ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ವೀಕ್ಷಿಸಲು ಕಿಕ್ಕಿರಿದ ಜನಸ್ತೋಮ

| Published : Sep 01 2024, 01:52 AM IST

ಸಾರಾಂಶ

ನಾನಾ ಭಾಗಗಳಿಂದ ಆಗಮಿಸಿದ ಟ್ರ್ಯಾಕ್ಟರ್‌ನೊಂದಿಗೆ ಆಗಮಿಸಿದ ಚಾಲಕರು ತಮ್ಮ ಸಾಮರ್ಥ್ಯ ತೋರಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ದೇವರ ಜಾತ್ರಾಮಹೋತ್ಸವದ ಅಂಗವಾಗಿ ನಂದಿ ತರಕಾರಿ ಮಾರುಕಟ್ಟೆ ಆವರಣದಲ್ಲಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ೫೫ ಎಚ್‌ಪಿ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ನೋಡುಗರನ್ನು ರೋಮಾಂಚನಗೊಳಿಸಿತು.

ಪಟ್ಟಣದಲ್ಲಿ ಜಾತ್ರೆಯಂಗವಾಗಿ ಎರಡನೇ ಬಾರಿಗೆ ಹಮ್ಮಿಕೊಂಡಿದ್ದ ಈ ಸ್ಪರ್ಧೆಯಲ್ಲಿ ಆಲಮೇಲ, ಇಂಡಿ, ಬಬಲೇಶ್ವರ, ಬುದ್ನಿ, ಕುಂಟೋಜಿ, ಜಮಖಂಡಿಯ ಹಿಪ್ಪರಗಿ ಸೇರಿದಂತೆ ವಿವಿಧ ಭಾಗಗಳಿಂದ 30 ಟ್ರ್ಯಾಕ್ಟರ್‌ಗಳು ಬಂದಿದ್ದವು. ಸ್ಪರ್ಧೆಗೆ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಶಿವಾನಂದ ಈರಕಾರಮುತ್ಯಾ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ ಚಾಲನೆ ನೀಡಿದರು.

ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ಆರಂಭವಾಗುತ್ತಿದ್ದಂತೆ ನಂದಿ ತರಕಾರಿ ಮಾರುಕಟ್ಟೆ ಆವರಣ, ವಿವಿಧ ಕಟ್ಟಡಗಳ ಮಾಳಿಗೆಯ ಮೇಲೆ ನಿಂತಿದ್ದ ಯುವ ಪಡೆಯ ಹರ್ಷೋದ್ಘಾರ ಮುಗಿಲು ಮುಟ್ಟಿತು. ನಂದಿ ತರಕಾರಿ ಮಾರುಕಟ್ಟೆ ಸುತ್ತಮುತ್ತ ಎಲ್ಲಿ ನೋಡಿದರೂ ದ್ವಿಚಕ್ರವಾಹನಗಳು, ಅಪಾರ ಸಂಖ್ಯೆಯ ಜನರು ಕಂಡುಬಂತು. ಅಹಿತಕರ ಘಟನೆ ಸಂಭವಿಸದಂತೆ ಸ್ಪರ್ಧೆಯ ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಇದರ ಜೊತೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಆದರೂ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸ್ ಸಿಬ್ಬಂದಿಗಳು ಹರಸಾಹಸ ಪಟ್ಟರು. ಆಯೋಜಕರಲ್ಲಿ ಹೆಸರು ನೋಂದಾಯಿಸಿದ ಸ್ಪರ್ಧಾಳುಗಳ ಚಾಲಕರ ಹೆಸರನ್ನು ಲಾಟ್ ಮೂಲಕ ಎದುರಾಳಿ ಸ್ಪರ್ಧಾಳುಗಳನ್ನು ಆಯ್ಕೆ ಮಾಡಲಾಯಿತು. ನಂತರ ಎರಡು ಟ್ರ್ಯಾಕ್ಟರ್‌ಗಳ ಹಿಂಭಾಗದ ಕಬ್ಬಿಣದ ಹುಕ್ಕಿಗೆ ಕಬ್ಬಿಣದ ರಾಡ್‌ನಿಂದ ಜೋಡಿಸಿ ಎರಡು ಟ್ರ್ಯಾಕ್ಟರ್‌ಗಳ ಮಧ್ಯೆ ಜಗ್ಗಾಟ ಆರಂಭಿಸಲಾಯಿತು. ಎರಡು ಟ್ರ್ಯಾಕ್ಟರ್‌ಗಳು ಜಗ್ಗಾಟ ಜೋರಾಗುತ್ತಿದ್ದಂತೆ ಟ್ರ್ಯಾಕ್ಟರ್‌ನಿಂದ ರೈಲಿನಿಂದ ಬರುವ ಹಾಗೇ ಹೊಗೆ, ಜೋರಾದ ಶಬ್ಧ ಬರುತ್ತಿದ್ದಂತೆ ನೆರೆದ ಅಪಾರ ಜನಸ್ತೋಮ ಶಿಳ್ಳೆ, ಕೇಕೆ, ಹಾಕಿದರು. ಸ್ಪರ್ಧೆಯಲ್ಲಿ ಪ್ರಥಮ ₹೫೧ ಸಾವಿರ, ದ್ವಿತೀಯ ₹೩೦ ಸಾವಿರ, ತೃತೀಯ ₹ ೨೦ ಸಾವಿರ, ಚತುರ್ಥ ₹೧೦ ಸಾವಿರ, ಐದನೇ ಬಹುಮಾನ ₹೫ ಸಾವಿರ ನಗದು ಬಹುಮಾನವಿದೆ.

ಸ್ಪರ್ಧೆಯಲ್ಲಿ ನಾಲ್ಕು ಸುತ್ತು ಇದ್ದು. ಸ್ಪರ್ಧೆಯು ತಡರಾತ್ರಿಯವರೆಗೂ ಎಲ್ಲ ಸುತ್ತುಗಳು ಮುಕ್ತಾಯವಾಗುವವರೆಗೂ ಮುಂದುವರಿಯಲಿದೆ ಎಂದು ಸ್ಪರ್ಧೆಯ ಆಯೋಜಕರಲ್ಲಿ ಒಬ್ಬರಾದ ಮಂಜು ಹಾರಿವಾಳ ಹೇಳಿದರು.

ಸ್ಪರ್ಧೆಯ ಆಯೋಜಕರಾದ ಮಂಜು ಹಾರಿವಾಳ. ಮೀರಸಾಬ ಕೊರಬು, ಸುರೇಶ ಹಾರಿವಾಳ, ಪಿಂಟುಗೌಡ ಪಾಟೀಲ, ಸಂತೋಷ ಕೂಡಗಿ, ಬಸವರಾಜ ಚೌಧರಿ, ಗುರು ವಂದಾಲ, ಮಲ್ಲು ಡೋಣೂರ, ಶ್ರೀಶೈಲ ಹೆಬ್ಬಾಳ, ಮಾಂತು ಮಾಲಗಾರ, ಜಗದೀಶ ನಿಕ್ಕಂ, ಮಹೇಶ ಹಾರಿವಾಳ,ಸಂಗಮೇಶ ಮೈಲೇಶ್ವರ, ಗುಂಡು ಪಡಶೆಟ್ಟಿ ಸೇರಿದಂತೆ ಇತರರು ಇದ್ದರು. ಅಶೋಕ ಹಾರಿವಾಳ ಅವರು ನಿರೂಪಿಸಿದರು.