ಕಾರ್ಖಾನೆ ಹಾರುಬೂದಿಗೆ ಕಪ್ಪಾದ ಬದುಕು

| Published : Dec 12 2024, 12:33 AM IST

ಸಾರಾಂಶ

ತಾಲೂಕಿನ ವಿವಿಧೆಡೆ ಇರುವ ಹಲವಾರು ಕಾರ್ಖಾನಗಳಿಂದ ಜನರು ಬದುಕೇ ಕಪ್ಪಾಗಿ ಹೋಗಿದೆ. ಅವರು ಜೀವನ ನಿರ್ವಹಣೆಯೂ ಕಷ್ಟವಾಗಿದ್ದು, ಹಾರು ಬೂದಿಯಿಂದ ಬೆಳೆಯೂ ಕಪ್ಪಾಗುತ್ತಿವೆ. ಇದರಿಂದ ಜನರ ಆರೋಗ್ಯವೂ ಹದಗೆಡುತ್ತಿದೆ.

ಜನ, ಜಾನುವಾರುಗಳಿಗೂ ಸಂಕಷ್ಟ

ಬಿತ್ತಿದ ಬೆಳಗಳು ಬೆಳೆದರೂ ಫಲ ನೀಡದಂತಾಗಿವೆ

ಕಾರ್ಖಾನೆ ತ್ಯಾಜ್ಯದಿಂದ ಹಲವಾರು ರೋಗದ ಆತಂಕಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ತಾಲೂಕಿನ ವಿವಿಧೆಡೆ ಇರುವ ಹಲವಾರು ಕಾರ್ಖಾನಗಳಿಂದ ಜನರು ಬದುಕೇ ಕಪ್ಪಾಗಿ ಹೋಗಿದೆ. ಅವರು ಜೀವನ ನಿರ್ವಹಣೆಯೂ ಕಷ್ಟವಾಗಿದ್ದು, ಹಾರು ಬೂದಿಯಿಂದ ಬೆಳೆಯೂ ಕಪ್ಪಾಗುತ್ತಿವೆ. ಇದರಿಂದ ಜನರ ಆರೋಗ್ಯವೂ ಹದಗೆಡುತ್ತಿದೆ.

ಹೌದು, ಹಿರೇಬಗನಾಳ, ಕುಣಿಕೇರಿ, ಹೊಸಳ್ಳಿ, ಹಾಲವರ್ತಿ, ಮುಂಡರಿ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳಲ್ಲಿ ಕಾರ್ಖಾನೆಗಳಿಂದ ಹೊರಸೂಸುವ ತ್ಯಾಜ್ಯ ಮತ್ತು ಹಾರುಬೂದಿಯಿಂದ ಬದುಕೇ ಕಪ್ಪಾಗಿ ಹೋಗಿದೆ. ಇಲ್ಲಿ ಸುತ್ತಾಡಲೂ ಆಗದಂತೆ ಆಗಿದ್ದು, ಉಸಿರುಗಟ್ಟುತ್ತಿದ್ದರೂ ಪರಿಸರ ಇಲಾಖೆ ಮಾತ್ರ ತನಗೂ ಅದಕ್ಕೂ ಸಂಬಂಧ ಇಲ್ಲದಂತೆ ಇರುವುದು ಅಚ್ಚರಿಗೆ ಕಾರಣವಾಗಿದೆ.

ಕಾರ್ಖಾನೆಗಳ ತ್ಯಾಜ್ಯದಿಂದ ಮನೆಯಲ್ಲಿ ಸಾಮಗ್ರಿ ಕಪ್ಪಾಗುವುದು ಅಷ್ಟೇ ಅಲ್ಲ, ಹೊಲದಲ್ಲಿ ಹಾಕಿದ ಬೆಳೆಯೂ ಸಂಪೂರ್ಣ ಕಪ್ಪಾಗುತ್ತಿವೆ. ಬೆಳೆದು ನಿಂತರೂ ಫಲ ನೀಡದಂತೆ ಆಗಿದೆ.

ಮಳೆಗಾಲದಲ್ಲಿ ಆಗಾಗ ಮಳೆ ಸುರಿಯುವುದರಿಂದ ಹೇಗೋ ಬೆಳೆ ಬರುತ್ತದೆ. ಆದರೆ, ಬೇಸಿಗೆಯಲ್ಲಿ ಮಾತ್ರ ಬೆಳೆ ಬರುವುದೇ ಇಲ್ಲ. ಇದರಿಂದ ರೈತರ ಪಾಡು ದೇವರಿಗೆ ಪ್ರೀತಿ ಎನ್ನುವಂತೆ ಆಗಿದೆ.

ಹಾರು ಬೂದಿ ಎಷ್ಟು ಪ್ರಮಾಣದಲ್ಲಿ ಬರುತ್ತದೆ ಎಂದರೆ ಬೆಳೆದ ಬೆಳೆಯಲ್ಲಿ ಒಂದು ಬಾರಿ ಸುತ್ತಾಡಿದರೆ ಸಾಕು ಮೈಮೇಲಿನ ಬಟ್ಟೆಗಳು ಕಪ್ಪಾಗಿ ಹೋಗುತ್ತವೆ. ಇನ್ನು ರೈತರು ತಮ್ಮ ಹೊಲದಲ್ಲಿ ಕೆಲಸ ಮಾಡಲು ಬೆಳೆಯಲ್ಲಿ ಸುತ್ತಾಡಿದರೆ ಇಡೀ ಬಟ್ಟೆಗಳು ಕಪ್ಪಾಗಿ ಹೋಗುತ್ತವೆ. ಹೊಲದಲ್ಲಿ ಕುಳಿತು ಊಟ ಮಾಡುವಂತೆ ಇಲ್ಲ.

ಜಾನುವಾರುಗಳು ಸಹ ಗೊಡ್ಡು:

ಜಾನುವಾರುಗಳು ಸಹ ಗೊಡ್ಡಾಗುತ್ತಿವೆ. ಹೊಲದಲ್ಲಿ ಬೆಳೆದ ಮೇವನ್ನು ಜಾನುವಾರುಗಳು ತಿನ್ನುವುದೇ ಇಲ್ಲ. ನೀರಿನಿಂದ ತೊಳೆದು ಹಾಕಿದರೂ ಜಾನುವಾರುಗಳು ತಿನ್ನುತ್ತಿಲ್ಲ. ಇದರಿಂದ ಜಾನುವಾರುಗಳು ಉಸಿರಾಟದ ಸಮಸ್ಯೆಯಾಗಿ ನಾನಾ ಕಾಯಿಲೆಯಿಂದ ಬಳಲುತ್ತಿರುವುದರಿಂದ ಅವುಗಳು ಗೊಡ್ಡಾಗುತ್ತಿವೆ ಎನ್ನುತ್ತಾರೆ ರೈತರು.

ಈ ಕುರಿತು ಪರಿಸರ ಇಲಾಖೆಗೆ ಎಷ್ಟೇ ದೂರು ನೀಡಿದರೂ ಸಹ ಅಧಿಕಾರಿಗಳು ಸ್ಪಂದಿಸುತ್ತಲೇ ಇಲ್ಲ. ಹೀಗಾಗಿ ಗ್ರಾಮಸ್ಥರು ಪರಿಸರ ಅಧಿಕಾರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೇಗಾದರೂ ಮಾಡಿ ನಮ್ಮನ್ನು ಕಾಪಾಡಿ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಆದರೆ, ಇವರ ಗೋಳು ಯಾರೂ ಕೇಳುತ್ತಲೇ ಇಲ್ಲ.ಕೊಪ್ಪಳದಲ್ಲೂ ಗೋಳು:

ಈಗಿರುವ ಕಾರ್ಖಾನೆಗಳಿಂದ ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರದಲ್ಲಿ ಹಾರು ಬೂದಿಯ ಸಮಸ್ಯೆ ಕಾಡುತ್ತಿದೆ. ಹೀಗಿರುವಾಗ ಕೊಪ್ಪಳದ ಬಳಿ ಮತ್ತೊಂದು ಬೃಹತ್ ಸ್ಟೀಲ್ ಕಾರ್ಖಾನೆ ತಲೆ ಎತ್ತುತ್ತಿರುವುದರಿಂದ ಕೊಪ್ಪಳಕ್ಕೆ ಹಿರೇಬಗನಾಳ ಗತಿಯೇ ಆಗಲಿದೆ ಎನ್ನುವ ಆತಂಕ ಕಾಡುತ್ತಿದೆ.