ಸಾರಾಂಶ
ಕಾವೇರಿ ನೀರಾವರಿ ನಿಗಮದಿಂದ ಸೇತುವೆ ಮರುನಿರ್ಮಾಣ ಮಾಡಲು 13 ಕೋಟಿ ರು. ವೆಚ್ಚದ ಟೆಂಡರ್ ಕರೆದಿದ್ದು ಎರಡೂವರೆ ವರ್ಷಗಳಿಂದಲೂ ಕಾಮಗಾರಿ ಆರಂಭವಾಗಿಲ್ಲ.
ಕನ್ನಡಪ್ರಭ ವಾರ್ತೆ ಮಾಗಡಿ
ತಾಲೂಕಿನ ಮಂಚನಬೆಲೆ ಜಲಾಶಯದ ಸಮೀಪ ಇದ್ದ ಮುಖ್ಯ ಸೇತುವೆ ಹೆಚ್ಚುವರಿ ಮಳೆ ಬಂದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕೊಚ್ಚಿಹೋಗಿತ್ತು. ಈಗ ಎರಡನೇ ಬಾರಿಯೂ ಕೂಡ ಫೆಂಗಲ್ ಚಂಡಮಾರುತ ಹಿನ್ನೆಲೆಯಲ್ಲಿ ಜಲಾಶಯದಿಂದ ಹೆಚ್ಚುವರಿ ನೀರು ಬಿಡುತ್ತಿರುವುದರಿಂದ ತಾತ್ಕಾಲಿಕವಾಗಿ ನಿರ್ಮಿಸಿದ ಮಣ್ಣಿನ ಸೇತುವೆ ಕುಸಿಯುವ ಆತಂಕದಲ್ಲಿ ಗ್ರಾಮಸ್ಥರಿದ್ದಾರೆ. ಸೇತುವೆ ಮೇಲೆ ಓಡಾಡುವುದು ಅಪಾಯಕಾರಿಯಾಗಿ ಯಾವಾಗ ಬೇಕಾದರೂ ಸೇತುವೆ ಕುಸಿದು ಬೀಳುವ ಹಂತದಲ್ಲಿದೆ.ಮುಖ್ಯ ಸೇತುವೆ ಕೊಚ್ಚಿ ಹೋಗಿ ಎರಡೂವರೆ ವರ್ಷ:
ಎರಡೂವರೆ ವರ್ಷಗಳ ಹಿಂದೆ ಮಂಚನಬೆಲೆ ಜಲಾಶಯದ ಸಮೀಪವೇ ನಿರ್ಮಾಣವಾಗಿದ್ದ ಮುಖ್ಯ ಸೇತುವೆ ಹೆಚ್ಚುವರಿ ನೀರು ಬಂದ ಪರಿಣಾಮ ಕೊಚ್ಚಿ ಹೋಗಿತ್ತು, ಎರಡೂವರೆ ವರ್ಷಗಳಾದರೂ ಹೊಸ ಸೇತುವೆ ನಿರ್ಮಾಣ ಮಾಡುವಲ್ಲಿ ಕಾವೇರಿ ನೀರಾವರಿ ನಿಗಮ ನಿರ್ಲಕ್ಷ್ಯವಹಿಸಿ ತಾತ್ಕಾಲಿಕವಾಗಿ ಹಳೇ ಸೇತುವೆಯ 200 ಮೀಟರ್ ಮುಂದೆ 30 ಲಕ್ಷ ರು. ವೆಚ್ಚದಲ್ಲಿ ಮಣ್ಣಿನ ಸೇತುವೆ ನಿರ್ಮಿಸಿತ್ತು. ಎರಡು ತಿಂಗಳ ಹಿಂದೆಯಷ್ಟೇ ಹೆಚ್ಚುವರಿ ನೀರಿನಿಂದ ಆ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿತ್ತು, ನಂತರ ಎರಡನೇ ಬಾರಿ ನಿರ್ಮಿಸಿರುವ ತಾತ್ಕಾಲಿಕ ಸೇತುವೆಯಲ್ಲೀಗ ಬಿರುಕು ಕಾಣಿಸಿಕೊಂಡಿದ್ದು, ಮಂಚನಬೆಲೆ ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ.13 ಕೋಟಿ ವೆಚ್ಚದಲ್ಲಿ ಹೊಸ ಸೇತುವೆಗೆ ಟೆಂಡರ್ :
ಕಾವೇರಿ ನೀರಾವರಿ ನಿಗಮದಿಂದ ಸೇತುವೆ ಮರುನಿರ್ಮಾಣ ಮಾಡಲು 13 ಕೋಟಿ ರು. ವೆಚ್ಚದ ಟೆಂಡರ್ ಕರೆದಿದ್ದು ಎರಡೂವರೆ ವರ್ಷಗಳಿಂದಲೂ ಕಾಮಗಾರಿ ಆರಂಭವಾಗಿಲ್ಲ, ಟೆಂಡರ್ ಹಂತದಲ್ಲಿ ಶೀಘ್ರದಲ್ಲೇ ಕಾವೇರಿ ನೀರಾವರಿ ನಿಗಮದಿಂದ ಶಾಶ್ವತ ಸೇತುವೆ ಕಾಮಗಾರಿ ಆರಂಭಿಸಿ ಗ್ರಾಮಸ್ಥರಿಗೆ, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಕೂಡಲೇ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಶಾಶ್ವತ ಸೇತುವೆ ಕಾಮಗಾರಿಗೆ ಮೊದಲ ಆದ್ಯತೆ ನೀಡಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.