ಸಾರಾಂಶ
ಹೊನ್ನಾವರ: ರೈತರು, ಜನಸಾಮಾನ್ಯರು ಸ್ವಾವಲಂಬಿ ಜೀವನ ನಡೆಸಲು ಸಹಕಾರಿ ಸಂಘಗಳ ಕೊಡುಗೆ ಪ್ರಮುಖವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಭಿಪ್ರಾಯಪಟ್ಟರು.
ತಾಲೂಕಿನ ಮುಗ್ವಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸೇವಾ ಸಹಕಾರಿ ಸಂಘ, ಮುಗ್ವಾ ಸುರಕಟ್ಟೆ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಸಹಕಾರಿ ಕ್ಷೇತ್ರ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದೆ. ರಾಜಕಾರಣ ಆರಂಭವಾಗುವುದೇ ಸಹಕಾರಿ ಸಂಘಗಳಿಂದ ಎಂದರು.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಮೊದಲು ನೆರವಿಗೆ ಬರುವುದು ಸಹಕಾರಿ ಬ್ಯಾಂಕ್ ಗಳು, ರಾಷ್ಟ್ರೀಕೃತ ಬ್ಯಾಂಕ್ ಗಳು ಈ ಅವಕಾಶ ನೀಡುವುದಿಲ್ಲ. ಜಿಲ್ಲೆಯ ಜನ ಸಹಕಾರಿ ಬ್ಯಾಂಕ್ ಗಳ ಪ್ರಯೋಜನ ಪಡೆದಿದ್ದಾರೆ. ಇಂತಹ ಸಹಕಾರಿ ಕ್ಷೇತ್ರ ಊಳಿಸಿ-ಬೆಳೆಸುವುದು ಎಲ್ಲರ ಜವಾಬ್ದಾರಿ ಎಂದರು.
ಮಾಜಿ ಜಿಪಂ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಸಹಕಾರಿ ರಂಗ ಬಹಳ ಸವಾಲಿನ ಕ್ಷೇತ್ರ. ಇಲ್ಲಿ ಮುನ್ನಡೆಯುವುದು ಬಹಳ ಕಷ್ಟ. ಪ್ರಾಮಾಣಿಕತೆಗೆ ಮೊದಲ ಆದ್ಯತೆ ಇರುತ್ತದೆ. ಆಗ ಮಾತ್ರ ಸಂಘ ಉತ್ತಮವಾಗಿ ಮುನ್ನಡೆಯಲು ಸಾಧ್ಯ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಸಹಕಾರಿ ಸಂಘ ನಮ್ಮ ಜಿಲ್ಲೆಯಲ್ಲಿರುವುದು ಹೆಮ್ಮೆಯ ಸಂಗತಿ. ಇದು ಅಭಿನಂದನಾರ್ಹ ಎಂದರು.
ಉತ್ತಮ ಆಡಳಿತ ಮಂಡಳಿ, ಸಿಬ್ಬಂದಿ ಮೂಲಕ ಮುಗ್ವಾ ಸಹಕಾರಿ ಸಂಘ ಮುನ್ನಡೆಯುತ್ತಿದೆ. ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಸಂಘಕ್ಕೆ ಶುಭಹಾರೈಸಿದರು.
ಉದ್ಯಮಿ ವೆಂಕಟ್ರಮಣ ಹೆಗಡೆ ಕವಲಕ್ಕಿ ಮಾತನಾಡಿ, ಮುಗ್ವಾ ಸೊಸೈಟಿಯ ಅವನತಿಗೆ, ಅಧೋಗತಿಗೆ ಕಾರಣ ಯಾರು ಎನ್ನುವುದು ಜನರು ಅವಲೋಕನ ಮಾಡಿಕೊಂಡಿದ್ದಾರೆ. ಈ ಹಿಂದಿನ ಅಧ್ಯಕ್ಷರ ಬೇಜವಾಬ್ದಾರಿಯ ಆಡಳಿತದಿಂದ ಈ ಭಾಗದ ರೈತರಿಗೆ ಅನ್ಯಾಯವಾಗಿದೆ. ಬೇಕಾದಂತಹ ಸೌಕರ್ಯ ಒದಗಿಸಲಾಗಿಲ್ಲ. ಸೊಸೈಟಿ ಇನ್ನು ಕೂಡ ನಷ್ಟದಲ್ಲಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಘಟ್ಟದ ಮೇಲಿನ ಸಹಕಾರಿ ಸಂಘಗಳು ಉತ್ತಮವಾಗಿ ನಡೆಯುತ್ತಿದೆ. ಅದೇ ರೀತಿ ಘಟ್ಟದ ಕೆಳಭಾಗದ ಸಂಘಗಳು ಬೆಳೆಯಬೇಕು. ಮುಗ್ವಾ ಸಂಘದಲ್ಲಿ ಕೆಲವು ದೋಷಗಳಿರಬಹುದು ಅದು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಂಡು ಹೋಗುವ ವಿಶ್ವಾಸವಿದೆ. ಇಂತಹ ದೋಷಗಳಿಗೆ ಮುಖ್ಯಕಾರಣ ಸೆಕ್ರೆಟ್ರರಿಗಳ ವರ್ಗಾವಣೆ ಮಾಡುವ ಅಧಿಕಾರ ಹೊಂದಿರದಿಲ್ಲದಿರುವುದಾಗಿದೆ ಎಂದರು.
ಮುಗ್ವಾ ಗ್ರಾಪಂ ಅಧ್ಯಕ್ಷ ಐ.ವಿ. ನಾಯ್ಕ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಸ್ಥಳದಾನಿಗಳು, ನಿವೃತ್ತ ಸಿಬ್ಬಂದಿ ಹಾಗೂ ಶಿರಸಿ ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಆರ್.ಜಿ. ಭಾಗವತ್ ಅವರನ್ನು ಸನ್ಮಾನಿಸಲಾಯಿತು.
ಶಿರಸಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಭಟ್ಟ ಖರ್ವಾ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಜಿ ಕೆ. ಭಟ್ಟ, ಹೊನ್ನಾವರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿ.ಎನ್. ಭಟ್ಟ ಅಳ್ಳಂಕಿ, ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸೇವಾ ಸಹಕಾರಿ ಸಂಘ, ಮುಗ್ವಾ ಸುರಕಟ್ಟೆ ಅಧ್ಯಕ್ಷ ಕೃಷ್ಣಮೂರ್ತಿ ಹೆಗಡೆ ಉಪಸ್ಥಿತರಿದ್ದರು.