ಸಾರಾಂಶ
ಬಂಟ್ವಾಳ: ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆಯ ದಿನಗೂಲಿ ಸಿಬ್ಬಂದಿಯೊಬ್ಬರು ಕಚೇರಿಯೊಳಗೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬಿ.ಸಿ. ರೋಡಿನಲ್ಲಿ ನಡೆದಿದೆ. ವೀರಕಂಬ ಗ್ರಾಮದ ಮಜ್ಜೋನಿ ದಿವಂಗತ ಕೃಷ್ಣಪ್ಪ ಮೂಲ್ಯರ ಪುತ್ರ ಜಯರಾಮ ಮೂಲ್ಯ(45) ಮೃತರು. ಅವರು ಕಳೆದ ಸುಮಾರು 30 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿದ್ದಾರೆ. ಶುಕ್ರವಾರ ರಾತ್ರಿ
ನ.29ರಂದು ರಾತ್ರಿ ಪಾಳಿಯಲ್ಲಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಲೆಸುತ್ತಿದಂತಾಗುತ್ತಿದೆ ಎಂದು ಸಂಜೆ ಜೊತೆ ಕೆಲಸಗಾರರಲ್ಲಿ ಹೇಳಿಕೊಂಡಿದ್ದರು ಎಂದು ಹೇಳಲಾಗಿದೆ.ಆ ಬಳಿಕ ಇವರು ಇಲಾಖೆಯೊಳಗೆ ಒಬ್ಬರೇ ಕರ್ತವ್ಯದಲ್ಲಿದ್ದು, ಮುಂಬಾಗಿಲ ಚಿಲಕ ಹಾಕಿಕೊಂಡು ಕೋಣೆಯೊಳಗೆ ಮಲಗಲು ಹೋಗುವ ವೇಳೆ ಟೇಬಲ್ ಮೇಲೆ ಕುಸಿದು ಬಿದ್ದು ಹೃದಯಾಘಾತದಿಂದ ನಿಧನರಾಗಿರಬೇಕು ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಬೆಳಗ್ಗೆ ಸುಮಾರು 6.30 ಆದರೂ ಇಲಾಖೆಯ ಬಾಗಿಲು ಮುಚ್ಚಿರುವುದನ್ನು ಕಂಡು ಇಲಾಖೆಯ ಚಾಲಕ ಜಯರಾಮ ಕಿಟಕಿ ಬಾಗಿಲು ತೆರದು ನೋಡಿದಾಗ ಟೇಬಲ್ ಮೇಲೆ ಜಯರಾಮ ಮೂಲ್ಯ ಅವರು ಬಿದ್ದ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಬಾಗಿಲಿನ ಚಿಲಕ ಮುರಿದು ಒಳಗೆ ಹೋಗಿ ನೋಡಿದಾಗ ಇವರು ಅದಾಗಲೇ ಮೃತಪಟ್ಟ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದಿದೆಯಾದರೂ, ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೃತರು ತಾಯಿ ಹಾಗೂ ಇಬ್ಬರು ಸಹೋದರರು ಹಾಗೂ ಸಹೋದರಿಯನ್ನು ಅಗಲಿದ್ದಾರೆ.