ದೊಡ್ಡಬಳ್ಳಾಪುರ: ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಪರಿಷತ್ತು, ವಿಕಾಸ ಪ್ರಕಾಶ ಸಂಸ್ಥೆಗಳಿಂದ ನಿವೃತ್ತ ಉಪನ್ಯಾಸಕಿ ದಿ.ಎಸ್.ರಾಜಲಕ್ಷ್ಮಿ ಸ್ಮರಣಾರ್ಥ ಪ್ರಕಟಿಸಿರುವ ನೋಬಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್ ಸಿ.ವಿ.ರಾಮನ್ ಪುಸ್ತಕ ಬಿಡುಗಡೆ ಸಮಾರಂಭ ಕನ್ನಡ ಜಾಗೃತ ಭವನದಲ್ಲಿ ನಡೆಯಿತು.

ದೊಡ್ಡಬಳ್ಳಾಪುರ: ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾಗೃತ ಪರಿಷತ್ತು, ವಿಕಾಸ ಪ್ರಕಾಶ ಸಂಸ್ಥೆಗಳಿಂದ ನಿವೃತ್ತ ಉಪನ್ಯಾಸಕಿ ದಿ.ಎಸ್.ರಾಜಲಕ್ಷ್ಮಿ ಸ್ಮರಣಾರ್ಥ ಪ್ರಕಟಿಸಿರುವ ನೋಬಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್ ಸಿ.ವಿ.ರಾಮನ್ ಪುಸ್ತಕ ಬಿಡುಗಡೆ ಸಮಾರಂಭ ಕನ್ನಡ ಜಾಗೃತ ಭವನದಲ್ಲಿ ನಡೆಯಿತು.

ಕನ್ನಡ ಜಾಗೃತ ಪರಿಷತ್ತು ಟ್ರಸ್ಟಿ ಎಸ್.ಮಹಾಬಲೇಶ್ವರ್ ಮಾತನಾಡಿ, ಮೊಬೈಲ್ ವ್ಯಸನ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಕಸಿದುಕೊಳ್ಳುತ್ತಿದೆ. ಅತಿಯಾದ ಮೊಬೈಲ್ ಬಳಕೆ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ ಎಂದರು.

ವಿಜ್ಞಾನ ಸಾಹಿತಿ ಡಾ.ಎ.ಒ.ಆವಲಮೂರ್ತಿ ಮಾತನಾಡಿ, ಕೊಂಗಾಡಿಯಪ್ಪ ವಿದ್ಯಾಸಂಸ್ಥೆ ನಿರ್ದೇಶಕಿಯಾಗಿದ್ದ ಎಸ್.ರಾಜಲಕ್ಷ್ಮಿ ಸ್ಮರಣಾರ್ಥ ಸಿ.ವಿ.ರಾಮನ್ ಪುಸ್ತಕ ಪ್ರಕಟಿಸಲಾಗಿದೆ. ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ನಡೆಯುತ್ತಿರುವ ಕನ್ನಡ ಪುಸ್ತಕ ಓದಿ ಬಹುಮಾನ ಗೆಲ್ಲಿ ‌ಸ್ಪರ್ಧಾತ್ಮಕ ಪರೀಕ್ಷೆ ಫೆ.22ರಂದು ನಡೆಯಲಿದೆ. ದೊಡ್ಡಬಳ್ಳಾಪುರ ನಗರದ ಎಂಎಬಿಎಲ್ ಮತ್ತು ಸ್ವಾಮಿ ವಿವೇಕಾನಂದ ಪ್ರೌಢಶಾಲೆಗಳು ಪರೀಕ್ಷಾ ಕೇಂದ್ರಗಳಾಗಿವೆ. ಸ್ಪರ್ಧಾತ್ಮಕ ಪರೀಕ್ಷೆಗೆ ನೂರು ವಿದ್ಯಾರ್ಥಿಗಳನ್ನು ಪ್ರೇರಣೆ ಮಾಡಿದವರಿಗೆ ಕನ್ನಡ ಪ್ರೇರಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದರು.

ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಬಿ.ಗುರುದೇವ್ ಮಾತನಾಡಿ, ಸಿ.ವಿ.ರಾಮನ್ ಜೀವನದ ಕೊನೆಯವರೆಗೂ ಸಂಶೋಧನೆ ಮತ್ತು ಅಧ್ಯಯನದಲ್ಲಿ ನಿರತರಾಗಿ, ಶಿಸ್ತಿನ ಪ್ರತಿರೂಪವಾಗಿ ಬದುಕಿದವರು. ರಾಮನ್ ಅವರ ಜನಪ್ರಿಯ ಆವಿಷ್ಕಾರ ''''''''ರಾಮನ್ ಎಫೆಕ್ಟ್'''''''' ಪ್ರಕಟವಾದ ದಿನದ ನೆನಪಿಗಾಗಿ ಫೆ.28 ಅನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.

ಪುಸ್ತಕ ಪ್ರಕಟಣೆಯ ಪ್ರಾಯೋಜಕ ಎಸ್.ಶ್ರೀಕಾಂತ್ ಮಾತನಾಡಿ, ಕನ್ನಡ ಪುಸ್ತಕ ಓದಿ ಬಹುಮಾನ ಗೆಲ್ಲಿ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಕನ್ನಡ ಓದುವ ಹವ್ಯಾಸ ಉತ್ತೇಜಿಸುತ್ತಿರುವುದು ಶ್ಲಾಘನೀಯ ಎಂದರು.

ಪುಸ್ತಕ ಸಂಪಾದಕ ಮಂಡಲಿಯ ಸದಸ್ಯರಾದ ಪಿ.ಗೋವಿಂದರಾಜು, ಎಚ್.ಎನ್.ಪ್ರಕಾಶ್, ಡಿ.ಪುಷ್ಪವತಿ, ಸಂಚಾಲಕ ಸಿ.ವೆಂಕಟರಾಜು, ನಗರಸಭಾ ಮಾಜಿ ಸದಸ್ಯ ಜಿ.ಸತ್ಯನಾರಾಯಣ್, ನಿವೃತ್ತ ಉಪನ್ಯಾಸಕರಾದ ಎಸ್.ಇಕ್ಬಾಲ್ ಅಹಮದ್, ಜಿ.ಸತ್ಯನಾರಾಯಣ, ಕಜಾಪ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕನ್ನಡಪರ ಸಂಘಟನೆಗಳ ಮುಖಂಡರಾದ ಸಂಜೀವ್ ನಾಯಕ್, ಗುರುರಾಜಪ್ಪ, ಡಿ.ವೆಂಕಟೇಶ್, ಜಿ.ಸುರೇಶ್, ಕೋದಂಡರಾಮ್, ಸಿ.ಅಣ್ಣಯ್ಯ, ರಂಗಸ್ವಾಮಯ್ಯ, ಸೂರ್ಯನಾರಾಯಣ್, ಮುಖ್ಯಶಿಕ್ಷಕಿ ಲಕ್ಷ್ಮೀಕಾಂತಮ್ಮ, ಕರಾಟೆ ಶ್ರೀನಿವಾಸ್ ಭಾಗವಹಿಸಿದ್ದರು.

31ಕೆಡಿಬಿಪಿ2- ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಸಿ.ವಿ.ರಾಮನ್‌ ಕುರಿತ ಪುಸ್ತಕ ಬಿಡುಗಡೆ ಮಾಡಲಾಯಿತು.