ಸಿವಿಲ್‌ ಗುತ್ತಿಗೆದಾರನಿಗೆ ಟೀ ಕುಡಿಯಲು ಮನೆಗೆ ಕರೆದು ‘ಹನಿ ಟ್ರ್ಯಾಪ್‌’ ಖೆಡ್ಡಾಕ್ಕೆ ಕೆಡವಿ ಬಳಿಕ ನಗದು ಹಾಗೂ ಚಿನ್ನಾಭರಣ ಸುಲಿಗೆ ಮಾಡಿದ್ದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಸಿವಿಲ್‌ ಗುತ್ತಿಗೆದಾರನಿಗೆ ಟೀ ಕುಡಿಯಲು ಮನೆಗೆ ಕರೆದು ‘ಹನಿ ಟ್ರ್ಯಾಪ್‌’ ಖೆಡ್ಡಾಕ್ಕೆ ಕೆಡವಿ ಬಳಿಕ ನಗದು ಹಾಗೂ ಚಿನ್ನಾಭರಣ ಸುಲಿಗೆ ಮಾಡಿದ್ದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತುಂಗಾನಗರದ ಸಂತೋಷ್‌ (28), ಅಜಯ್‌(25) ಮತ್ತು ಜಯರಾಜ್‌(30) ಬಂಧಿತರು. ಆರೋಪಿಗಳು ಡಿ.9ರಂದು ಮಾಗಡಿ ರಸ್ತೆ ತುಂಗಾನಗರದ ಮನೆಯೊಂದರಲ್ಲಿ ರಂಗನಾಥ (57) ಎಂಬುವವರನ್ನು ಬೆದರಿಸಿ ನಗದು ಹಾಗೂ ಚಿನ್ನಾಭರಣ ಸುಲಿಗೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ನಯನಾ ಎಂಬ ಮಹಿಳೆ ಸೇರಿ ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ದೂರುದಾರ ರಂಗನಾಥ ಸಿವಿಲ್‌ ಗುತ್ತಿಗೆದಾರರಾಗಿದ್ದು, ಕಳೆದ 6 ತಿಂಗಳ ಹಿಂದೆ ಶಿವು ಎಂಬ ಸ್ನೇಹಿತನ ಮುಖಾಂತರ ನಯನಾ ಎಂಬ ಮಹಿಳೆಯ ಪರಿಚಯವಾಗಿದೆ. ಬಳಿಕ ಈ ನಯನಾ ತನ್ನ ಮಗುವಿಗೆ ಹುಷಾರಿಲ್ಲ, ಆಸ್ಪತ್ರೆಗೆ ತೋರಿಸಬೇಕು ಎಂದು ರಂಗನಾಥ ಬಳಿ ಫೋನ್‌ ಪೇ ಮುಖಾಂತರ ಎರಡು ಬಾರಿ 5000 ರು. ಮತ್ತು ಮತ್ತೊಮ್ಮೆ 4000 ರು. ಹಣ ಪಡೆದಿದ್ದಾಳೆ. ಬಳಿಕ ರಂಗನಾಥಗೆ ಕರೆ ಮಾಡಿ ಮನೆಗೆ ಬನ್ನಿ ಎಂದು ಹಲವಾರು ಬಾರಿ ಕರೆದರೂ ಆಕೆಯ ಮನೆಗೆ ಹೋಗಿರಲಿಲ್ಲ. ಈ ನಡುವೆ ರಂಗನಾಥ ಅವರು ನೆಲಗದರನಹಳ್ಳಿಯಲ್ಲಿ ಇರುವ ಅಳಿಯನ ಮನೆ ನವೀಕರಣ ಕೆಲಸ ಕೈಗೆತ್ತಿಕೊಂಡಿದ್ದರಿಂದ ಡಿ.9ರಂದು ಬೆಳಗ್ಗೆ ಮಾಗಡಿ ರಸ್ತೆಯ ತುಂಗಾನಗರದ ಮಾರ್ಗವಾಗಿ ನೆಲಗದರನಹಳ್ಳಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೊಗಿದ್ದರು.

ಬಟ್ಟೆ ಬಚ್ಚಿಸಿ ಫೋಟೋ ಸೆರೆ:

ತುಂಗಾನಗರ ಕ್ರಾಸ್‌ನಲ್ಲಿ ಬಳಿ ದ್ವಿಚಕ್ರ ವಾಹನದಲ್ಲಿ ಹಿಂದಿನಿಂದ ಬಂದ ನಯನಾ, ನಮ್ಮ ಮನೆ ಇಲ್ಲೇ ಹತ್ತಿರದಲ್ಲಿದ್ದು, ಟೀ ಕುಡಿದು ಹೋಗಿ ಎಂದು ರಂಗನಾಥ್ ಅವರನ್ನು ಆಹ್ವಾನಿಸಿದ್ದಳು. ಇದಕ್ಕೆ ಒಪ್ಪಿದ ರಂಗನಾಥ ಆಕೆಯ ಮನೆಗೆ ತೆರಳಿ ಮಾತುಕತೆಯಲ್ಲಿ ತೊಡಗಿದ್ದಾರೆ. ಈ ವೇಳೆ ಏಕಾಏಕಿ ನುಗ್ಗಿದ ಮೂವರು ಅಪರಿಚಿತರು ತಮ್ಮನ್ನು ಕ್ರೈಂ ಪೊಲೀಸರೆಂದು ನಂಬಿಸಿದ್ದು, ನೀವು ಮನೆಯಲ್ಲಿ ವ್ಯಭಿಚಾರ ಮಾಡುತ್ತಿದ್ದೀರಾ? ಎಂದುರಂಗನಾಥ್‌ನ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ರಂಗನಾಥ್‌ನ ಬಟ್ಟೆ ಬಚ್ಚಿಸಿ ಮೊಬೈಲ್‌ನಲ್ಲಿ ಫೋಟೋ ತೆಗೆದಿದ್ದಾರೆ. 2 ಲಕ್ಷ ರು. ಹಣ ಕೊಟ್ಟರೆ ಇಲ್ಲೇ ಬಿಟ್ಟು ಹೋಗುತ್ತೇವೆ. ಇಲ್ಲವಾದರೆ, ನೀನು ಇವಳೊಂದಿಗೆ ಅಕ್ರಮ ಸಂಬಂಧ ಹೊಂದಿರುವೆ ಎಂದು ನಿನ್ನ ಹೆಂಡತಿ ಮತ್ತು ಮಕ್ಕಳಿಗೆ ತಿಳಿಸುತ್ತೇವೆ ಎಂದು ಹೆದರಿಸಿದ್ದಾರೆ.

ಹಣ, ಚಿನ್ನಾಭರಣ ಸುಲಿಗೆ

ರಂಗನಾಥ ಅವರ ಕೊರಳಲ್ಲಿದ್ದ ಚಿನ್ನದ ಸರ, ಜೇಬಿನಲ್ಲಿದ್ದ 29 ಸಾವಿರ ರು. ನಗದು ಹಾಗೂ ಮೊಬೈಲ್‌ ಕಸಿದುಕೊಂಡು ಹೊರಗೆ ಹೋಗಿದ್ದಾರೆ. ಬಳಿಕ ಮತ್ತೊಬ್ಬ ವಾಪಾಸ್‌ ಬಂದು ರಂಗನಾಥ ಅವರ ಕೈಯಲ್ಲಿದ್ದ ಎರಡು ಚಿನ್ನದ ಉಂಗುರ ಕಿತ್ತುಕೊಂಡಿದ್ದಾನೆ. ಬಳಿಕ ಮತ್ತೊಬ್ಬ ಮೊಬೈಲ್‌ ಫೋನ್‌ ಪೇ ಮುಖಾಂತರ 26 ಸಾವಿರ ರು. ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಬಳಿಕ ಅಪರಿಚಿತರು ಆಟೋ ಹತ್ತಿ ಪರಾರಿಯಾಗಿದ್ದಾರೆ.

ದೂರು ಕೊಟ್ಟರೆ ಮಗು ಜತೆ ಮನೆಗೆ ಬರುವೆನೆಂದು ಬೆದರಿಕೆ:

ಅಪರಿಚಿತರು ಪರಾರಿಯಾದ ಆಟೋವನ್ನು ನಯನಾ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ್ದಾಳೆ. ಕೆಲ ಹೊತ್ತಿನ ಬಳಿಕ ರಂಗನಾಥ್‌ ಮೊಬೈಲ್‌ಗೆ ನಯನಾ ಕರೆ ಮಾಡಿದಾಗ, ಘಟನೆ ಸಂಬಂಧ ಪೊಲೀಸ್‌ ಠಾಣೆಗೆ ದೂರು ನೀಡೋಣ ಬಾ ಎಂದು ರಂಗನಾಥ್‌ ಕರೆದಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ, ನನ್ನ ಮಗುವನ್ನು ನಿನ್ನ ಮನೆಗೆ ಕರೆತಂದು ನನಗೂ ನಿನಗೂ ಸಂಬಂಧವಿದೆ ಎಂದು ಹೇಳುವುದಾಗಿ ನಯನಾ ಹೆದರಿಸಿದ್ದಾಳೆ. ಇದರಿಂದ ಭಯಗೊಂಡ ರಂಗನಾಥ ಮನೆಗೆ ತೆರಳಿದ್ದಾರೆ. ಬಳಿಕ ವಕೀಲರೊಂದಿಗೆ ಚರ್ಚಿಸಿ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.