ನೆಲಮಂಗಲ: ಸರ್ಕಾರಿ ಜಾಗ ಗುರುತಿಸಿಕೊಟ್ಟಲ್ಲಿ ಸೊಂಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಿಕೊಡುವುದಾಗಿ ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು
ನೆಲಮಂಗಲ: ಸರ್ಕಾರಿ ಜಾಗ ಗುರುತಿಸಿಕೊಟ್ಟಲ್ಲಿ ಸೊಂಡೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಿಕೊಡುವುದಾಗಿ ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.
ಬೆಂಗಳೂರು ಉತ್ತರ ತಾಲೂಕು ಹುಣ್ಣಿಗೆರೆ ಗ್ರಾಮದ ಪುನೀತ್‌ರಾಜ್‌ಕುಮಾರ್ ಬಿಡಿಎ ವಿಲ್ಲಾ ಎದುರು ಮೈದಾನದಲ್ಲಿ ಯುವರತ್ನ ಸೀಸನ್-೨ ಕ್ರಿಕೆಟ್ ಆಯೋಜಿಸಿದ್ದ ೨ ದಿನದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ಉತ್ತರ ತಾಲೂಕು ರಾಹುತ್ತನಹಳ್ಳಿಯಲ್ಲಿ ಈಗಾಗಲೇ ೧೦ ಎಕರೆ ಜಾಗ ಗುರುತಿಸಲಾಗಿದ್ದು ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಅವಶ್ಯವಿದ್ದ ಅನುದಾನ ನೀಡಲಾಗುತ್ತಿದೆ. ರಾಜ್ಯದ ಉದ್ದಗಲಕ್ಕೂ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.ಧರ್ಮಜಾತಿ ಪಕ್ಷ ಮೀರಿದ ವಿಚಾರವಿದ್ದರೆ ಅದು ಕ್ರೀಡೆ ಮಾತ್ರ. ಹಾಕಿ ಎಂಬ ಕ್ರೀಡೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ. ಆದರೆ ಹಾಕಿಗಿಂತ ಕ್ರಿಕೆಟ್ ಜಾಗತಿಕ ಕ್ರೀಡೆಯಾಗಿ ಅತಿ ಪ್ರಸಿದ್ಧಿ ಪಡೆದುಕೊಂಡಿದೆ. ಚಿಕ್ಕಮಕ್ಕಳಿಂದ ವಯೋವೃದ್ಧರವರೆಗೂ ಕ್ರೀಡೆಯನ್ನು ವೀಕ್ಷಿಸುತ್ತಿದ್ದಾರೆ. ತಂಡತಂಡಗಳ ನಡುವೆ ಒಂದೆಡೆಯಾದರೆ ರಾಜ್ಯ ರಾಜ್ಯಗಳು ಹಾಗೂ ದೇಶಗಳ ನಡುವೆ ನಡೆಯುವ ರೋಚಕ ಕ್ರಿಕೆಟ್ ಪಂದ್ಯಾವಳಿಗಳು ದೇಶಾಭಿಮಾನವನ್ನು ಬೆಳೆಸುತ್ತಾ ಬಂದಿವೆ. ಪಂದ್ಯಾವಳಿಗಳಲ್ಲಿ ಸೋಲು-ಗೆಲವು ಸಾಮಾನ್ಯ. ಆದ್ದರಿಂದ ಪಂದ್ಯಾವಳಿಯಲ್ಲಿ ಗಲಾಟೆ ಗದ್ದಲಗಳಿಗೆ ಅವಕಾಶ ಎಡೆಮಾಡಿಕೊಡದೆ ಸೌಹಾರ್ದಯುತವಾಗಿ ಪಂದ್ಯಾವಳಿಯನ್ನು ನಡೆಸುವಂತೆ ಸಲಹೆ ನೀಡಿದರು.ಆರಂಭದಲ್ಲಿ ಅಪ್ಪು, ಯುವರತ್ನ ಹೆಸರಿನಲ್ಲಿ ಕ್ರಿಕೆಟ್ ತಂಡ ರಚಿಸಿಕೊಂಡು ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿದ್ದ ಯುವಕರ ತಂಡ ಇದೀಗ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸುತ್ತಿದೆ. ಕ್ರೀಡಾಭಿಮಾನಿಗಳ ಸಹಕಾರದಿಂದ ನಡೆಯುತ್ತಿರುವ ೨ ದಿನಗಳ ಪಂದ್ಯಾವಳಿಯಲ್ಲಿ ವಿವಿಧ ತಂಡಗಳು ಭಾಗವಹಿಸಿದ್ದು ಪ್ರಥಮ ಬಹುಮಾನವಾಗಿ ಆಕರ್ಷಕ ಟ್ರೋಪಿಯೊಂದಿಗೆ೧.೫೫೫ ರು. ನಗದು, ದ್ವಿತೀಯ ಬಹುಮಾನವಾಗಿ ಆಕರ್ಷಕ ಟ್ರೋಪಿ ೫೦,೫೫೫, ತೃತೀಯ ಬಹುಮಾನವಾಗಿ ೩೩,೫೫೫ ನೀಡುವುದರ ಜತೆಗೆ ಪಂದ್ಯಶ್ರೇಷ್ಠ, ಪುರುಷೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಆಯೋಜಕ ಶಶಿಧರ್ ಎಸ್.ಎನ್. ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲೆ ಭಾಜಪ ಪ್ರಧಾನ ಕಾರ್ಯದರ್ಶಿ ಎಸ್.ಎನ್.ರಾಜಣ್ಣ, ಹುಣ್ಣಿಗೆರೆ ಮಲ್ಲೇಶಯ್ಯ, ಸೊಂಡೆಕೊಪ್ಪ ಶಂಕರಸ್ವಾಮಿ, ಬೈರೇಗೌಡನಹಳ್ಳಿ ಶಿವು, ಆಕಾಶ್‌ಗೌಡ, ಪಂದ್ಯಾವಳಿ ಆಯೋಜಕ ಎಚ್.ಆರ್.ಬಸವರಾಜು, ಪ್ರದೀಪ್, ಸಂತೋಷ್‌ಕುಮಾರ್, ಕಡಬಗೆರೆ ಸುರೇಶ್, ದಿಲೀಪ್ ಮತ್ತಿತರರು ಉಪಸ್ಥಿತರಿದ್ದರು.ಪೊಟೊ-1ಕೆಎನ್‌ಎಲ್‌ಎಮ್1-ಬೆಂಗಳೂರು ಉತ್ತರ ತಾಲೂಕು ಹುಣ್ಣೆಗೆರೆ ಪುನೀತ್ ರಾಜ್‌ಕುಮಾರ್ ಬಿಡಿಎ ವಿಲ್ಲಾ ಎದುರಿನ ಮೈದಾನದಲ್ಲಿ ಯುವರತ್ನ ಕ್ರಿಕೆಟ್ ತಂಡ ಆಯೋಜಿಸಿದ್ದ ಯುವರತ್ನ ಸೀಸನ್-2 ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಚಾಲನೆ ನೀಡಿದರು.