ಮಹಿಳಾ ಸಾಹಿತಿಗಳಿಗೆ ಅವಕಾಶ ನೀಡುವುದಕ್ಕಾಗಿ ಸಮ್ಮೇಳನ

| Published : Dec 29 2023, 01:31 AM IST

ಸಾರಾಂಶ

ಮಹಿಳಾ ಸಾಹಿತಿಗಳಿಗೆ ಅವಕಾಶ ನೀಡುವುದಕ್ಕಾಗಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅವರು ಸಮ್ಮೇಳನದ ಸರ್ವಾಧ್ಯಕ್ಷರಿಗೆ ಆಹ್ವಾನ ನೀಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಜಯಪುರ: ಮಹಿಳಾ ಸಾಹಿತ್ಯ ಸಮ್ಮೇಳನ ಸಮಸ್ತ ಮಹಿಳಾ ಸಾಹಿತಿಗಳಿಗೆ ಅವಕಾಶ ನೀಡುವುದಕ್ಕಾಗಿ ಆಯೋಜಿಸಲಾಗಿದ್ದು, ಸಮಾಜದಲ್ಲಿ ಮಹಿಳೆಗೆ ಅನೇಕ ಸಮಸ್ಯೆಗಳಿದ್ದು, ಅವುಗಳ ಮೇಲೆ ಬೆಳಕು ಚೆಲ್ಲುವ ಹಾಗು ಪರಿಹಾರ ಕಂಡುಕೊಳ್ಳುವ ಮುಕ್ತ ಅವಕಾಶ ನೀಡುತ್ತಿರುವುದು ಈ ಸಮ್ಮೇಳನದ ವಿಶೇಷ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ನಗರದ ಖಾಸಗಿ ಹೋಟೆಲ್‌ ಸಭಾಂಗಣದಲ್ಲಿ ನಡೆದ ಜಿಲ್ಲಾ ಎರಡನೇ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಹ್ವಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಜಿಲ್ಲೆಯ ಹಿರಿಯ ಸಾಹಿತಿ, ಲೇಖಕಿ, ಮಹಿಳಾಪರ ಚಿಂತಕಿ, ಕವಿಯತ್ರಿ, ವಿಮರ್ಶಕಿ ಹಾಗೂ ಕಸಾಪ ಮಾಜಿ ಜಿಲ್ಲಾಧ್ಯಕ್ಷೆ ಭಾರತಿ ಪಾಟೀಲ ಅವರನ್ನು ಜಿಲ್ಲಾ ಕಸಾಪ ಕಾರ್ಯಕಾರಣಿ ಸಮಿತಿ ಒಮ್ಮತದಿಂದ ಆಯ್ಕೆ ಮಾಡಲಾಗಿದೆ ಎಂದರು.

ಆಹ್ವಾನ ಸ್ವೀಕರಿಸಿದ ಭಾರತಿ ಪಾಟೀಲ ಮಾತನಾಡಿ, ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದು ನನ್ನ ಸೌಭಾಗ್ಯ. ಇದು ಜಿಲ್ಲೆಯ ಎಲ್ಲ ಮಹಿಳಾ ಸಂಕಲನ ನೀಡಿದ ಗೌರವ ಎಂದು ಭಾವಿಸುತ್ತೇನೆ. ಮಹಿಳೆಯರಲ್ಲಿನ ಕಲೆ, ಸಾಹಿತ್ಯ, ಸೃಜನಶೀಲತೆಗೆ ನೀಡಿದ ಗೌರವ ಈ ಅವಕಾಶವಾಗಿದೆ ಎಂದರು.

ಡಾ.ಸಂಗಮೇಶ ಮೇತ್ರಿ, ಡಾ.ಆನಂದ ಕುಲಕರ್ಣಿ, ಅನ್ನಪೂರ್ಣ ಬೆಳ್ಳೆನವರ, ಅಭಿಷೇಕ ಚಕ್ರವರ್ತಿ, ಸುಭಾಷ ಕನ್ನೂರ, ರವಿ ಕಿತ್ತೂರ, ವಿದ್ಯಾವತಿ ಅಂಕಲಗಿ. ಕೆ.ಎಫ್‌ ಅಂಕಲಗಿ, ಮಹಮ್ಮದ ಗೌಸ ಹವಾಲ್ದಾರ, ಕಮಲಾ ಮುರಾಳ, ವಿಜಯಲಕ್ಮೀ ಹಳಕಟ್ಟಿ, ಶಿಲ್ಪಾ ಹಂಜಿ, ಶಿಲ್ಪಾ ಬಸ್ಮೆ, ನಾಗರಾಜ ಬಿರಾದಾರ, ಅಣ್ಣುಗೌಡ ಬಿರಾದಾರ, ಅಹಮ್ಮದ ವಾಲಿಕಾರ, ಕೆ.ಎಸ್ ಪಾಟೀಲ, ದಾದಾಗೌಡ ಪಾಟೀಲ, ರಾಜು ಅಂಗಡಿ ಮುಂತಾದವರು ಇದ್ದರು.