ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಶ್ರಾವಣ ಮಾಸದ ಪ್ರಥಮ ಸೋಮವಾರದಂದು ಪಾಪನಾಶ ದೇವಸ್ಥಾನದಲ್ಲಿ ಜನರ ದಂಡೇ ಕಂಡುಬಂತು. ದೇವಸ್ಥಾನಕ್ಕೆ ಹೋಗುವ ದಾರಿಯುದ್ದಕ್ಕೂ ಓಂ ನಮಃ ಶಿವಾಯ ಮಂತ್ರಘೋಷ ಮೊಳಗಿದವು. ಶಿವಲಿಂಗಕ್ಕೆ ಬಿಲ್ವಾರ್ಚನೆ, ಪಂಚಾಮೃತ ಹಾಗೂ ಕ್ಷೀರಾಭಿಷೇಕ ಜರುಗಿದವು. ಭಕ್ತರು ಭಕ್ತಿಯಿಂದ ಬಿಲ್ವಪತ್ರೆ ಸಮರ್ಪಿಸಿದರು.ಮಹಿಳೆಯರು, ಮಕ್ಕಳು ಸೇರಿ ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಬಂದು ದರ್ಶನ ಪಡೆದು ಭಕ್ತಿಭಾವ ಮೆರೆದರು. ಹೆಚ್ಚಿನ ಜನ ಆಗಮಿಸಿದ ಕಾರಣ ದರ್ಶನಕ್ಕೆ ಉದ್ದದ ಸಾಲೇ ಇತ್ತು. ಮಂದಿರದಲ್ಲಿ ತ್ರಿದಳ ಬಿಲ್ವಪತ್ರೆ ಮಾರಾಟ ಭರಾಟೆಯಿಂದ ನಡೆಯಿತು. ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ದೇವಸ್ಥಾನ ಸಮಿತಿಯವರು ಸೂಕ್ತ ವ್ಯವಸ್ಥೆ ಮಾಡಿದ್ದರು. ನಗರದ ವಿವಿಧ ಬಡಾವಣೆಗಳಿಂದ ಪಾಪನಾಶಕ್ಕೆ ಹೋಗುವ ಪಾದಯಾತ್ರಿಗಳ ದಂಡು ಸಾಮಾನ್ಯವಾಗಿತ್ತು. ಅನೇಕರು ಚಪ್ಪಲಿ ಹಾಕದೆ ಬರಿಗಾಲಲ್ಲಿ ನಾಲ್ಕೈದು ಕಿಲೋಮೀಟರ್ ಕ್ರಮಿಸಿ ಮಂದಿರಕ್ಕೆ ತೆರಳಿ ಭಕ್ತಿ ಪರಾಕಾಷ್ಠೆ ಮೆರೆದರು. ಕಾಲ್ನಡಿಗೆಯಲ್ಲಿ ಹೋಗುವಂತ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ.
ವಿವಿಧೆಡೆ ವಿಶೇಷ ಪೂಜೆ:ಶ್ರಾವಣ ನಿಮಿತ್ತ ಸೋಮವಾರ ಜಿಲ್ಲೆ ವಿವಿಧ ಮಂದಿರಗಳಲ್ಲಿ ವಿಶೇಷ ಪೂಜೆ ಇತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೀದರ್ ನಗರದ ಐತಿಹಾಸಿಕ ನರಸಿಂಹ ಝರಣಿ ಗುಹಾಂತರ ಮಂದಿರಕ್ಕೆ ಅಪಾರ ಭಕ್ತಾದಿಗಳು ಆಗಮಿಸಿ ನರಸಿಂಹ ಸ್ವಾಮಿ ದರ್ಶನ ಪಡೆದರು.
ನೆರೆ ತೆಲಂಗಾಣ, ಮಹಾರಾಷ್ಟ್ರ ಸೇರಿ ಸ್ಥಳೀಯ ಭಕ್ತರು ಆಗಮಿಸಿದ್ದರು. ಮೈಲಾರ ಮಲ್ಲಣ್ಣ ಹಾಗೂ ಪಕ್ಕದ ಗಾಯಮುಖ ಗುಪ್ತಲಿಂಗೇಶ್ವರ ದೇವಸ್ಥಾನಕ್ಕೂ ಭಕ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದರು.ಹುಮನಾಬಾದ್ ತಾಲೂಕಿನ ಹಳ್ಳಿಖೇಡ್(ಕೆ) ಗ್ರಾಮದ ಕೈಲಾಸನಾಥೇಶ್ವರ ಮಂದಿರದಲ್ಲೂ ಬೆಳಗ್ಗೆಯಿಂದ ರಾತ್ರಿವರೆಗೆ ವಿವಿಧ ಕಾರ್ಯಕ್ರಮ ನಡೆದವು. ದೊಡ್ಡ ಶಿವನ ಮೂರ್ತಿ ದರ್ಶನ ಪಡೆಯಲು ಸುತ್ತಲಿನ ಗ್ರಾಮಸ್ಥರು ಆಗಮಿಸಿದ್ದರು.