ಸಾರಾಂಶ
ಹರಪನಹಳ್ಳಿ: ತಾಲೂಕಿನಲ್ಲಿ ಪ್ರಸ್ತುತ ನಡೆಯುತ್ತಿರುವ ಸೊಸೈಟಿ ಚುನಾವಣೆಗಳಲ್ಲಿ ಒಗ್ಗಟ್ಟಿನಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಕರೆ ನೀಡಿದ್ದಾರೆ.
ಪಟ್ಟಣದ ಕಾಶಿ ಬಡಾವಣೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸಹಕಾರ ಸಂಘಗಳ ಚುನಾವಣೆ ನಿಮಿತ್ತ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಮಾಜಿಕ ನ್ಯಾಯದಡಿ ಗುಂಪುಗಳನ್ನು ರಚಿಸಿ ಸ್ಥಳೀಯ ವಿದ್ಯಮಾನಗಳನ್ನು ನಮಗೆ ತಿಳಿಸಿ ಎಂದ ಅವರು, ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಎಂದು ಹೇಳಿದರು.ತಳಮಟ್ಟದಿಂದ ಪಕ್ಷ ಕಟ್ಟಬೇಕು, ಪಕ್ಷನಿಷ್ಠೆ ಹೊಂದಿರುವ ಹಾಗೂ ಸೊಸೈಟಿಗಳ ಅಭಿವೃದ್ಧಿಗೆ ಶ್ರಮಿಸುವ ವ್ಯಕ್ತಿ ನಿಲ್ಲಿಸಿ ಗೆಲ್ಲಿಸಿ ಎಂದು ಸಲಹೆ ನೀಡಿದರು.
ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ನಾಯಕತ್ವ ರೂಪಿಸಿಕೊಳ್ಳಲು ಸೊಸೈಟಿ ಚುನಾವಣೆಗಳು ಪೂರಕವಾಗಿದ್ದು, ರೈತರ ಜೀವನಾಡಿಯಾದ ಸೊಸೈಟಿಗಳಲ್ಲಿ ಕೆಲಸ ಮಾಡುವುದು ಖುಷಿ ವಿಚಾರ ಎಂದು ಹೇಳಿದರು.ಪಕ್ಷದ ಹಿರಿಯ ಮುಖಂಡ ಪಿ. ಮಹಾಬಲೇಶ್ವರಗೌಡ ಮಾತನಾಡಿ, ಪಕ್ಷ ಮುಖ್ಯ ಹೊರತು ವ್ಯಕ್ತಿ ಅಲ್ಲ. ಸಹಕಾರ ಸಂಘಗಳ ಬೆಳೆಸುವ ಭಾವನೆ ನಮಗಿರಬೇಕು ಎಂದು ಹೇಳಿದರು.
ಮುಖಂಡರಾದ ವೈ.ಕೆ.ಬಿ. ದುರುಗಪ್ಪ, ಅಬ್ದುಲ್ ರಹಿಮಾನ್, ಟಿ. ವೆಂಕಟೇಶ, ಎಂ. ಜಾವೇದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ, ಚಿಗಟೇರಿ ವಿಜಯಕುಮಾರ ಮಾತನಾಡಿದರು.ಪುರಸಭಾ ಅಧ್ಯಕ್ಷೆ ಫಾತೀಮಾಬಿ, ಉಪಾಧ್ಯಕ್ಷ ಕೊಟ್ರೇಶ, ಸದಸ್ಯರಾದ ಗೊಂಗಡಿ ನಾಗರಾಜ, ಲಾಟಿದಾದಾಪೀರ, ಹರಪನಹಳ್ಳಿ ಸೊಸೈಟಿ ಅಧ್ಯಕ್ಷ ದಂಡಿನ ಹರೀಶ, ಹುಲ್ಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ನಾಮ ನಿರ್ದೇಶಿತ ಸದಸ್ಯೆ ಸುಮಾ, ಮುಖಂಡರಾದ ಬಿ.ಬಿ. ಹೊಸೂರಪ್ಪ, ಹೇಮಂತಪ್ಪ, ಹಲುವಾಗಲು ವನಜಾಕ್ಷಮ್ಮ, ಗಾಯತ್ರಮ್ಮ, ಟಿ.ಎಚ್.ಎಂ. ಮಂಜುನಾಥ, ಉಮಾ, ಎಲ್. ಹನುಮಂತಪ್ಪ, ಸೈಯದ್ ಇರ್ಫಾನ್, ಎಲ್. ಮಂಜನಾಯ್ಕ, ಎನ್. ಶಂಕರ ಉಪಸ್ಥಿತರಿದ್ದರು.