ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಶ್ರೀಮಂಗಲ ವ್ಯಾಪ್ತಿಯಲ್ಲಿ ಹಾಡಹಗಲೇ ಹುಲಿಯೊಂದು 2 ಗಂಟೆಯ ಅವಧಿಯಲ್ಲಿ ಒಂದು ಹಸುವನ್ನು ಕೊಂದು, ಇನ್ನೊಂದು ಹಸುವನ್ನು ಗಾಯಗೊಳಿಸಿದೆ.ಹುಲಿ ಓಡಿಸಲು ಕೂಂಬಿಂಗ್ ಕಾರ್ಯಾಚರಣೆ ಮಾಡುವಂತೆ, ಹುಲಿ ಸೆರೆಗೆ ಅನುಮತಿ ಸಿಕ್ಕಿದ ಕೂಡಲೇ ಅರವಳಿಕೆ ನೀಡಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವತೆ ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅರಣ್ಯಧಿಕಾರಿಗಳಿಗೆ ಸೂಚಿಸಿದ್ದಾರೆ.
ವೆಸ್ಟ್ ನೆಮ್ಮಲೆ ಗ್ರಾಮದ ಬೆಳೆಗಾರ ಮಾಣೀರ ಕಿಶನ್ ಅವರಿಗೆ ಸೇರಿದ ಹಾಲು ಕರೆಯುವ ಹಸುವನ್ನು ಗದ್ದೆಯಲ್ಲಿ ಕಟ್ಟಲಾಗಿತ್ತು. ಕಿಶನ್ ಹಾಗೂ ಅವರ ಪತ್ನಿ ಎದುರದಲ್ಲೇ 60 ಅಡಿ ದೂರದಲ್ಲಿ, ಮಧ್ಯಾಹ್ನ 12 ಗಂಟೆಗೆ ಹಸುವಿನ ಮೇಲೆ ಹುಲಿ ದಾಳಿ ನಡೆಸಿದೆ. ಈ ವೇಳೆ ಅವರು ಜೋರಾಗಿ ಬೊಬ್ಬೆ ಹಾಕಿದ್ದು ಹುಲಿ ಹಸುವನ್ನು ಕೊಂದು ಅಲ್ಲಿಂದ ಕಾಲ್ಕಿತ್ತಿದೆ. ಪ್ರತ್ಯೇಕ ಪ್ರಕರಣ: ಇನ್ನೊಂದು ಘಟನೆಯಲ್ಲಿ ಈಸ್ಟ್ ನೆಮ್ಮಲೆ ಗ್ರಾಮದ ಬೆಳೆಗಾರ ಚೊಟ್ಟೆಯಾಂಡಮಾಡ ದರ್ಶನ್ ಅವರ ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಹಸುವಿನ ಮೇಲೆ ಮದ್ಯಾಹ್ನ 2 ಗಂಟೆ ವೇಳೆಗೆ ಹುಲಿ ದಾಳಿ ಮಾಡಿದೆ. ಸಮೀಪದ ತೋಟದಲ್ಲಿದ್ದ ದರ್ಶನ್ ಕುಟುಂಬದವರು ಕೂಗಿಕೊಂಡಾಗ ಹಸುವನ್ನು ಗಾಯಗೊಳಿಸಿದ ಹುಲಿ ಪಕ್ಕದ ತೋಟಕ್ಕೆ ತೆರಳಿದೆ. ಸ್ಥಳಕ್ಕೆ ಸಂಕೇತ್ ಪೂವಯ್ಯ ಭೇಟಿ: ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ ಅವರು ಹುಲಿ ದಾಳಿ ನಡೆಸಿದ ಉಭಯ ಕಡೆಗೆ ಭೇಟಿ ನೀಡಿದರು.ಈ ಸಂದರ್ಭ ಮಾತನಾಡಿದ ಅವರು ಕಳೆದ ಎರಡು ತಿಂಗಳಿಂದ ಶ್ರೀಮಂಗಲ ಹೋಬಳಿ ಹಾಗೂ ನಾಲ್ಕೇರಿ ವ್ಯಾಪ್ತಿಯಲ್ಲಿ ಈ ಹುಲಿಯ ಚಲನವಲನವಿದೆ. ಈ ವ್ಯಾಪ್ತಿಯಲ್ಲಿ ಹೆಚ್ಚಿನ ಜಾನುವಾರುಗಳ ಮೇಲೆ ದಾಳಿಯಾಗಿದೆ. ಅರಣ್ಯ ಇಲಾಖೆ, ಜಾನುವಾರುಗಳು ಸಾವುಗೀಡಾದ ಜಾಗದಲ್ಲಿ ಹುಲಿಯ ಚಲನವಲನ ಸೆರೆ ಹಿಡಿಯಲು ಕ್ಯಾಮರಾ ಅಳವಡಿಸುತ್ತಾ ಬಂದಿದೆ. ಆದರೆ ಇದರಲ್ಲಿ ಇದುವರೆಗೆ ಸೆರಿಯಾಗಿಲ್ಲ. ಕಳೆದ ಎರಡು ತಿಂಗಳಿನಿಂದ ಜಾನುವಾರುಗಳ ಮೇಲೆ ಉಂಟಾಗಿರುವ ದಾಳಿಯನ್ನು ಅರಿತು ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ ಅವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವರಿಕೆ ಮಾಡಿದ್ದು, ಹುಲಿ ಸೆರೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಮಡಿಕೇರಿ ವನ್ಯಜೀವಿ ವಿಭಾಗದ ಡಿ.ಸಿ.ಎಫ್ ನೆಹರು ಹಾಗೂ ವಿರಾಜಪೇಟೆ ವನ್ಯಜೀವಿ ವಿಭಾಗದ ಡಿ.ಸಿ.ಆಫ್ ಜಗನ್ನಾಥ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಪ್ರಕರಣ ಗಂಭೀರವಾಗಿದ್ದು ಶನಿವಾರದಿಂದಲೇ ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲು ಸೂಚನೆ ನೀಡಿದರು. ಹುಲಿ ಸೆರೆಗೆ ಅನುಮತಿ ಸಿಕ್ಕಿದ ತಕ್ಷಣ ಅರವಳಿಕೆ ಮೂಲಕ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಸಾರ್ವಜನಿಕರು ಮಾತನಾಡಿ, ಹುಲಿಯನ್ನು ಪ್ರತ್ಯಕ್ಷವಾಗಿ ನಾವು ಕಂಡಿದ್ದು ಭಾರಿ ಗಾತ್ರದ ಹುಲಿಯಾಗಿದ್ದು, ಇದು ಮನುಷ್ಯರ ಮೇಲೆ ದಾಳಿ ನಡೆಸುವ ಅಪಾಯವಿದ್ದು, ಕೂಡಲೇ ಇದನ್ನು ಸೆರೆ ಹಿಡಿಯಬೇಕು. ಹುಲಿ ದಾಳಿ ಪ್ರಕರಣದಿಂದ ಶಾಲಾ ಮಕ್ಕಳು, ತೋಟದಲ್ಲಿ ಬೆಳೆಗಾರರು ಹಾಗೂ ಕಾರ್ಮಿಕರು ಕೆಲಸ ಮಾಡಲು ಆತಂಕ ಉಂಟಾಗಿದೆ. ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಗಂಭೀರವಾಗಿ ಪರಿಗಣಿಸುವಂತೆ ಅಗ್ರಹಿಸಿದರು.ಈ ಸಂದರ್ಭ ತಾ. ಪಂ. ಮಾಜಿ ಸದಸ್ಯ ಪೊಯೆಲೇಂಗಡ ಪಲ್ವಿನ್ ಪೂಣಚ್ಚ, ಕೊಡಗು ಬೆಳೆಗಾರ ಒಕ್ಕೂಟದ ಖಜಾಂಚಿ ಮಾಣೀರ ವಿಜಯ ನಂಜಪ್ಪ, ಸ್ಥಳೀಯ ಬೆಳೆಗಾರರಾದ ಚೊಟ್ಟೆಯಾಂಡಮಾಡ ವಿಶು, ತೀತಿರ ಪ್ರಭು, ಮಾಣೀರ ಉಮೇಶ್ ಹಾಜರಿದ್ದರು.