ರಸ್ತೆ ಅಗೆದು ಅರ್ಧಕ್ಕೆ ಬಿಟ್ಟುಹೋದ ಗುತ್ತಿಗೆದಾರ

| Published : Jun 16 2024, 01:54 AM IST

ಸಾರಾಂಶ

ಗುಳೇದಗುಡ್ಡ ಪಟ್ಟಣದ ಡಿವಿಜನ್ ನಂ.4 ಮತ್ತು 5ರ ಮಧ್ಯದಲ್ಲಿ ಬರುವ ಪ್ರಮುಖ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಅಧಕ್ಕೆ ನಿಂತಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ಸಿ.ಎಂ. ಜೋಶಿ

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಒಂದುವರೆ ವರ್ಷದ ಹಿಂದೆ ರಸ್ತೆ ಕಾಮಗಾರಿಗೆ ಟೆಂಡರ್ ಆಗಿದ್ದರೂ ಕಾಮಗಾರಿ ಆರಂಭ ವಿಳಂಬವಾಗಿತ್ತು. ಕಾಮಗಾರಿ ಆರಂಭವಾಗುವುದೇ ತಡವಾಗಿತ್ತು. ಆದರೆ, ರಸ್ತೆಯನ್ನು ಅಗೆದ ಗುತ್ತಿದಾರರು ಅರ್ಧಕ್ಕೆ ಬಿಟ್ಟು ಹೋಗಿದ್ದರಿಂದ ವಾಹನ ಸವಾರರು, ಶಾಲೆಗೆ ಹೋಗುವ ಶಾಲಾ ಮಕ್ಕಳು ಪ್ರತಿನಿತ್ಯ ಪರದಾಡುವಂತಾಗಿದೆ.ನಗರೋತ್ಥಾನ ಯೋಜನೆಯಡಿ ಪಟ್ಟಣದ ಡಿವಿಜನ್ ನಂ.4 ಮತ್ತು 5ರ ಮಧ್ಯದಲ್ಲಿ ಬರುವ ಪ್ರಮುಖ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಟೆಂಡರ್ ಆಗಿತ್ತು. ಟೆಂಡರ್‌ ಆಗಿ ಹಲವು ತಿಂಗಳಾದರೂ ಕಾಮಗಾರಿ ಆರಂಭವಾಗದ್ದರಿಂದ ಸಾರ್ವಜನಿಕರು ಮತ್ತು ವಾರ್ಡ್‌ ಸದಸ್ಯರ ಒತ್ತಾಯಕ್ಕೆ ಕೆಲ ತಿಂಗಳ ಹಿಂದೆ ಕಾಮಗಾರಿ ಪ್ರಾರಂಭಿಸಲಾಗಿತ್ತು. ಕಾಂಕ್ರೀಟ್ ರಸ್ತೆ ನಿರ್ಮಿಸಲು ಇದ್ದ ರಸ್ತೆಯನ್ನು ಅರ್ಧಕ್ಕೆ ಬಿಡಲಾಗಿದೆ. ಎರಡು ತಿಂಗಳಾದರೂ ಕಾಮಗಾರಿ ಆರಂಭದ ಸುಳಿವು ಇಲ್ಲ. ಇದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಹಾಗೂ ಸಾರ್ವಜನಿಕರ ಸಂಚಾರಕ್ಕೂ ತೀವ್ರ ಅಡಚಣೆಯಾಗಿದೆ.

ಸದ್ಯ ಮಳೆಗಾಲ ಆಗಿರುವುದರಿಂದ ಮಳೆ ಆಗಿ ರಸ್ತೆ ಮೇಲೆ ನೀರು ತುಂಬಿ ಹರಿಯುತ್ತಿರುವಾಗ ಬೈಕ್ ಸವಾರರು, ವೃದ್ಧರು, ಶಾಲಾ ಮಕ್ಕಳು ತಗ್ಗಿನಲ್ಲಿ ಕಾಲಿಟ್ಟು ಪೆಟ್ಟು ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಇದರಿಂದ ಸಾರ್ವಜನಿಕರು ಪುರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಎರಡು ತಿಂಗಳ ಹಿಂದೆ ರಸ್ತೆ ಕಾಮಗಾರಿ ಆರಂಭವಾದಾಗ ಕಾಮಗಾರಿ ಕಳಪೆಯಾಗಿದೆ ಎಂದು ವಾರ್ಡ್‌ ನಿವಾಸಿಗಳು ಗುತ್ತಿಗೆದಾರರಿಗೆ ತರಾಟೆಗೆ ತೆಗೆದುಕೊಂಡಿದ್ದರು. ರಸ್ತೆ ಕಾಮಗಾರಿ ಸರಿಯಾಗಿ ಮಾಡುತ್ತಿಲ್ಲ ಎಂಬ ದೂರಿದ ಹಿನ್ನೆಲೆಯಲ್ಲಿ ಗುತ್ತಿಗೆದಾರ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ, ಅಗೆದ ರಸ್ತೆಯನ್ನು ಹಾಗೆಯೇ ಬಿಟ್ಟು ಹೋಗಿದ್ದಾರೆ.

ರಸ್ತೆಯುದ್ದಕ್ಕೂ ತಗ್ಗು ದಿನ್ನೆಗಳು ಇದ್ದು, ಸಾರ್ವಜನಕರು ನಡೆದಾಡಲೂ ಸಹ ಕಷ್ಟ ಪಡುವಂತಾಗಿದೆ. ಸುರಕ್ಷಿತವಾಗಿ ರಸ್ತೆ ದಾಟಲು ಬೈಕ್‌ ಸವಾರರು ಹರಸಾಹಸ ಮಾಡಬೇಕು. ಸ್ವಲ್ಪ ಯಾಮಾರಿದರೂ ಬೈಕ್‌ ಮೇಲಿಂದ ಬೀಳುವುದು ಗ್ಯಾರಂಟಿ. ಅನೇಕರು ಈ ರೀತಿ ಬದ್ದು ಗಾಯಮಾಡಿಕೊಂಡಿದ್ದಾರೆ. ರಸ್ತೆಯಲ್ಲಿ ಕುಡಿಯುವ ನೀರಿನ ನಳದ ಪೈಪ್ ಹೊರಗೆ ಕಾಣುತ್ತಿವೆ. ಅದಕ್ಕೆ ಧಕ್ಕೆಆದರೆ ಕುಡಿಯುವ ನೀರು ಕಲುಷಿತವಾಗಿ ಅನಾರೋಗ್ಯಕ್ಕೆ ಕಾರಣವಾಗುವ ಭಯ ನಿವಾಸಿಗಳನ್ನು ಕಾಡುತ್ತಿದೆ.

ಕೂಡಲೇ ರಸ್ತೆ ನಿರ್ಮಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ವಾರ್ಡ ಸದಸ್ಯರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.

ನಗರೋತ್ಥಾನ ಕೆಲಸಗಳು ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸಂಬಂಧಪಟ್ಟಿರುವುದರಿಂದ ಇಂದು ಬಾಗಲಕೋಟೆಯಿಂದ ಎಇಇ ಹುಣಸಿಗಿಡದ ಅವರು ಪುರಸಭೆಗೆ ಬಂದು ಹೋಗಿದ್ದಾರೆ. ಈ ವಿಷಯ ಅವರ ಗಮನಕ್ಕೂ ತಂದಿದ್ದೇವೆ.

- ಎಂ.ಜಿ. ಕಿತ್ತಲಿ ಅಭಿಯಂತರ ಪುರಸಭೆ ಗುಳೇದಗುಡ್ಡರಸ್ತೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಹಾಗೂ ಪುರಸಭೆಯವರಿಗೆ ಸಾಕಷ್ಟು ಬಾರಿ ಹೇಳಿದರೂ ಕೇಳಿಸಿಕೊಳ್ಳುತ್ತಿಲ್ಲ. 2-3 ದಿನಗಳಲ್ಲಿ ರಸ್ತೆ ಕಾಮಗಾರಿ ಪುನಃ ಆರಂಭಿಸದಿದ್ದರೆ ಪುರಸಭೆ ನಿರ್ಲಕ್ಷ್ಯ ಧೋರಣೆ ಖಂಡಿಸಿ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ

- ಉಮೇಶ ಹುನಗುಂದ ಪುರಸಭೆ ಸದಸ್ಯ, ವಾರ್ಡ ನಂ.5 ಗುಳೇದಗುಡ್ಡ. ಈ ರಸ್ತೆ ನಮ್ಮ ವಾರ್ಡಗೂ ಸಂಬಂಧಪಡುವುದರಿಂದ ನಗರೋತ್ಥಾನ ಕಾಮಗಾರಿಯಿಂದ ಬೇಸರವಾಗಿದೆ. 2-3 ದಿನಗಳಲ್ಲಿ ಕಾಮಾರಿ ಆರಂಭವಾಗದಿದ್ದರೆ ಪುರಸಭೆ ಎದುರಿಗೆ ವಾರ್ಡ್‌ ಜನರೊಂದಿಗೆ ಪ್ರತಿಭಟನೆಗೆ ಕೂಡುತ್ತೇವೆ.

- ವಿನೋದ ಮದ್ದಾನಿ ಪುರಸಭೆ ಸದಸ್ಯರು ವಾರ್ಡ ನಂ.4, ಗುಳೇದಗುಡ್ಡ.ಗುಳೇದಗುಡ್ಡ