ಕಗ್ಗಳ ಗ್ರಾಮದ ಕೆರೆ ಬಳಿ ಮೊಸಳೆ ಸೆರೆ
KannadaprabhaNewsNetwork | Published : Oct 30 2023, 12:30 AM IST
ಕಗ್ಗಳ ಗ್ರಾಮದ ಕೆರೆ ಬಳಿ ಮೊಸಳೆ ಸೆರೆ
ಸಾರಾಂಶ
ಕಗ್ಗಳ ಗ್ರಾಮದ ಕೆರೆ ಬಳಿ ಮೊಸಳೆ ಸೆರೆ, ಒಂದು ಗಂಟೆ ಕಾಲ ಕಾರ್ಯಾಚರಣೆ
ಕನ್ನಡ ಪ್ರಭ ವಾರ್ತೆ ಮಳವಳ್ಳಿ ತಾಲೂಕಿನ ಬೊಪ್ಪೇಗೌಡನಪುರ (ಬಿ.ಜಿ.ಪುರ) ಹೋಬಳಿ ಕಗ್ಗಳ ಗ್ರಾಮದ ಕೆರೆ ಬಳಿಯ ಜಮೀನೊಂದರಲ್ಲಿ ಕಾಣಿಸಿಕೊಂಡಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಗ್ರಾಮದ ಕೃಷ್ಣರಾಜೇ ಅರಸು ಜಮೀನಿಗೆ ಹೊಂದಿಕೊಂಡಂತಿರುವ ಕೆರೆ ಸಮೀಪದ ಪೊದೆಯೊಳಗೆ ಮೊಸಳೆ ಇರುವುದನ್ನು ಗಮನಿಸಿದ ಗ್ರಾಮದ ಮಹಿಳೆಯೊಬ್ಬರು ಕಿರುಚಿಕೊಂಡಿದ್ದಾಳೆ. ಸ್ಥಳಕ್ಕೆ ಬಂದ ಗ್ರಾಮದ ಮುಖಂಡರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ವಲಯ ಅರಣ್ಯಾಧಿಕಾರಿ ಎನ್.ಸಿ.ಮಹದೇವು ನೇತೃತ್ವದ ತಂಡ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಮೊಸಳೆ ಸೆರೆ ಹಿಡಿದು ಚಿಕ್ಕಮುತ್ತತ್ತಿ ಬಳಿ ಕಾವೇರಿ ನದಿಗೆ ಬಿಟ್ಟಿದ್ದಾರೆ. ಆತಂಕ: ಕಗ್ಗಳ ಗ್ರಾಮದಲ್ಲಿ ಕಾಣಿಸಿಕೊಂಡ ಮೊಸಳೆಯಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಜನರಲ್ಲಿ ಆತಂಕ ಮನೆ ಮಾಡಿತ್ತು. ಮೊಸಳೆ ಪ್ರತ್ಯಕ್ಷವಾಗಿರುವ ವಿಷಯ ತಿಳಿದ ಕಗ್ಗಳ ಹಾಗೂ ಅಕ್ಕಪಕ್ಕದ ಗ್ರಾಮಗಳ ನೂರಾರು ಮಂದಿ ಮೊಸಳೆ ನೋಡಲು ಮುಗಿಬಿದ್ದಿದ್ದರು.