ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕೊಡಗು ವಿಶ್ವವಿದ್ಯಾಲಯದ ಅವಶ್ಯಕತೆ ಹಾಗೂ ಅನಿವಾರ್ಯತೆಯ ಬಗ್ಗೆ ಸಮಗ್ರ ವರದಿಯೊಂದನ್ನು ವಿವಿ ಕುಲಪತಿ ಪ್ರೊ. ಅಶೋಕ್ ಸಂಗಪ್ಪ ಆಲೂರ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ವರದಿಯ ಬಗ್ಗೆ ಈ ಸಾಲಿನ ಬಜೆಟ್ ಅಧಿವೇಶನದಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.ವಿಶ್ವವಿದ್ಯಾಲಯ ಅನಿವಾರ್ಯ: ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗು ಜಿಲ್ಲೆ, ಗಿರಿಜನರ ಹೊಂದಿದ ಜಿಲ್ಲೆಯಾಗಿದ್ದು ಜನರಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅಭಿವೃದ್ಧಿಯ ಮುಖ್ಯ ವಾಹಿನಿಗೆ ಜೋಡಿಸಲು ವಿಶ್ವವಿದ್ಯಾಲಯ ಅನಿವಾರ್ಯವಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಉನ್ನತ ಶಿಕ್ಷಣ ನೀಡುವ ಖಾಸಗಿ ವಿದ್ಯಾಲಯಗಳ ಸಂಖ್ಯೆ ಕೂಡ ಅತಿ ಕಡಿಮೆ ಇದೆ. ಜಿಲ್ಲೆಯಲ್ಲಿ ಇದುವರೆಗೂ ಎಂ ಬಿಎ, ಎಂ ಸಿ ಎ, ಕಾನೂನು ಪದವಿ ಹಾಗೂ ದೈಹಿಕ ಶಿಕ್ಷಣ ನೀಡುವ ಸಂಸ್ಥೆಗಳು ಕೂಡ ಇಲ್ಲದಿರುವ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.ಕೊಡಗು ಜಿಲ್ಲೆಯ ಗ್ರಾಸ್ ಎನ್ರೋಲ್ಮೆಂಟ್ ರೇಷಿಯೋ ಶೇಕಡ 15 ರಿಂದ 18ರ ಒಳಗಡೆ ಇರುವುದು ಕೂಡ ಕಳವಳಕಾರಿ ಸಂಗತಿಯಾಗಿದ್ದು ರಾಜ್ಯದ ಸರಾಸರಿ ಗ್ರಾಸ್ ಎನ್ರೋಲ್ ಮೆಂಟಲ್ ರೇಶಿಯೋ ಪ್ರಮಾಣ ಶೇಕಡ 10 ರಿಂದ 15 ಅತ್ಯಂತ ಕಡಿಮೆ ಇರುವ ಬಗ್ಗೆ ವರದಿಯಲ್ಲಿ ಕುಲಪತಿಗಳು ಪ್ರಸ್ತಾಪಿಸಿದ್ದಾರೆ.
ಪ್ರಮುಖ ಜಿಲ್ಲೆ: ಕೊಡಗು ಜಿಲ್ಲೆ ರಾಜ್ಯದ ಆದಾಯಕ್ಕೆ ಶೇಕಡ ಹತ್ತರಷ್ಟು ಸಂಪನ್ಮೂಲ ಕ್ರೋಢೀಕರಣ ಮಾಡಿಕೊಳ್ಳುತ್ತಿರುವ ಪ್ರಮುಖ ಜಿಲ್ಲೆಯಾಗಿದ್ದು ದೇಶದ ರಕ್ಷಣಾ ಮತ್ತು ಕ್ರೀಡಾ ಕ್ಷೇತ್ರವು ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಕೂಡ ಅಪಾರ ಕೊಡುಗೆಯನ್ನು ನೀಡುತ್ತಿದೆ. ಆದರೆ ಉನ್ನತ ಶಿಕ್ಷಣದಲ್ಲಿ ಮಾತ್ರ ಹಿಂದುಳಿದಿದೆ.ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಸುಮಾರು 200 km ದೂರದ ಮಂಗಳೂರು ವಿವಿ 150 ಕಿ.ಮೀ ದೂರದ ಮೈಸೂರು ವಿವಿಗಳಲ್ಲಿ ಉನ್ನತ ಶಿಕ್ಷಣ ಪಡೆಯಬೇಕಾದ ಅನಿವಾರ್ಯತೆ ಇದ್ದ ಕಾರಣದಿಂದ ಜಿಲ್ಲೆಯ ಉನ್ನತ ಶಿಕ್ಷಣದ ವಾರ್ಷಿಕ ನೋಂದಣಿ ಅನುಪಾತ ಹಿಂದುಳಿಯಲು ಪ್ರಮುಖ ಕಾರಣ ಎನ್ನುವುದು ಶಿಕ್ಷಣ ತಜ್ಞರ ವಾದವಾಗಿದೆ
ಈ ಎಲ್ಲಾ ಹಿನ್ನೆಲೆಯಲ್ಲಿ ಕೊಡಗು ವಿಶ್ವವಿದ್ಯಾಲಯ ಮುಖೇನ , ಮೊದಲ ತಲೆಮಾರಿನ ಸ್ನಾತಕ ಮತ್ತು ಸ್ನಾತಕೋತ್ತರ ಪದವೀಧರರ ಒಂದು ದೊಡ್ಡ ಸಮೂಹ ಸೃಷ್ಟಿಸುವ ಸುವರ್ಣ ಅವಕಾಶವನ್ನು ಹೊಂದಿದೆ ಎಂದು ಕೊಡಗು ವಿಶ್ವವಿದ್ಯಾಲಯ ಎರಡು ವರ್ಷಗಳ ಕಾಲ ಸಾಧಿಸಿದ ಪ್ರಗತಿಯ ಪಕ್ಷಿ ನೋಟವನ್ನು ವರದಿಯಲ್ಲಿ ನೀಡಿದ್ದಾರೆ.ರಾಜ್ಯ ಉನ್ನತ ಶಿಕ್ಷಣ ಸಚಿವರು ಉಪಮುಖ್ಯಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ಕೊಡಗು ಕುಲಪತಿ ಪ್ರೊ ಅಶೋಕ ಸಂಗಪ್ಪ ಆಲೂರು ತಿಳಿಸಿದ್ದಾರೆ.