ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ನಿಮಿತ್ತ ಬೆಳಗಾವಿ ನಗರದ ರಾಣಿ ಪಾರ್ವತಿದೇವಿ (ಆರ್.ಪಿ.ಡಿ) ಕಾಲೇಜು ತಿಲಕವಾಡಿ ಹಾಗೂ ಚಿಕ್ಕೋಡಿ ನಗರದ ಸಿ.ಟಿ.ಇ ಸೊಸೈಟಿ ಆರ್.ಡಿ.ಪಿ.ಯು ಕಾಲೇಜುಗಳಲ್ಲಿ ಜೂ.4 ರಂದು ಮತ ಎಣಿಕೆ ಕಾರ್ಯ ಜರುಗಲಿದೆ.ಮತ ಎಣಿಕೆ ಕಾರ್ಯದ ಪಾವಿತ್ರ್ಯ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆಯಾದ್ಯಂತ ಚಿಕ್ಕೋಡಿ, ಬೆಳಗಾವಿ ಲೋಕಸಭಾ ಮತಕ್ಷೇತ್ರ, ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರದ ಚನ್ನಮ್ಮನ ಕಿತ್ತೂರು ಮತ್ತು ಖಾನಾಪೂರ ತಾಲೂಕಿನ ವ್ಯಾಪ್ತಿಯಲ್ಲಿ ಜೂ.3 ರಂದು ಸಂಜೆ 5 ಗಂಟೆಯಿಂದ ಜೂ.5 ರ ಬೆಳಗ್ಗೆ 7 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ ಹೊರಡಿಸಿದ್ದಾರೆ. ಈ ವೇಳೆ 5 ಕ್ಕಿಂತ ಹೆಚ್ಚು ಜನರು ಸೇರುವುದು, ಮೆರವಣಿಗೆ ಅಥವಾ ಸಾರ್ವಜನಿಕ, ರಾಜಕೀಯ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ. ನಗರದ ರಾಣಿ ಪಾರ್ವತಿದೇವಿ (ಆರ್.ಪಿ.ಡಿ) ಕಾಲೇಜು ತಿಲಕವಾಡಿ ಹಾಗೂ ಚಿಕ್ಕೋಡಿ ನಗರದ ಸಿಟಿಇ ಸೊಸೈಟಿ ಆರ್.ಡಿ.ಪಿ.ಯು ಕಾಲೇಜು ಚಿಕ್ಕೋಡಿ ಮತ ಎಣಿಕೆ ಕೇಂದ್ರಗಳಲ್ಲಿ ಮತ್ತು ಅವುಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಚುನಾವಣಾ ನಿರತ ಅಧಿಕಾರಿ/ಸಿಬ್ಬಂದಿಯನ್ನು ಹೊರತುಪಡಿಸಿ ಬೇರೆಯವರು ಸಾರ್ವಜನಿಕ/ರಾಜಕೀಯ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ. ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯ ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ.
ಕಲ್ಲುಗಳನ್ನು, ಕ್ಷಾರಪದಾರ್ಥ ಇಲ್ಲವೆ ಸ್ಫೋಟಕ ವಸ್ತುಗಳು ಇತ್ಯಾದಿಗಳನ್ನು ಈ ಸ್ಥಳಕ್ಕೆ ತೆಗೆದುಕೊಂಡು ಹೋಗುವುದು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ.ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸನ ನಿಷೇಧಿಸಲಾಗಿದೆ. ಜತೆಗೆ ಸಾರ್ವಜನಿಕರ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ಕೂಡ ನಿಷೇಧಿಸಲಾಗಿದೆ.ಯಾವುದೇ ವ್ಯಕ್ತಿ ಸಾರ್ವಜನಿಕರಾಗಲಿ ಮೇಲೆ ವಿವರಿಸಿದ ಮಾರಕಾಸ್ತ್ರಗಳು, ಸ್ಫೋಟಕ ವಸ್ತುಗಳು, ವಿನಾಶಕಾರಿ ವಸ್ತು ಹಾಗೂ ಇತರೆ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು ಕಂಡುಬಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಅಲ್ಲದೇ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು. ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ. ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳು ಯಾವತ್ತೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ನಿಯಮಗಳನ್ನು ಪಾಲಿಸುವುದು. ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188ರ ಪ್ರಕಾರ ಕ್ರಮ ಜರುಗಿಸಲಾಗಿಸುವುದು ಎಂದು ಬೆಳಗಾವಿ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.