ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಸಂಸ್ಕಾರಯುತ ಬದುಕು ವ್ಯಕ್ತಿಯ ವ್ಯಕ್ತಿತ್ವ ರೂಪಿಸುತ್ತದೆ. ಶಿಕ್ಷಣದ ಜತೆಗೆ ಸಂಸ್ಕೃತಿ, ಸಂಸ್ಕಾರಗಳನ್ನು ನೀಡುವುದು ಮುಖ್ಯವಾಗಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.ಪಟ್ಟಣದ ಶಿವಗಂಗಾ ಕಲ್ಯಾಣ ಮಂಟಪದಲ್ಲಿ ಶ್ರೀ ಕನಕ ನೌಕರರ ಸಾಂಸ್ಕೃತಿಕ ಸಂಘದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಶ್ರೀ ಕನಕ ಪ್ರತಿಭಾ ಪುರಸ್ಕಾರ-2025ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹೆಚ್ಚು ಅಂಕ ಪಡೆಯುವುದರ ಜತೆಗೆ ವಿನಯವಂತರಾಗಿ ಸಮಾಜ, ಕಲಿತ ಶಾಲೆ, ಪಾಲಕರು ಹಾಗೂ ಗುರು ಹಿರಿಯರಿಗೆ ಗೌರವ ತರುವ ರೀತಿಯಲ್ಲಿ ನಡೆದುಕೊಳ್ಳಬೇಕು. ವಿದ್ಯಾರ್ಥಿನಿಯರು ಸಮಾಜದ ಚೌಕಟ್ಟಿನಲ್ಲಿ ಬದುಕಬೇಕು. ಸಂಸ್ಕಾರ, ಸಂಪ್ರದಾಯಗಳನ್ನು ಪಾಲನೆ ಮಾಡಿ ಪೋಷಕರಿಗೆ ಗೌರವ ತರಬೇಕು. ಚೌಕಟ್ಟು ಮೀರಿ ವರ್ತಿಸಿದರೆ ಭವಿಷ್ಯವು ಮುಸುಕಾಗುತ್ತದೆ. ಸಮಾಜದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದರು.
2028ರ ವೇಳೆಗೆ ಹೊಸದುರ್ಗದ ಕನಕ ಗುರುಪೀಠವನ್ನು ಅಭಿವೃದ್ಧಿಪಡಿಸಿ ನಾಡಿನ ಜನತೆಗೆ ಸಮರ್ಪಣೆ ಮಾಡಲಾಗುವುದು. ಸರ್ಕಾರದ ಅನುದಾನ ಹಾಗೂ ಭಕ್ತರ ಸಹಾಯದಿಂದ ಶಾಲಾ, ಕಾಲೇಜು, ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಲಾಗುವುದು. ಕನಕ ಸಮುದಾಯಭವನ ಪೂರ್ಣಗೊಳಿಸಲು ಬೇಕಾದ ಆರ್ಥಿಕ ನೆರವು ನೀಡಲಾಗುವುದು. ತಾಲೂಕಿನ ಎಲ್ಲಾ ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ ಎಂದರು.
ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಕನಕ ನೌಕರರ ಸಂಘ 25 ಲಕ್ಷ ರು. ಠೇವಣಿ ಹೊಂದುವ ಮೂಲಕ ಆರ್ಥಿಕ ಶಿಸ್ತು ಕಾಪಾಡಿಕೊಂಡಿದೆ. ಕುರುಬ ಸಮಾಜದವರು ಶೈಕ್ಷಣಿಕವಾಗಿ ಜಾಗೃತಿ ಆಗಿದ್ದಾರೆ. ನಮ್ಮ ಮಕ್ಕಳು ಗಣನೀಯ ಸಾಧನೆ ಮಾಡುತ್ತಿದ್ದು, ಅವರನ್ನು ಗೌರವಿಸಿ ಪ್ರೋತ್ಸಾಹಿಸಿದರೆ ಭವಿಷ್ಯದಲ್ಲಿ ಸಮಾಜಕ್ಕೆ ದೊಡ್ಡ ಆಸ್ತಿ ಆಗುತ್ತಾರೆ ಎಂದರು.ಶ್ರೀ ಕನಕ ನೌಕರರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಕೆ.ವಿ.ಮಹಂತೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ.ಕೆ.ಅನಂತ್, ಕುರುಬ ಸಮಾಜದ ಮುಖಂಡರಾದ ಕಾರೇಹಳ್ಳಿ ಬಸವರಾಜ್, ಆಗ್ರೋ ಶಿವಣ್ಣ ಮಾತನಾಡಿದರು. ಈ ವೇಳೆ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಡಾ.ಎಂ.ಎಚ್.ಕೃಷ್ಣಮೂರ್ತಿ, ತಾಲೂಕು ಕುರುಬ ಸಂಘದ ಅಧ್ಯಕ್ಷ ಮಂಜುನಾಥ್, ಡಾ.ಬಿ.ಎಚ್.ಹನುಮಂತಪ್ಪ, ಎಚ್.ಟಿ.ವೆಂಕಟೇಶ್, ಎಚ್.ಟಿ.ಜಯಣ್ಣ, ಎಂಆರ್‌ಸಿ ಮೂರ್ತಿ ಮತ್ತಿತರರಿದ್ದರು.