ಮಹಾನ್ ಪುರುಷರ ತ್ಯಾಗ, ಬಲಿದಾನದಿಂದ ಹಿಂದೂ ಧರ್ಮ ಬಲಿಷ್ಠವಾಗಿ ನೆಲೆಯೂರಿದೆ. ಮುಂದೆಯೂ ಒಗ್ಗಟ್ಟು ಅನಿವಾರ್ಯ.
ಹಳಿಯಾಳ: ಹಿಂದೂಗಳಲ್ಲಿ ಮೂಡುತ್ತಿರುವ ಒಗ್ಗಟ್ಟಿನಿಂದ ದೇಶದ್ರೋಹಿ ಹಾಗೂ ಹಿಂದೂ ವಿರೋಧಿ ಶಕ್ತಿಗಳು ಕಂಗೆಟ್ಟಿವೆ. ನಮ್ಮಲ್ಲಿ ಒಡಕು ಮೂಡಿಸಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರಗಳು ನಡೆಯುತ್ತಿವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಸಿದರು.
ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ಭಾನುವಾರ ರಾತ್ರಿ ಶ್ರೀ ಶಿವ ಪ್ರತಿಷ್ಠಾನ ಹಿಂದೂಸ್ತಾನ ವತಿಯಿಂದ ನವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ಬೃಹತ್ ಹಿಂದೂ ಸಮಾವೇಶ ಹಾಗೂ ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹಿಂದೂ ಸಮಾಜದಲ್ಲಿ ಒಗ್ಗಟ್ಟು ಮೂಡುತ್ತಿದ್ದು, ಹಿಂದೂ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದೆ. ಇದನ್ನು ಸಹಿಸಿಕೊಳ್ಳದ ಕೆಲವರು ಹತಾಶರಾಗಿದ್ದಾರೆ ಎಂದು ಖಾರವಾಗಿ ನುಡಿದರು.
ಕೆಲವು ವರ್ಷಗಳ ಹಿಂದೆ ಹಿಂದೂಗಳಿಗೆ ತಮ್ಮ ಹಬ್ಬ ಹರಿದಿನಗಳನ್ನು ಆಚರಿಸಲು ಹಾಗೂ ಕೇಸರಿ ಶಾಲು ಧರಿಸಲು ಹಿಂಜರಿಯುವಂಥ ಪರಿಸ್ಥಿತಿ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಇಂದು ಜಾತಿ, ಪಂಗಡ ಎಂಬ ಭೇದವಿಲ್ಲದೆ ವಸುಧೈವ ಕುಟುಂಬಕಂ ತತ್ವದಡಿ ಎಲ್ಲರೂ ಒಂದಾಗುತ್ತಿದ್ದಾರೆ ಎಂದರು.ನಮ್ಮ ಧರ್ಮ, ಸಂಸ್ಕೃತಿ, ಆಚಾರ ವಿಚಾರಗಳಿಗೆ ಧಕ್ಕೆ ಬಂದಾಗ ಜಾತಿ ಭೇದ ಮರೆತು ಧರ್ಮಯುದ್ಧಕ್ಕೆ ಸಜ್ಜಾಗಬೇಕು ಎಂದ ಅವರು, ಮಹಾನ್ ಪುರುಷರ ತ್ಯಾಗ, ಬಲಿದಾನದಿಂದ ಹಿಂದೂ ಧರ್ಮ ಬಲಿಷ್ಠವಾಗಿ ನೆಲೆಯೂರಿದೆ. ಮುಂದೆಯೂ ಒಗ್ಗಟ್ಟು ಅನಿವಾರ್ಯ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೆ.ಕೆ. ಹಳ್ಳಿ ನಿತ್ಯಾನಂದಾಶ್ರಮದ ಸುಬ್ರಹ್ಮಣ್ಯ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆದು ಹಿಂದೂ ಧರ್ಮ ರಕ್ಷಣೆಗೆ ಬದ್ಧರಾಗಬೇಕು ಎಂದರು.ಬಿಜೆಪಿ ಯುವ ಮುಖಂಡ ನಾಗರಾಜ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಮುರ್ಕವಾಡ ಸೇರಿದಂತೆ ತಾಲೂಕಿನೆಲ್ಲೆಡೆ ನವರಾತ್ರಿಯ ದುರ್ಗಾ ದೌಡ್ ಮೂಲಕ ಧರ್ಮ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ಯುವಕ- ಯುವತಿಯರು ಧರ್ಮ ರಕ್ಷಣೆಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಪ್ರಮುಖರಾದ ಪೂಜಾ ರಾಜು ಧೂಳಿ, ಶಿವ ಪ್ರತಿಷ್ಠಾನದ ಜಿಲ್ಲಾ ಪ್ರಮುಖ ಏಕನಾಥ ಇಂಗೋಳೆ, ಗ್ರಾಮ ದೈವ ಸಮಿತಿ ಅಧ್ಯಕ್ಷ ಮಾರುತಿ ಗುತ್ತೇನ್ನವರ, ಶಿವಾಜಿ ಗೌಡ ಸೇರಿದಂತೆ ಪ್ರಮುಖರು ಹಾಗೂ ಸಾವಿರಾರು ಜನರು ಪಾಲ್ಗೊಂಡಿದ್ದರು. ಅನಿಲ್ ಕೊಟಗಿ ಕಾರ್ಯಕ್ರಮ ನಿರ್ವಹಿಸಿದರು.