ಸಂಪೂರ್ಣ ರಾಮಮಯವಾದ ಮಹಾನಗರ

| Published : Jan 21 2024, 01:31 AM IST

ಸಾರಾಂಶ

ಹುಬ್ಬಳ್ಳಿ-ಧಾರವಾಡ, ನವಲಗುಂದ, ಕುಂದಗೋಳ, ಅಣ್ಣಿಗೇರಿ, ಕಲಘಟಗಿ, ಅಳ್ನಾವರ ಸೇರಿದಂತೆ ಪ್ರಮುಖ ನಗರ, ಪಟ್ಟಣಗಳಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯ ಶುಭಾಷಯ ಕೋರುವ ಬೃಹತ್‌ ಗಾತ್ರದ ಬ್ಯಾನರ್‌, ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಸೇರಿದಂತೆ ಜಿಲ್ಲಾದ್ಯಂತ ಈಗ ಎಲ್ಲಿ ನೋಡಿದರಲ್ಲಿ ಅಯೋಧ್ಯಾಧಿಪತಿ ಶ್ರೀರಾಮಚಂದ್ರ ಪ್ರಭುವಿನ ಜಪ. ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ಶ್ರೀರಾಮ ಪ್ರತಿಷ್ಠಾಪನೆಯ ಶುಭಾಶಯಗಳ ಕೋರುವ ಬೃಹತ್‌ ಕಟೌಟ್‌ ಕಾಣಸಿಗುತ್ತಿವೆ. ಜ. 22ರಂದು ವಿವಿಧ ಸಂಘ-ಸಂಸ್ಥೆಗಳಿಂದ ನೂರಕ್ಕೂ ಅಧಿಕ ಕಡೆಗಳಲ್ಲಿ ಅನ್ನಪ್ರಸಾದದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಕಳೆದ 500 ವರ್ಷಗಳ ಹೋರಾಟದ ಫಲದಿಂದಾಗಿ ಅಯೋಧ್ಯಯಲ್ಲೀಗ ಭವ್ಯವಾದ ರಾಮಮಂದಿರ ನಿರ್ಮಾಣವಾಗಿ ಜ. 22ರಂದು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯ ಮೂಲಕ ಉದ್ಘಾಟನೆಯಾಗುತ್ತಿದೆ. ಇದನ್ನು ದೇಶಾದ್ಯಂತ ಜನತೆ ಸಂಭ್ರಮಿಸುತ್ತಿದ್ದಾರೆ. ಇದಕ್ಕೆ ಧಾರವಾಡ ಜಿಲ್ಲೆಯೂ ಹೊರತಾಗಿಲ್ಲ. ಹುಬ್ಬಳ್ಳಿ-ಧಾರವಾಡ, ನವಲಗುಂದ, ಕುಂದಗೋಳ, ಅಣ್ಣಿಗೇರಿ, ಕಲಘಟಗಿ, ಅಳ್ನಾವರ ಸೇರಿದಂತೆ ಪ್ರಮುಖ ನಗರ, ಪಟ್ಟಣಗಳಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯ ಶುಭಾಷಯ ಕೋರುವ ಬೃಹತ್‌ ಗಾತ್ರದ ಬ್ಯಾನರ್‌, ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ.

ಮನೆಮನೆಯಲ್ಲೂ ಜೈ ಶ್ರೀರಾಮ: ಮನೆ ಮನೆಯಲ್ಲೂ ಶ್ರೀರಾಮನಿಗೆ ಭಕ್ತಿ ಸಮರ್ಪಣೆ ಮಾಡಲು ಜನತೆ ಕಾತುರದಿಂದ ಕಾಯುತ್ತಿದ್ದಾರೆ. ಮಹಾನಗರದಲ್ಲಿ ಎಲ್ಲಿ ನೋಡಿದರಲ್ಲಿ ಕೇಸರಿ ಬಣ್ಣದ ಧ್ವಜಗಳನ್ನೇ ಕಾಣಬಹುದಾಗಿದೆ. ಅಲ್ಲದೇ ಮನೆಮನೆಗೂ ಕೇಸರಿ ಬಣ್ಣದ ಶ್ರೀರಾಮ, ಆಂಜನೇಯ ಭಾವಚಿತ್ರ ಹೊಂದಿದ ಧ್ವಜ ಕಟ್ಟಲಾಗಿದೆ.

ಕೇಸರೀಮಯವಾದ ವೃತ್ತಗಳು: ನಗರದ ಯಾವುದೇ ವೃತ್ತಕ್ಕೆ ತೆರಳಿದರೆ ಸಾಕು ಅಲ್ಲಿ ಕೇಸರಿ ಧ್ವಜಗಳು, ಶುಭಾಶಯ ಕೋರುವ ಬೃಹತ್‌ ಆಕಾರದ ಕಟೌಟ್‌ಗಳೇ ಕಾಣುತ್ತಿವೆ. ಹುಬ್ಬಳ್ಳಿಯ ಕೊಪ್ಪಿಕರ ರಸ್ತೆ, ಬ್ರಾಡ್‌ ವೇ, ಕಮರಿಪೇಟೆ, ಕಾಳಮ್ಮನ ಅಗಸಿ, ಮರಾಠಾ ಗಲ್ಲಿ, ಸಿಬಿಟಿ, ಗಣೇಶ ಪೇಟೆ, ದುರ್ಗದಬೈಲ್‌, ಧಾರವಾಡ ಸಿಬಿಟಿ ಸೇರಿದಂತೆ ಹಲವು ಕಡೆಗಳಲ್ಲಿ ಪ್ರಮುಖ ರಸ್ತೆಗಳು, ವೃತ್ತಗಳನ್ನು ಕೇಸರಿ ಬಣ್ಣದ ಬ್ಯಾನರ್‌ ಬಂಟಿಂಗ್ಸ್‌ಗಳಲ್ಲಿ ಕಂಗೊಳಿಸುತ್ತಿವೆ.

ರಂಗೋಲಿ, ದೀಪ ಬೆಳಗಿಸಲು ಸಿದ್ಧತೆ: ಮನೆಮನೆಯ ಮುಂದೆ ಬಣ್ಣಬಣ್ಣದ ರಂಗೋಲಿ ಬಿಡಿಸುವುದು. ದೀಪ ಬೆಳಗಿಸುವ ಮೂಲಕ ಶ್ರೀರಾಮನಿಗೆ ಭಕ್ತಿ ಸಮರ್ಪಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. 2-3 ದಿನಗಳಿಂದ ನಗರದಲ್ಲಿ ಎಲ್ಲಿ ನೋಡಿದರಲ್ಲಿ ದ್ವಿಚಕ್ರ, ತ್ರಿಚಕ್ರ, ಕಾರು, ಖಾಸಗಿ ಬಸ್‌, ಟೆಂಪೋ ಸೇರಿದಂತೆ ಯಾವುದೇ ವಾಹನ ನೋಡಿದರೆ ಸಾಕು ಮುಂಭಾಗದಲ್ಲಿ ಶ್ರೀರಾಮನ ಇಲ್ಲವೇ ಆಂಜನೇಯನ ಬಾವುಟ ಕಂಡುಬರುತ್ತಿದೆ.

ಬಾಡಿಗೆಗೆ ಸಿಗದ ಎಲ್‌ಇಡಿ ಪರದೆ: ಜ. 22ರಂದೇ ಎಲ್ಲೆಡೆಯೂ ರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನಾ ಕಾರ್ಯದ ನೇರವೀಕ್ಷಣೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಹುಬ್ಬಳ್ಳಿ-ಧಾರವಾಡದಲ್ಲಿಯೇ 100ಕ್ಕೂ ಅಧಿಕ ಕಡೆಗಳಲ್ಲಿ ಎಲ್ಲೆಡೆ ಎಲ್‌ಇಡಿ ಪರದೆ, ಟಿವಿ ವೀಕ್ಷಣೆಗೆ ಅವಕಾಶ ಕಲ್ಪಿಸಿರುವುದರಿಂದ ಬಾಡಿಗೆಗೆ ಎಲ್‌ಇಡಿ ಪರದೆ ಸಿಗದೇ ಪರದಾಡುವಂತಾಯಿತು. ಯಾವುದೇ ಅಂಗಡಿಗೆ ಹೋಗಿ ಕೇಳಿದರೂ ಎಲ್ಲ ಎಲ್‌ಇಡಿ ಪರದೆಗಳು ಬುಕ್‌ ಆಗಿವೆ ಎನ್ನುವ ಉತ್ತರ ಬರುತ್ತಿದೆ. ನವಲಗುಂದದಲ್ಲಿ ಎಲ್‌ಇಡಿ ಪರದೆಯ ವೀಕ್ಷಣೆಗೆ ಅವಕಾಶ ಕಲ್ಪಿಸಲು ಬಾಡಿಗೆ ಎಲ್‌ಇಡಿ ಪರದೆ ಬುಕ್‌ ಮಾಡಲು ಬಂದಿದ್ದೆ. ಆದರೆ, ಎಲ್ಲಿಯೂ ಸಿಗುತ್ತಿಲ್ಲ ಎಂದು ಹರ್ಷಕುಮಾರ ಕಟ್ಟಿಮನಿ ಎಂಬುವವರು ತಿಳಿಸಿದರು.

ವಿಶೇಷ ಕಾರ್ಯಕ್ರಮಗಳಿಗೆ ಸಿದ್ಧತೆ: ನೂರಾರು ದೇವಸ್ಥಾನಗಳಲ್ಲಿ ವಿವಿಧ ಸಂಘಟನೆಗಳು ವಿಶೇಷ ಪೂಜೆ, ಹೋಮ, ಹವನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿವೆ. ಅಮರಗೋಳದ ಎಪಿಎಂಸಿಯಲ್ಲಿ ಆಹಾರ ಧಾನ್ಯ ವರ್ತಕರ ಸಂಘ, ಹುಬ್ಬಳ್ಳಿಯ ಬಾಣಿ ಓಣಿಯ ಶ್ರೀರಾಮ ನವಮಿ ಉತ್ಸವ ಸಮಿತಿ, ವಿಶ್ವ ಹಿಂದೂ ಪರಿಷತ್‌, ಹಳೇ ಕಿಲ್ಲಾ ಓಣಿಯ ಕೃಷ್ಣೇಂದ್ರ ಗುರು ಉತ್ಸವ ಸಂಸ್ಥೆ, ಕಲಾ ಸುಜಯ ಸಂಸ್ಥೆ, ಬ್ರಾಡ್‌ವೇ ದುರ್ಗದಬೈಲ್‌ ವರ್ತಕರ ಸಂಘ ಸೇರಿದಂತೆ ಹಲವು ಸಂಘಟನೆಗಳಿಂದ ವಿಶೇಷ ಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ, ಎಲ್‌ಇಡಿ ಪರದೆಯ ವೀಕ್ಷಣೆಯ ವ್ಯವಸ್ಥೆ ಮಾಡಲಾಗಿದೆ. ಬಾಣಿ ಓಣಿಯಲ್ಲಿ 6 ಸಾವಿರ ಲಾಡು ವಿತರಣೆ, ಕರಸೇವಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಬ್ರಾಹ್ಮಣ ಸೇವಾ ಸಂಘದಿಂದ ನವನಗರದಲ್ಲಿರುವ ಶ್ರೀರಾಮ ಮಂದಿರದ ಕಳಸಾರೋಹಣ ಕಾರ್ಯಕ್ರಮವನ್ನು ಜ. 22ರಂದೇ ಹಮ್ಮಿಕೊಂಡಿರುವುದು ವಿಶೇಷ. ಜ. 21ರಂದು ಬೆಳಗ್ಗೆ 10.30ಕ್ಕೆ ಶ್ರೀರಾಮ ಸೇನೆಯಿಂದ ದಾಜಿಬಾನ ಪೇಟೆಯಲ್ಲಿರುವ ತುಳಜಾಭವಾನಿ ದೇವಸ್ಥಾನದಿಂದ ಗೌ‍ಳಿಗಲ್ಲಿಯ ಶ್ರೀರಾಮ ಮಂದಿರದ ವರೆಗೆ ದೀಡನಮಸ್ಕಾರ ಹಾಕಲಾಗುತ್ತಿದೆ.