ಜಿಲ್ಲೆಯ ಕೆರೆಗಳ ತುಂಬಿಸಲು ಸಮಗ್ರ ಯೋಜನೆ: ಎಸ್ಸೆಸ್ಸೆಂ

| Published : Sep 23 2024, 01:21 AM IST

ಸಾರಾಂಶ

ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಸಮಗ್ರ ನೀರಾವರಿ ಯೋಜನೆ ರೂಪಿಸಿ, ಬರ ಎದುರಾದರೂ 2-3 ವರ್ಷ ನೀರಿಗೆ ತೊಂದರೆ ಆಗದಂತೆ ಅಂತರ್ಜಲ ವೃದ್ಧಿಸಲು ಒತ್ತು ನೀಡಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭರವಸೆ ನೀಡಿದರು.

- ಸಚಿವರ 57ನೇ ಜನ್ಮದಿನ, ಲೋಕಸಭಾ ಚುನಾವಣೆ ಗೆಲ್ಲಿಸಿದ ಮತದಾರರು, ಕಾರ್ಯಕರ್ತರಿಗೆ ಕೃತಜ್ಞತೆ ಸಮಾರಂಭ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಸಮಗ್ರ ನೀರಾವರಿ ಯೋಜನೆ ರೂಪಿಸಿ, ಬರ ಎದುರಾದರೂ 2-3 ವರ್ಷ ನೀರಿಗೆ ತೊಂದರೆ ಆಗದಂತೆ ಅಂತರ್ಜಲ ವೃದ್ಧಿಸಲು ಒತ್ತು ನೀಡಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭರವಸೆ ನೀಡಿದರು.

ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಭಾನುವಾರ ತಮ್ಮ 57ನೇ ಜನ್ಮದಿನ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ನೀಡಿ ಗೆಲ್ಲಿಸಿದ ಮತದಾರರು, ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದರು. ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಸಮಗ್ರ ಯೋಜನೆಗಾಗಿ ಈಗಾಗಲೇ ತಾವು, ಕೆ.ಎಸ್‌. ಬಸವಂತಪ್ಪ ಸೇರಿದಂತೆ ಶಾಸಕರು ಡಿಸಿಎಂ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಬಳಿ ಮಾತನಾಡಿದ್ದೇವೆ ಎಂದರು.

ಡಿ.ಕೆ.ಶಿವಕುಮಾರ ಬಳಿ ಚರ್ಚೆ:

ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಸಮಗ್ರ ಯೋಜನೆ ಬಗ್ಗೆ ಡಿ.ಕೆ.ಶಿವಕುಮಾರ ಬಳಿ ಮಾತನಾಡಿದ್ದೇವೆ. ಸಮಗ್ರ ಯೋಜನೆಯಡಿ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಿ, ನೀರಾವರಿಗೆ ಅನುಕೂಲ ಮಾಡಲಾಗುವುದು. ಒಂದು ಕೆರೆ ಕೋಡಿ ಬಿದ್ದಿತೆಂದರೆ 2-3 ವರ್ಷದ ಕಾಲ ಆ ಗ್ರಾಮ, ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲಕ್ಕೆ ಸಮಸ್ಯೆಯಾಗದು. ಹಾಗಾಗಿ, ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಿ, ಬರ ಪರಿಸ್ಥಿತಿ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಬಹುದು ಎಂದು ತಿಳಿಸಿದರು.

ಪಾಲಿಕೆಗೆ ಹಣ ಉಳಿತಾಯ:

ಕುಂದುವಾಡ ಕೆರೆ ಆಯ್ತು, ಮುಂದೇನು ಎಂಬುದಾಗಿ ತಮ್ಮ ಪತ್ನಿ, ಸಂಸದೆ ಡಾ.ಪ್ರಭಾ ಮನೆಯಲ್ಲಿ ಕೇಳುತ್ತಾರೆ. ಆದರೆ, ನಾನು ಏನು ಅಂತಾ ಎಂದಿಗೂ ಹೇಳಿರಲಿಲ್ಲ. ಆದರೆ, 1999, 2001 ಹಾಗೂ 2002ರಲ್ಲಿ ಮಾಡಿದ್ದಂತಹ ಅಭಿವೃದ್ಧಿ ಈಗ ಆಗಿಲ್ಲವೆಂಬ ಅರಿವಿದೆ. ಆದರೆ, ಅಂದು ನಾವು ಮಾಡಿದ್ದ ಸಿಸಿ ರಸ್ತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿದ್ದರಿಂದ ಮಹಾ ನಗರ ಪಾಲಿಕೆಗೆ ಎಷ್ಟು ಹಣ ಉಳಿಸಿದ್ದೇವೆಂಬುದು ಗೊತ್ತಿದೆ. ಇವತ್ತು ಪಾಲಿಕೆಗೆ ಎಷ್ಟು ದುಡ್ಡು ಉಳಿಯುತ್ತಿದೆ ಎಂಬುದು ಪಾಲಿಕೆಗೆ ಮತ್ತು ನನಗೆ ಮಾತ್ರ ಗೊತ್ತು ಎಂದು ಹೇಳಿದರು.

ನಮ್ಮ ಅಭಿವೃದ್ಧಿ ನೋಡಿಯೇ ಸ್ಮಾರ್ಟ್‌ ಸಿಟಿ ಯೋಜನೆ ಕೊಟ್ಟಿದ್ದು:

ಒಂದುವೇಳೆ ನಾವು ಈ ಹಿಂದೆ ಮಹಾನಗರದಲ್ಲಿ ಸಿಸಿ ರಸ್ತೆ, ಚರಂಡಿ, ಒಳಚರಂಡಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸದೇ ಇದ್ದಿದ್ದರೆ, ಇಂದು ಪಾಲಿಕೆ ಸದಸ್ಯರು ಹೀಗೆ ವೇದಿಕೆ ಮೇಲೆ ನಿಶ್ಚಿಂತ ಕೂಡುವುದಕ್ಕೂ ಆಗುತ್ತಿರಲಿಲ್ಲ. ಪಾಲಿಕೆ ಆದಾಯವೂ ಅಷ್ಟಕ್ಕಷ್ಟೇ ಇದೆ. ನಿರ್ವಹಣೆ ದುಡ್ಡು ಉಳಿದು, ಕೆಲಸ ಕಾರ್ಯ ಸುಸೂತ್ರವಾಗಿ ಆಗುತ್ತಿವೆ. ಬಿಟ್ಟಿರುವ ಕೆಲಸಗಳ ಬಗ್ಗೆಯೂ ನನಗೆ ಅರಿವಿದೆ. ಮುಂದಿನ ದಿನಗಳಲ್ಲಿ ಶಾಶ್ವತ ಕೆಲಸ ಮಾಡುತ್ತೇವೆ. ಈ ಹಿಂದೆ ನಾವು ಕೈಗೊಂಡಿದ್ದ ಕೆಲಸಗಳನ್ನು ನೋಡಿಯೇ ಕೇಂದ್ರದವರು ಸ್ಮಾರ್ಟ್‌ ಸಿಟಿ ಯೋಜನೆಯನ್ನು ದಾವಣಗೆರೆಗೆ ಕೊಟ್ಟಿದ್ದರು ಎಂದು ಸಚಿವರು ವಿವರಿಸಿದರು.

ಕುಂದುವಾಡ ಕೆರೆ ಕಾಮಗಾರಿ ಕಳಪೆ:

ಸ್ಮಾರ್ಟ್‌ ಸಿಟಿಯಲ್ಲೂ ಅಂತಹ ಹೇಳಿಕೊಳ್ಳುವ ಕೆಲಸಗಳಾಗಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ಅವರವರ ಕಾಲೇಜು ಮುಂದೆ ಮಾಡಿಕೊಂಡಿರಬಹುದು. ಕುಂದುವಾಡ ಕೆರೆಗೆ ₹14ರಿಂದ ₹15 ಕೋಟಿ ಖರ್ಚು ಮಾಡಿದ್ದಾರೆ. ಆದರೆ, ಅಲ್ಲಿ ಏನು ಕೆಲಸ ಆಗಿದೆ? ಬರೀ ಕಳಪೆ ಕೆಲಸ. ನಮ್ಮ ಕೆಲಸ ಹಾಗೆಲ್ಲಾ ಆಗುವುದಕ್ಕೆ ಬಿಡುವುದಿಲ್ಲ. ರೈತರಿಗೆ ಅನುಕೂಲ ಆಗಬೇಕು. ರೈತರ ಬೆಳೆಗೆ ಬೆಲೆ ಸಿಗಬೇಕು. ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರಿಗೆ ವ್ಯಾಪಾರ ಆಗಬೇಕು. ಸೂರಿಲ್ಲದವರಿಗೆ ಸೂರು ಸಿಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡುತ್ತೇವೆ ಎಂದು ಮಲ್ಲಿಕಾರ್ಜುನ ಸ್ಪಷ್ಟಪಡಿಸಿದರು.

ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮಾಜಿ ಸಚಿವ ಎಚ್.ಆಂಜನೇಯ, ಶಾಸಕರಾದ ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್‌, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಮಾಜಿ ಶಾಸಕರಾದ ಎಸ್.ರಾಮಪ್ಪ, ಟಿ.ಗುರುಸಿದ್ದನ ಗೌಡ, ಬಂಜಾರ ನಿಗಮದ ಅಧ್ಯಕ್ಷ ಜಯದೇವ ನಾಯ್ಕ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮುದೇಗೌಡರ ಗಿರೀಶ, ಜಿ.ಷಣ್ಮುಖಪ್ಪ, ಪಾಲಿಕೆ ಸದಸ್ಯರಾದ ಕೆ.ಚಮನ್ ಸಾಬ್‌, ಜಿ.ಎಸ್. ಮಂಜುನಾಥ ಗಡಿಗುಡಾಳ, ಅಬ್ದುಲ್ ಲತೀಫ್, ಡಿ.ಬಸವರಾಜ, ಅನಿತಾ ಬಾಯಿ ಮಾಲತೇಶ, ಪ್ರಕಾಶ ಪಾಟೀಲ, ಸುರಭಿ ಎಸ್.ಶಿವಮೂರ್ತಿ, ಮಾಗಾನಹಳ್ಳಿ ಬಿ.ಕೆ.ಪರಶುರಾಮ, ಅಯೂಬ್ ಪೈಲ್ವಾನ್, ಸೋಗಿ ಶಾಂತಕುಮಾರ, ಕೆ.ಜಿ.ಶಿವಕುಮಾರ, ಶ್ರೀನಿವಾಸ ನಂದಿಗಾವಿ, ಬೂದಾಳ ಬಾಬು, ಶ್ರೀಕಾಂತ ಬಗರೆ, ಹದಡಿ ಜಿ.ಸಿ.ನಿಂಗಪ್ಪ, ಹುಲ್ಮನಿ ಗಣೇಶ ಇತರರು ಇದ್ದರು.

- - - -22ಕೆಡಿವಿಜಿ4, 5:

ದಾವಣಗೆರೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ 57ನೇ ಜನ್ಮದಿನ ಸಮಾರಂಭವನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಉದ್ಘಾಟಿಸಿದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಇತರರು ಇದ್ದರು. -22ಕೆಡಿವಿಜಿ6, 7, 8:

ದಾವಣಗೆರೆಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರ 57ನೇ ಜನ್ಮದಿನ ಸಮಾರಂಭದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು. -22ಕೆಡಿವಿಜಿ9, 10:

ದಾವಣಗೆರೆಯಲ್ಲಿ 57ನೇ ಜನ್ಮದಿನ ಸಮಾರಂಭದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಗಂಭೀರ ಚರ್ಚೆಯಲ್ಲಿ ತೊಡಗಿರುವುದು. -22ಕೆಡಿವಿಜಿ11:

ದಾವಣಗೆರೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ 57ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿದರು.