡಿ ಸ್ವಚ್ಛತೆ, ಕಸ ವಿಲೇವಾರಿ ಸಮಸ್ಯೆಗಳು ಕಂಡು ಬರುತ್ತಲೇ ಇವೆ. ಸಮಸ್ಯೆಗಳು ಬಂದಾಗ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಆಯಾ ವಾರ್ಡ್‌ ಸದಸ್ಯರು ಸ್ಪಂದಿಸುವ ಕೆಲಸ ಮಾಡಬೇಕಿದೆ ಎಂಬುವುದು ನಾಗರಿಕರ ಆಗ್ರಹವಾಗಿದೆ.ಕಪ್ಪುಪಟ್ಟಿಗೆ ಸೇರಿಸಲು ಆಗ್ರಹ:

ನಗರದ ಹಲವು ವಾರ್ಡ್‌ಗಳಲ್ಲಿನ ಬೀದಿ ದೀಪಗಳ ನಿರ್ವಹಣೆಯ ಹೊಣೆ ಹೊತ್ತಿರುವ ಆರ್.ಕೆ.ಏಜೆನ್ಸಿಯವರಿಗೆ ಎಷ್ಟು ಹೇಳಿದರೂ ಅವರು ಸ್ಪಂದಿಸುವುದಿಲ್ಲ. ಬೀದಿ ದೀಪಗಳ ನಿರ್ವಹಣೆಗೆ ಪಾಲಿಕೆಯಿಂದ ಏಜೆನ್ಸಿಗೆ ಕೋಟ್ಯಂತರ ರುಪಾಯಿ ಅನುದಾನ ನೀಡಿದ್ದು, ನೀರಲ್ಲಿ ಹೋಮ ಮಾಡಿದಂತಾಗಿದೆ. ಸರಿಯಾಗಿ ಕೆಲಸವೇ ಮಾಡದ ಇಂತಹ ಏಜೆನ್ಸಿಯನ್ನು ತೆಗೆದುಹಾಕಬೇಕು. ಜೊತೆಗೆ ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ನಗರದ ಹಲವು ಬಡಾವಣೆಗಳ ನಿವಾಸಿಗಳ ಒತ್ತಾಯವಾಗಿದೆ.

ರಸ್ತೆ ಬದಿಯ ಕಂಬಗಳಿಗೆ ಬೀದಿ ದೀಪವೇ ಇಲ್ಲದ್ದರಿಂದ ಕಳೆದ ಹಲವು ವರ್ಷಗಳಿಂದ ನಾವೆಲ್ಲ ಕತ್ತಲೆಯಲ್ಲೇ ಓಡಾಡುತ್ತಿದ್ದೇವೆ. ಸಂಜೆ ವೇಳೆ ಮನೆಗಳಿಗೆ ವಿಷಜಂತುಗಳು ನುಗ್ಗುತ್ತಿದ್ದು, ವಿದ್ಯುತ್ ದೀಪ ಅಳವಡಿಸುವಂತೆ ವಾರ್ಡ್ ಸದಸ್ಯರಿಗೆ ಹಾಗೂ ಆರ್.ಕೆ.ಏಜನ್ಸಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಿ ಜನರಿಗೆ ಆಗುತ್ತಿರುವ ತೊಂದರೆಯನ್ನು ಬಗೆಹರಿಸಬೇಕಿದೆ.

-ಸುನೀಲ ಕಾಂಬಳೆ,
ಅಂಬೇಡ್ಕರ್ ನಗರ ನಿವಾಸಿ.

ಇದೀಗ ಮಳೆಗಾಲ ಆರಂಭವಾಗಿದ್ದರಿಂದ, ಮಳೆ-ಗಾಳಿಗೆ ವಿದ್ಯುತ್ ತಂತಿ ಹರಿದು, ಬಲ್ಬ್‌ಗಳು ಸುಟ್ಟು, ಇತ್ಯಾದಿ ಬೇರೆ ಬೇರೆ ಸಮಸ್ಯೆಗಳಿಂದಾಗಿ ಒಮ್ಮೆಲೆ ಹೆಚ್ಚಿನ ಕಡೆಗಳಲ್ಲಿ ತೊಂದರೆ ಉಂಟಾಗುತ್ತಿರುತ್ತವೆ. ಈಗಾಗಲೇ ಸಾಕಷ್ಟು ಕಡೆಗಳಲ್ಲಿ ನಿವಾಸಿಗಳಿಗೆ ಆಗಿದ್ದ ಅನಾನುಕೂಲವನ್ನು ಬಗೆಹರಿಸಲಾಗಿದೆ. ಅದರಂತೆ ತಕ್ಷಣವೇ ಆರ್.ಕೆ.ಏಜನ್ಸಿಗೆ ನಿರ್ದೇಶನ ನೀಡಿ, 14ನೇ ವಾರ್ಡ್‌ನಲ್ಲಿ ಆಗಿರುವ ಬೀದಿ ದೀಪಗಳ ಸಮಸ್ಯೆ ಬಗೆಹರಿಸಲಾಗುವುದು.

-ವಿಜಯಕುಮಾರ ಮೆಕ್ಕಳಕಿ, ಮಹಾನಗರ ಪಾಲಿಕೆ ಆಯುಕ್ತ.