ದಾವಣಗೆರೆಯಲ್ಲಿ ಸೌಹಾರ್ದತೆ ಹಾಳುಗೆಡವಲು ಪ್ರಯತ್ನ ನಡೆದಿದ್ದು, ಕೆಲ ವ್ಯಕ್ತಿಗಳು ಬೆದರಿಕೆ ಹಾಕುತ್ತಿರುವುದು, ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳ ನಡವಳಿಕೆ ಬಗ್ಗೆ ರಾಜ್ಯಮಟ್ಟದ ಸ್ವತಂತ್ರ, ನಿಷ್ಪಕ್ಷಪಾತ ತನಿಖೆ ಕೈಗೊಳ್ಳುವಂತೆ ಜಿಮ್ ತರಬೇತುದಾರ ಮೊಮೀನ್ ಶೋಯಬ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆಯಲ್ಲಿ ಸೌಹಾರ್ದತೆ ಹಾಳುಗೆಡವಲು ಪ್ರಯತ್ನ ನಡೆದಿದ್ದು, ಕೆಲ ವ್ಯಕ್ತಿಗಳು ಬೆದರಿಕೆ ಹಾಕುತ್ತಿರುವುದು, ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳ ನಡವಳಿಕೆ ಬಗ್ಗೆ ರಾಜ್ಯಮಟ್ಟದ ಸ್ವತಂತ್ರ, ನಿಷ್ಪಕ್ಷಪಾತ ತನಿಖೆ ಕೈಗೊಳ್ಳುವಂತೆ ಜಿಮ್ ತರಬೇತುದಾರ ಮೊಮೀನ್ ಶೋಯಬ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮತನಾಡಿ, ತಮ್ಮ ವಿರುದ್ಧ ಕೆಲ ವ್ಯಕ್ತಿಗಳು ಅಪಪ್ರಚಾರ ಮಾಡುತ್ತ, ತನ್ನ ಜಿಮ್ ಹೆಸರನ್ನು ಪ್ರಸ್ತಾಪಿಸುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಮುಕ್ತಾಯವಾದ ಹಳೆ ಪ್ರಕರಣವನ್ನು ಪುನಾ ಸಾರ್ವಜನಿಕವಾಗಿ ಚರ್ಚಿಸುತ್ತಿದ್ದು, ಇದರಿಂದ ಗೌರವ, ಜೀವನಾಧಾಕ ಹಾಗೂ ವೈಯಕ್ತಿಕ ಸುರಕ್ಷೆಗೂ ಧಕ್ಕೆಯಾಗುತ್ತದೆ ಎಂದರು.
ಶ್ರೀರಾಮ ಸೇನೆಯ ಅಧ್ಯಕ್ಷ ಮಣಿ ಹಾಗೂ ಹಿಂಜಾವೇ ಪ್ರಾಂತ ಸಂಚಾಲಕ ಸತೀಶ ಪೂಜಾರಿ ಮಾಧ್ಯಮಗಳ ಮುಂದೆ ತಮ್ಮ ಬಗ್ಗೆ ಹೇಳಿಕೆ ನೀಡಿದ್ದು ಆಂತಕ ಮೂಡಿಸಿದೆ. ಶಿವು ಪೂಜಾರಿ ಎಂಬ ವ್ಯಕ್ತಿ ಮೂಲಕ ಮಣಿ ನನಗೆ ಕರೆ ಮಾಡಿಸಿ, ಸೆಟ್ಲ್‌ಮೆಂಟ್‌ಗೆ ಕರೆದಿದ್ದು, ಜಿಮ್ ನಡೆಸದಂತೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಮೊಬೈಲ್ ಕಾಲ್ ಡೀಟೇಲ್ಸ್ ಹಾಗೂ ಧ್ವನಿದಾಖಲೆಗಳನ್ನು ತನಿಖೆಗೆ ಒಳಪಡಿಸಿದರೆ ಅದೆಲ್ಲವನ್ನೂ ನೀಡಲು ತಾವು ಸಿದ್ಧ ಎಂದು ಹೇಳಿದರು.ಹಿಂದೆ 2025ರ ಫೆ.15ರಂದು ಕಾನೂನು ಪ್ರಕ್ರಿಯೆಗೆ ತಾವು ಒಳಪಡಿಸಿದ್ದು, ನಂತರ ಮಹಿಳೆಯೊಬ್ಬರಿಂದ ಬಂದ ಸಂದೇಶಗಳನ್ನು ವೈಯಕ್ತಿಕ ದೂಷಣೆಗೆ ಬಳಸದೆ, ಕೋಮು ವಿಷಯವಾಗಿ ಪರಿವರ್ತಿಸುವ ಕೆಲಸವಾಗುತ್ತಿದೆ. ಯಾವುದೇ ಲಿಖಿತ ನೋಟಿಸ್ ನೀಡದೇ ಪೊಲೀಸರು ತನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ರಾತ್ರಿಯಿಡೀ ದಾಖಲೆಯೇ ಇಲ್ಲದೇ ಕೂಡಿಟ್ಟಿದ್ದರು. ಮಾರನೆಯ ದಿನ ವೈದ್ಯಕೀಯ ಪರೀಕ್ಷೆ ಮಾಡಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆಗ ನ್ಯಾಯಾಧೀಶಕರೇ ಪೊಲೀಸರಿಗೆ ತರಾಟೆಗೆ ತೆಗೆದುಕೊಂಡು, ಸ್ಥಳದಲ್ಲೇ ನನ್ನನ್ನು ಬಿಡುಗಡೆ ಮಾಡಿ ಕಳಿಸಿದ್ದರು ಎಂದು ತಿಳಿಸಿದರು.
ಅಲ್ಲದೆ 2025ರ ಮಾ.18ರಂದು ಕೆಟಿಜೆ ನಗರ ಠಾಣೆಗೆ ನನ್ನನ್ನು ಕರೆದೊಯ್ದು, ದೈಹಿಕ, ಮಾನಸಿಕ ಹಿಂಸೆ ನೀಡಿದ್ದರು. ಆಗಿನ ವೃತ್ತ ನಿರೀಕ್ಷಕ ಸುನಿಲಕುಮಾರ ಪ್ರಕರಣ ದಾಖಲಿಸದೇ ಇರಲು 2.5 ಲಕ್ಷ ರು.ಗೆ ಬೇಡಿಕೆ ಇಟ್ಟಿದ್ದರು. ಕಡೆಗೆ ತಮ್ಮ ಸಂಬಂಧಿಗಳು, ಸಮಾಜದ ಮುಖಂಡರು 1.80 ಲಕ್ಷ ರು. ಹೊಂದಿಸಿ, ಠಾಣೆಯ ದಪೇದಾರ್ ಸತೀಶ್ ಬಾಬು ರೆಡ್ಡಿಗೆ ಹಣ ನೀಡಿದ್ದರು. ಈ ಬಗ್ಗೆ ಸಿಸಿ ಟಿವಿ ದೃಶ್ಯಗಳು, ಕಾಲ್ ದಾಖಲೆಗಳ ಆಧರಿಸಿ, ತನಿಖೆ ಮಾಡಲಿ. ಪೊಲೀಸ್ ಇಲಾಖೆ ಅಧಿಕಾರಿಗಳ ಪಾತ್ರದ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.ಮಹಮ್ಮದ್ ಫಾರೂಕ್, ಸಾದತ್ ಶೋಯಬ್, ಸಲ್ಮಾನ್ ಖಾನ್, ಸುಹಾನ್ ಖಾನ್ ಇತರರು ಇದ್ದರು.