ಕಾರು ಅಪಘಾತದಲ್ಲಿ ಬದುಕುಳಿದ ನಾಯಿ ಮರಿ ರಕ್ಷಿಸಿದ ದಂಪತಿ

| Published : Jan 16 2025, 12:47 AM IST

ಕಾರು ಅಪಘಾತದಲ್ಲಿ ಬದುಕುಳಿದ ನಾಯಿ ಮರಿ ರಕ್ಷಿಸಿದ ದಂಪತಿ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯ ಇಲಾಖೆಯ ಸಿಬ್ಬಂದಿ ಕಾರ್‌ ಅಪಘಾತದಲ್ಲಿ ಬದುಕುಳಿದ ನಾಯಿ ಮರಿ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ಅಪಘಾತಗಳಲ್ಲಿ ಮನುಷ್ಯರು ಸಿಕ್ಕಿಹಾಕಿಕೊಂಡಾಗ ಅವರ ರಕ್ಷಣೆಗೆ ಬಾರದೇ ದಾರಿಯಲ್ಲಿ ನೋಡಿಯೂ ನೋಡದ ಹಾಗೇ ಹೋಗುವವರೇ ಹೆಚ್ಚಿರುವ ಈ ದಿನಗಳಲ್ಲಿ ಕಾರು ಅಪಘಾತದಲ್ಲಿ ಬದುಕುಳಿದ ನಾಯಿಮರಿ ರಕ್ಷಣೆ ಮಾಡಿ ಮಾಲೀಕರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಘಟನೆ ಇತ್ತೀಚೆಗೆ ನಡೆದಿದೆ.

ಕಳೆದ ಭಾನುವಾರ ರಾತ್ರಿ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ದೊಡ್ಡಬಳ್ಳಾಪುರದಿಂದ ಸ್ವಗ್ರಾಮ ಸಿಂಧನೂರಿಗೆ ಹೊರಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಘಟನೆಯಲ್ಲಿ ಹರ್ಷಿತಾ (11) ಎನ್ನುವ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿದ್ದವು. ಜೊತೆಗೆ ಅವರು ಸಾಕಿದ ಒಂದು ನಾಯಿ ಮರಿಯೂ ಕಾರಿನಲ್ಲಿತ್ತು. ಅಪಘಾತವಾದಾಗ ಗಾಬರಿಗೊಂಡ ನಾಯಿ ಮರಿ ಕಾರಿನಿಂದ ಓಡಿಹೋಗಿತ್ತು. ಮಾರನೇ ದಿನ ಅಪಘಾತವಾದ ಸ್ಥಳಕ್ಕೆಬಂದು ತನ್ನ ಪೋಷಕರ ಬರುವಿಕೆಗಾಗಿ ಕಾರಿನಡಿ ಕುಳಿತಿತ್ತು.

ಏನನ್ನು ತಿನ್ನದೇ ಅಪಘಾತವಾದ ಕಾರಿನ ಅಡಿಯಲ್ಲಿಯೇ ಒಂದು ದಿನ ಪೂರ್ತಿ ಕುಳಿತಿದೆ. ಅದೇ ಮಾರ್ಗದಲ್ಲಿ ಹೊಸಪೇಟೆಯಿಂದ ಆಲೂರಿನ ಕಡೆ ಪ್ರಯಾಣಿಸುತ್ತಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿ ನವೀನ ಮತ್ತು ಆತನ ಪತ್ನಿ ಸೌಮ್ಯಾ ಅಪಘಾತವಾದ ಸ್ಥಳದ ಸಮೀಪದಲ್ಲಿದ್ದ ಅಂಗಡಿಯಲ್ಲಿ ಚಹಾ ಕುಡಿಯಲು ಕಾರು ನಿಲ್ಲಿಸಿದ್ದಾರೆ. ಆಗ ನಾಯಿಮರಿಯನ್ನು ಗಮನಿಸಿದ್ದು, ಅದಕ್ಕೆ ಬ್ರೆಡ್, ಬಿಸ್ಕೇಟ್ ಹಾಕಿದ್ದಾರೆ. ಆದರೂ, ನಾಯಿ ಅದನ್ನು ತಿನ್ನಲಿಲ್ಲ. ಆದರೂ, ಛಲಬಿಡದ ದಂಪತಿ ಒಂದು ಗಂಟೆ ಕಾಲ ನಾಯಿಮರಿ ಮನವೊಲಿಸಿ ತಮ್ಮ ಕಾರಿನಲ್ಲಿ ಅವರ ಮನೆಗೆ ಕರೆದೊಯ್ದು ಅದಕ್ಕೆ ಸ್ನಾನ‌ ಮಾಡಿಸಿ ಪೋಷಿಸಿದ್ದಾರೆ.

ಮಾಲೀಕರಿಗೆ ಒಪ್ಪಿಸಿದ ದಂಪತಿ

ಪೊಲೀಸರು, ಟೋಲ್ ಸಿಬ್ಬಂದಿ ಮತ್ತು ಹೆದ್ದಾರಿ ಸಹಾಯಕರ ಮುಖಾಂತರ ನಾಯಿ ಮಾಲೀಕರ ನಂಬರ್ ಪಡೆದು ಸಿಂಧನೂರಿನ ಕಾರ್ತಿಕ್ ಅವರಿಗೆ ನಾಯಿಯನ್ನು ಬುಧವಾರ ಒಪ್ಪಿಸಿದ್ದಾರೆ. ಪ್ರಾಣಿಗಳಿಗೂ ಮನಸ್ಸಿದೆ, ಹೃದಯವಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ನಾಯಿಮರಿ ಅಪಘಾತವಾದರೂ ತಮ್ಮ ಮಾಲೀಕರನ್ನು ಬಿಡದೇ ಅಪಘಾತವಾಗಿ ನುಜ್ಜು ನುಜ್ಜಾದ ಕಾರಿನಡಿ ಮಲಗಿ ಮಾಲೀಕರ ಬರುವಿಕೆಗಾಗಿ ಕಾದಿದೆ. ಆ ನಾಯಿಯ ನಿಯತ್ತು ಹುಸಿಯಾಗಲಿಲ್ಲ. ಬೀದಿಪಾಲಾಗುತ್ತಿದ್ದ ನಾಯಿಮರಿಯನ್ನು ರಕ್ಷಿಸಿದ ಪ್ರಾಣಿಪ್ರಿಯ ದಂಪತಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.