ಸಂಕೀರ್ಣ ಬಳ್ಳಾರಿ ಕೃತಿಯಲ್ಲಿದೆ ಸಾಂಸ್ಕೃತಿಕ ತುಡಿತ

| Published : Oct 18 2023, 01:00 AM IST

ಸಂಕೀರ್ಣ ಬಳ್ಳಾರಿ ಕೃತಿಯಲ್ಲಿದೆ ಸಾಂಸ್ಕೃತಿಕ ತುಡಿತ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ಲೇಖಕ ಡಾ. ಮೃತ್ಯುಂಜಯ ರುಮಾಲೆ ಅವರ `ಸಂಕೀರ್ಣ ಬಳ್ಳಾರಿ'' ಹಾಗೂ `ಇಷ್ಟಲಿಂಗ; ವಿವಿಧ ಆಯಾಮಗಳು'' ಕೃತಿ ಲೋಕಾರ್ಪಣೆ ಸಮಾರಂಭ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಬಳ್ಳಾರಿಯ ಉಪೇಕ್ಷೆಗೊಳಗಾದ ಚರಿತ್ರೆಯನ್ನು ನಿರೂಪಿಸಲು `ಸಂಕೀರ್ಣ ಬಳ್ಳಾರಿ'''' ಹಾಗೂ ವೈಜ್ಞಾನಿಕ ಹಾಗೂ ಸಾಮಾಜಿಕ ದೃಷ್ಟಿಯಿಂದ ಇಷ್ಟಲಿಂಗ ಹೇಗೆ ನೋಡಬಹುದು ಎಂಬುದರ ಕುರಿತು`ಇಷ್ಟಲಿಂಗ; ವಿವಿಧ ಆಯಾಮಗಳು'''' ಕೃತಿಗಳು ಅನೇಕ ಮಹತ್ವದ ಸಂಗತಿಗಳ ಬೆಳಕು ಚೆಲ್ಲುತ್ತವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಸಂಶೋಧಕ ಡಾ. ಕೆ. ರವೀಂದ್ರನಾಥ ತಿಳಿಸಿದರು.

ನಗರದ ಶ್ರೀಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಸಾಂಸ್ಕೃತಿಕ ಪರಿಷತ್ತು ಹಾಗೂ ಕಾನಾಮಡಗು ದಾಸೋಹಿ ಪ್ರಕಾಶನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಲೇಖಕ ಡಾ. ಮೃತ್ಯುಂಜಯ ರುಮಾಲೆ ಅವರ `ಸಂಕೀರ್ಣ ಬಳ್ಳಾರಿ'''' ಹಾಗೂ `ಇಷ್ಟಲಿಂಗ; ವಿವಿಧ ಆಯಾಮಗಳು'''' ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

ಇಷ್ಟಲಿಂಗ ಎಂಬುದು ವೀರಶೈವ ಲಿಂಗಾಯತರ ಕುರುಹು ಅಲ್ಲ; ಇಷ್ಟಲಿಂಗ ಎಲ್ಲರೂ ಧರಿಸಬಹುದಾದ ಸಾಮಾಜಿಕ ಪ್ರಜ್ಞೆಯ ಕುರುಹು ಎಂಬುದನ್ನು ನಿರೂಪಿಸುವ ಕೆಲಸ ಅನೇಕ ಲೇಖಕರು ಮಾಡಿದ್ದಾರೆ. ವೈಜ್ಞಾನಿಕ, ಸಾಮಾಜಿಕ ಹಾಗೂ ಧಾರ್ಮಿಕ ನೆಲೆಯಲ್ಲಿ ಇಷ್ಟಲಿಂಗವನ್ನು ಹೇಗೆ ನೋಡಬೇಕು ಎಂಬುದನ್ನು ಅನೇಕ ವಿದ್ವಾಂಸರು ವಿಶ್ಲೇಷಿಸಿದ್ದಾರೆ. `ಸಂಕೀರ್ಣ ಬಳ್ಳಾರಿ'''' ಕೃತಿಯಲ್ಲಿ ಬಳ್ಳಾರಿ ಕುರಿತಂತೆ ಅನೇಕ ಮಹತ್ವದ ಸಂಗತಿಗಳನ್ನು ಲೇಖಕರು ದಾಖಲೆ ಸಮೇತ ಕಟ್ಟಿಕೊಟ್ಟಿದ್ದು, ಈ ಕೃತಿ ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ತುಡಿತ ಹೊಂದಿದೆ. ಈ ಕೃತಿಗೆ ಚಾರಿತ್ರಿಕ ಗೌರವವಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡದ ಭಾಷಾ ಪ್ರಗತಿಗೆ ಜಾನ್ ಹ್ಯಾಂಡ್ಸ್ ಅವರು ನೀಡಿದ ಕೊಡುಗೆ, ವಿಶ್ವಮಟ್ಟದ ರಂಗಭೂಮಿ ಕಲಾವಿದ ಬಳ್ಳಾರಿ ರಾಘವ, ಗಮಕ ಕವಿ ಜೋಳದರಾಶಿ ದೊಡ್ಡನಗೌಡ, ವೈ. ನಾಗೇಶಶಾಸ್ತ್ರಿಗಳು, ವೈ. ಮಹಾಬಲೇಶ್ವರಪ್ಪ ಅವರು ಬಳ್ಳಾರಿಯ ಸಾಹಿತ್ಯ- ಸಾಂಸ್ಕೃತಿಕ ವಲಯಕ್ಕೆ ನೀಡಿದ ನೀಡಿದ ಬಹುದೊಡ್ಡ ಕೊಡುಗೆಗಳನ್ನು ಲೇಖಕ ಡಾ. ಮೃತ್ಯುಂಜಯ ರುಮಾಲೆ ಅವರು ಸ್ಮರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಚ್.ಎಂ. ಗುರುಸಿದ್ದಸ್ವಾಮಿ, ಬಳ್ಳಾರಿ ಜಿಲ್ಲೆಯ ಕನ್ನಡ ಭಾಷೆ ಉಳಿವಿಗಾಗಿ ನಡೆದ ಹೋರಾಟ ಹಾಗೂ ಕನ್ನಡ ನಾಡು- ನುಡಿಗಾಗಿ ಈ ಭಾಗದ ಜನರ ತ್ಯಾಗ ಸಮರ್ಪಣ ಮನೋಭಾವನೆ ಕುರಿತು ತಿಳಿಸಿದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ ಮಾತನಾಡಿದರು. ಕಮ್ಮರಚೇಡು ಕಲ್ಯಾಣ ಸ್ವಾಮಿ ಮಠದ ಕಲ್ಯಾಣ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷೆ ಕ್ಯಾತ್ಯಾಯಿನಿ ಮರಿದೇವಯ್ಯ ಅವರು ಕನ್ನಡ ಸಾಂಸ್ಕೃತಿಕ ಪರಿಷತ್ತಿನ ಲಾಂಛನ ಬಿಡುಗಡೆಗೊಳಿಸಿದರು. ಕನ್ನಡ ಸಾಂಸ್ಕೃತಿಕ ಪರಿಷತ್‌ನ ಅಧ್ಯಕ್ಷ ಸಿದ್ಧರಾಮ ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಾಂಶುಪಾಲ ಡಾ. ಸತೀಶ್ ಹಿರೇಮಠ, ಕರೂರು ವಿರುಪಾಕ್ಷಗೌಡ, ಕೋಳೂರು ಚಂದ್ರಶೇಖರಗೌಡ, ಪಲ್ಲೇದ ಪಂಪಾಪತಿ ಉಪಸ್ಥಿತರಿದ್ದರು. ಡಾ. ಪಿ. ದಿವಾಕರ ಹಾಗೂ ಎಸ್.ಎಂ. ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.

ಜಾನ್ ಹ್ಯಾಂಡ್ಸ್‌ನ ಮೂವರು ಪತ್ನಿಯರು ಬಳ್ಳಾರಿ ಬಿಸಲಿಗೆ ಸತ್ತರು!

ಲಂಡನ್‌ದಿಂದ ಬಳ್ಳಾರಿಗೆ ಬಂದಿದ್ದ ಮಿಷನರಿ ಜಾನ್ ಹ್ಯಾಂಡ್ಸ್, ಕನ್ನಡ ಭಾಷಾ ಬೆಳವಣಿಗೆಗೆ ಅಪಾರವಾಗಿ ಶ್ರಮಿಸುತ್ತಾನೆ. ಕನ್ನಡದಲ್ಲಿ ಮೊದಲ ಬಾರಿಗೆ ಬೈಬಲ್ಅನ್ನು ಅನುವಾದ ಮಾಡಿಸಿದ ಈತ, ಬಳ್ಳಾರಿಗೆ ಬಂದ ಬಳಿಕ ಮೂವರನ್ನು ಮದುವೆಯಾಗುತ್ತಾನೆ. ಆದರೆ, ಈತನ ಮೂವರು ಪತ್ನಿಯರು ಬಳ್ಳಾರಿಗೆ ಬಿಸಿಲಿನ ಪ್ರಖರಕ್ಕೆ ಸತ್ತು ಹೋಗುತ್ತಾರೆ. ಆದರೆ, ಗಟ್ಟಿಗನಾಗಿದ್ದ ಜಾನ್ ಹ್ಯಾಂಡ್ಸ್ ಬಳ್ಳಾರಿಯಲ್ಲಿಯೇ ಉಳಿದು ಕನ್ನಡ ಭಾಷೆಯ ಬೆಳವಣಿಗೆಗೆ ಶ್ರಮಿಸುತ್ತಾನೆ ಎಂದು ಲೇಖಕ ಮೃತ್ಯುಂಜಯ ರುಮಾಲೆ ತಿಳಿಸಿದರು.