ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಮಲಪ್ರಭಾ ನದಿಗೆ ಮಹದಾಯಿ ನದಿ ನೀರು ಜೋಡಣೆ ಯೋಜನೆಯನ್ನು ರಾಜಕಾರಣಿಗಳು ಜೀವಂತವಾಗಿಟ್ಟಿದ್ದು, ಸುಮಾರು ನಾಲ್ಕು ದಶಕಗಳ ಮಹದಾಯಿ ಹೋರಾಟಕ್ಕೆ ಇದೀಗ ತಾರ್ಕಿಕ ಅಂತ್ಯ ಒದಗಿಸಲು ಮಹದಾಯಿಗಾಗಿ ಮಹಾವೇದಿಕೆ ದೆಹಲಿ ಮಾದರಿಯಲ್ಲಿ ಹೋರಾಟಕ್ಕೆ ಅಣಿಯಾಗಿದೆ.ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಾಲ್ಕು ಜಿಲ್ಲೆಗಳ ಒಂಭತ್ತು ತಾಲೂಕುಗಳ ಹೋರಾಟಗಾರರು ಮಂಗಳವಾರ ಸಭೆ ಸೇರಿ ನಡೆಸಿದ ಚಿಂತನಾ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡರು. ಲೋಕಸಭಾ ಚುನಾವಣಾ ಘೋಷಣೆಗೂ ಮುಂಚೆ ಮಹದಾಯಿ ಯೋಜನೆಗೆ ಚಾಲನೆ ದೊರೆಯಬೇಕು. ಒಂದು ವೇಳೆ ದೊರೆಯದೇ ಇದ್ದಲ್ಲಿ ಮೊದಲನೆಯದಾಗಿ ಹು-ಧಾ ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಅಮ್ಮಿನಬಾವಿಯಲ್ಲಿರುವ ಮಲಪ್ರಭಾ ನೀರಿನ ಜಾಕ್‌ವೆಲ್ ಬಂದ್ ಮಾಡಲು ತೀರ್ಮಾನಿಸಿರುವುದಾಗಿ ವೇದಿಕೆ ಮುಖ್ಯಸ್ಥ ಶಂಕರ ಅಂಬಲಿ ಘೋಷಿಸಿದರು.
ಚುನಾವಣೆ ಬಹಿಷ್ಕಾರಹು-ಧಾ ಅವಳಿ ನಗರಕ್ಕೆ ಕುಡಿಯುವ ನೀರು ಒದಗಿಸುವದೇ ಮಹದಾಯಿ ಯೋಜನೆ ಪ್ರಮುಖ ಉದ್ದೇಶ. ಅದಕ್ಕಾಗಿ ರೈತರು ಹೋರಾಟ ಮಾಡುತ್ತಿದ್ದು, ಅವಳಿ ನಗರದ ಜನತೆಯಿಂದ ಹೋರಾಟಕ್ಕೆ ಸ್ಪಂದನೆಯೇ ಇಲ್ಲವಾಗಿದೆ. ಅವಳಿ ನಗರದ ಜನತೆ ಹೋರಾಟಕ್ಕೆ ಸ್ಪಂದನೆ ನೀಡಿದರೆ, ನಮ್ಮ ಹೋರಾಟಕ್ಕೆ ಕೈ ಜೋಡಿಸಿದರೆ ಮಾತ್ರ ಜಾಕ್‌ವೆಲ್ ಬಂದ್ ಮಾಡುವ ತೀರ್ಮಾನದಿಂದ ಹೊರ ಬರಲಾಗುವುದು. ಮುಂದಿನ ಭಾಗವಾಗಿ ಲೋಕಸಭಾ ಚುನಾವಣೆಯಲ್ಲಿ ಮತದಾನದಿಂದ ಬಹಿಷ್ಕಾರ, ಅಸಹಕಾರ ಚಳವಳಿ, ತೆರಿಗೆ ತುಂಬದಿರುವುದು ಸೇರಿದಂತೆ ದೆಹಲಿ ಮಾದರಿಯಲ್ಲಿ ಹೋರಾಟ ಮಾಡುವುದಾಗಿ ಅಂಬಲಿ ಹೋರಾಟಗಾರರ ನಿರ್ಧಾರವನ್ನು ಪ್ರಕಟಸಿದರು. ಜೊತೆಗೆ ಯಾವುದೇ ಕಾರಣಕ್ಕೂ ರೈತರ, ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿದರೂ, ಜೈಲಿಗೆ ಕಳುಹಿಸಿದರೂ ಜಗ್ಗದೇ ದೆಹಲಿ ಮಾದರಿಯಲ್ಲಿ ಹೋರಾಟ ಮಾಡುವುದಾಗಿ ಹೋರಾಟಗಾರರು ಸಭೆಯಲ್ಲಿ ತೀರ್ಮಾನ ಕೈಗೊಂಡರು.
ಇದಕ್ಕೂ ಮುಂಚೆ ನಡೆದ ಸಭೆಯಲ್ಲಿ ಮಾತನಾಡಿದ ಹೋರಾಟಗಾರ ಬಸವರಾಜ ಸಾಬಳೆ, ಕೇಂದ್ರದಲ್ಲಿ ಮಾತ್ರವಲ್ಲದೇ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದಲ್ಲೂ ಬಿಜೆಪಿ ಆಡಳಿತ ಇದ್ದಾಗಲೂ ಕುಡಿಯುವ ನೀರಿನ ಮಹಾದಾಯಿ ಯೋಜನೆ ಜಾರಿಗೆ ತರದೇ ಇರುವುದು ಈ ಭಾಗದ ಜನರ ದುರಂತ. ರಾಜಕಾರಣಿಗಳು ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ. ಕಳೆದ ಚುನಾವಣೆ ಸಮಯದಲ್ಲಿ ಗೆಜೆಟ್ ನೋಟಿಫಿಕೇಶನ್ ಆಗಿದೆ ಎಂದು ಇದೇ ಬಿಜೆಪಿ ಮುಖಂಡರು ಸಿಹಿ ಹಂಚಿ ವಿಜಯೋತ್ಸವ ಮಾಡಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮನೆ ಎದುರು ಹೋರಾಟ ನಡೆಸಿದಾಗ ಒಂದು ತಿಂಗಳಲ್ಲಿ ಪರಿಸರ ಇಲಾಖೆಯಿಂದ ಪರವಾನಗಿ ಕೊಡಿಸುವುದಾಗಿ ಭರವಸೆ ನೀಡಿದರು. ಆರು ತಿಂಗಳಾದರೂ ಯೋಜನೆ ಜಾರಿಗೆ ಬರುತ್ತಿಲ್ಲ. ಟೆಂಡರ್ ಕರೆಯುತ್ತಿಲ್ಲ. ಹೀಗಾಗಿ, ನಾವು ಎಚ್ಚೆತ್ತುಕೊಂಡು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದು ಎಚ್ಚರಿಸಿದರು.ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ರಾಜಕಾರಣಿಗಳು ರೈತರನ್ನು ಹಾಗೂ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಸಾಮಾನ್ಯ ಜನರು ರೊಚ್ಚಿಗೆದ್ದರೆ ಏನಾದೀತು ಎಂಬುದನ್ನು ರಾಜಕಾರಣಿಗಳಿ ಅರಿಯಬೇಕು. ಹೋರಾಟಕ್ಕೆ ತಮ್ಮ ಬೆಂಬಲ ಇದೆ ಎಂದರು.
ಮತ್ತೊಬ್ಬ ಹೋರಾಟಗಾರ ಲೋಕನಾಥ ಹೆಬಸೂರ ಮಾತನಾಡಿ, ಮಹದಾಯಿಗಾಗಿ ಏನೆಲ್ಲಾ ಹೋರಾಟ ಮಾಡಿದ್ವಿ. ರೈತರ ಮೇಲೆ 57 ಪ್ರಕರಣ ದಾಖಲಿಸಿದರು. ಲಾಠಿ ಚಾರ್ಜ್ ಮಾಡಿದರು. ಜೈಲುವಾಸ ಸಹ ಅನುಭವಿಸಲಾಯಿತು. ಮಹದಾಯಿ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರೀ ಸುಳ್ಳಿನ ಮಾಲೆಯನ್ನು ಹಾಕಿದ್ದಾರೆಯೇ ಹೊರತು ಪ್ರಾಮಾಣಿಕವಾಗಿ ಕೆಲಸ ಮಾಡಿಲ್ಲ. ಹಸಿರು ಟಾವೆಲ್ ಹಾಕಿ ಶಾಸಕರು, ಮಂತ್ರಿಗಳಾದರು. ಸ್ವಾರ್ಥಕ್ಕಾಗಿ ಯೋಜನೆ ಬಳಸಿಕೊಂಡು ಈಗ ಮತ್ತೊಂದು ಚುನಾವಣೆಗೆ ಮತ ಕೇಳಲು ಬರುತ್ತಿದ್ದಾರೆ. ಅವರಿಗೆ ನಮ್ಮೂರುಗಳಲ್ಲಿ ಬರದಂತೆ, ಭಾಷಣ ಮಾಡಿ ಮತ ಕೇಳುವುದನ್ನು ತಡೆಯುವ ನಿಟ್ಟಿನಲ್ಲಿ ಹೋರಾಟ ಗಟ್ಟಿಗೊಳಿಸಬೇಕು ಎಂಬ ಸಲಹೆ ನೀಡಿದರು.ಚಿಂತಕ ಲಕ್ಷ್ಮಣ ಬಕ್ಕಾಯಿ ಮಾತನಾಡಿ, ಈ ಯೋಜನೆ ವಿಚಾರವಾಗಿ ನಾಲ್ಕು ಜಿಲ್ಲೆಗಳ ಮತದಾರರು ಚುನಾವಣಾ ಬಹಿಷ್ಕಾರ ಹಾಕಬೇಕು. ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಜಾಕ್‌ವೆಲ್ ಬಂದ್ ಮಾಡಬೇಕು. ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಜಿಎಸ್‌ಟಿ ಹಾಗೂ ತೆರಿಗೆ ಕಟ್ಟುವಂತಿಲ್ಲ ಮತ್ತು ಅಸಹಕಾರ ಚಳವಳಿ ಮೂಲಕ ಹೋರಾಟವನ್ನು ಗಟ್ಟಿಗೊಳಿಸಬೇಕು ಎಂದರು.
ಸಭೆಯಲ್ಲಿ ಶಿವಾನಂದ ಪಾಟೀಲ, ಶಂಕರಗೌಡ ಹಾಗೂ ನರಗುಂದ, ನವಲಗುಂದ, ಬೆಳಗಾವಿ ರೈತ ಮುಖಂಡರು ಆಗಮಿಸಿದ್ದರು. ರಾಮದುರ್ಗ ಕೃಷ್ಣಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.