ಆಟಿಡೊಂಜಿ ದಿನ, ಕೆಸರ್‌ಡೊಂಜಿ ದಿನ... ಕರಾವಳಿಯ ಬದುಕು, ಸಂಸ್ಕೃತಿ ಮತ್ತು ಆಹಾರ ವೈವಿಧ್ಯತೆಯನ್ನು ಪರಿಚಯಿಸುವ ಇಂತಹ ಆಚರಣೆಗಳನ್ನು ನಾವು ಕೇಳಿದ್ದೇವೆ. ಆದರೆ ‘ಶ್ರಾವಣದಲ್ಲಿ ಒಂದು ದಿನ’ ಎಂಬ ವಿನೂತನ ಪರಿಕಲ್ಪನೆಯ ಮೂಲಕ ಶ್ರಾವಣ ಮಾಸದ ಸೊಗಡನ್ನು ಸಮಾಜದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೇಗೆ ಆಚರಿಸಬಹುದು ಎಂಬುದಕ್ಕೆ ಬಂಟ್ವಾಳ ವಿಶ್ವಕರ್ಮ ಸಮಾಜ ಸೇವಾ ಸಂಘ ಮಾದರಿಯೊಂದನ್ನು ತೋರಿಸಿಕೊಟ್ಟಿತು.
ಬಂಟ್ವಾಳ: ಆಟಿಡೊಂಜಿ ದಿನ, ಕೆಸರ್‌ಡೊಂಜಿ ದಿನ... ಕರಾವಳಿಯ ಬದುಕು, ಸಂಸ್ಕೃತಿ ಮತ್ತು ಆಹಾರ ವೈವಿಧ್ಯತೆಯನ್ನು ಪರಿಚಯಿಸುವ ಇಂತಹ ಆಚರಣೆಗಳನ್ನು ನಾವು ಕೇಳಿದ್ದೇವೆ. ಆದರೆ ‘ಶ್ರಾವಣದಲ್ಲಿ ಒಂದು ದಿನ’ ಎಂಬ ವಿನೂತನ ಪರಿಕಲ್ಪನೆಯ ಮೂಲಕ ಶ್ರಾವಣ ಮಾಸದ ಸೊಗಡನ್ನು ಸಮಾಜದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೇಗೆ ಆಚರಿಸಬಹುದು ಎಂಬುದಕ್ಕೆ ಬಂಟ್ವಾಳ ವಿಶ್ವಕರ್ಮ ಸಮಾಜ ಸೇವಾ ಸಂಘ ಮಾದರಿಯೊಂದನ್ನು ತೋರಿಸಿಕೊಟ್ಟಿತು. ಬಂಟ್ವಾಳದ ಅಜೆಕಲ-ಬಂಟ್ವಾಳದಲ್ಲಿರುವ ವಿಶ್ವಕರ್ಮ ಸಮಾಜ ಸೇವಾ ಸಂಘದ ವಿಶ್ವಕರ್ಮ ಸಮುದಾಯ ಭವನದಲ್ಲಿ ಆ.30ರಂದು ನಡೆದ ‘ಶ್ರಾವಣದಲ್ಲಿ ಒಂದು ದಿನ’ ಕಾರ್ಯಕ್ರಮದಲ್ಲಿ ಪ್ರತಿಯೊಂದು ಮನೆಯಿಂದ ಒಂದೊಂದು ವಿಶೇಷ ರುಚಿಯ ತಿನಿಸು ತಯಾರಿಸಿ ತರಲಾಗಿತ್ತು. ಒಂದೇ ಸ್ಥಳದಲ್ಲಿ ಹಲವು ಬಗೆಯ ಸಾಂಪ್ರದಾಯಿಕ ಹಾಗೂ ವೈವಿಧ್ಯಮಯ ಖಾದ್ಯಗಳು ಸೇರಿ, ಎಲ್ಲರೂ ಒಟ್ಟಾಗಿ ಊಟ ಸವಿದು, ಸಂಭ್ರಮ ಹಂಚಿಕೊಂಡರು. ಇದರ ಜೊತೆಗೆ ವಿವಿಧ ಸ್ಪರ್ಧೆಗಳು, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ಒಂದು ಹಬ್ಬವನ್ನು ಕೇವಲ ಆಚರಣೆಯಾಗಿ ನೋಡದೆ, ಆಹಾರ, ಸಂಸ್ಕಾರ, ಸಂಸ್ಕೃತಿ ಮತ್ತು ಸಮಾಜದ ಒಗ್ಗಟ್ಟಿನ ಉತ್ಸವವನ್ನಾಗಿ ರೂಪಿಸಬಹುದು ಎಂಬುದನ್ನು ಈ ಕಾರ್ಯಕ್ರಮ ಸಾಬೀತುಪಡಿಸಿತು.
ಶ್ರಾವಣದ ಆಚರಣೆಗಳ ಮಹತ್ವವನ್ನು ಸಾರಿದ ಗುರುದಾಸ್ ಆಚಾರ್ಯ, ಕಾರ್ಯಕ್ರಮದ ಕೇಂದ್ರ ಬಿಂದುವಾಗಿ, ಮುಖ್ಯ ಪ್ರವಚನಕಾರರಾಗಿ ಭಾಗವಹಿಸಿದ್ದ ಡಾ. ಎಸ್.ಪಿ. ಗುರುದಾಸ್ ಆಚಾರ್ಯ ಅವರು ಶ್ರಾವಣ ಮಾಸದ ವಿವಿಧ ಧಾರ್ಮಿಕ ಆಚರಣೆಗಳ ಮಹತ್ವವನ್ನು ವಿವರಿಸಿದರು. ಗುರು ಪೂರ್ಣಿಮೆ, ರುಗುಪಾಕರ್ಮ ಹಾಗೂ ವರಮಹಾಲಕ್ಷ್ಮಿ ಪೂಜೆ ಸೇರಿದಂತೆ ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಆಚರಣೆಗಳ ಹಿನ್ನೆಲೆ, ಅವುಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ತಿಳಿಸಿಕೊಟ್ಟರು. ಶ್ರಾವಣ ಮಾಸವು ಕೇವಲ ಪೂಜೆ-ಪುನಸ್ಕಾರಗಳಿಗೆ ಸೀಮಿತವಾಗದೆ, ಗುರು-ಹಿರಿಯರಿಗೆ ಗೌರವ, ಕುಟುಂಬದ ಬಾಂಧವ್ಯ, ಸಂಸ್ಕಾರ ಮತ್ತು ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಾಸವಾಗಬೇಕು ಎಂಬ ಸಂದೇಶ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಅವರು ಸಮಾಜದ ಜಾಗೃತಿಗೆ ಸಂಸ್ಕಾರ ಅತ್ಯಂತ ಮುಖ್ಯ ಎಂಬ ಸಂದೇಶ ನೀಡಿದರು. ಸಂಸ್ಕಾರಯುತ ಕುಟುಂಬವೇ ಜಾಗೃತ ಸಮಾಜದ ನಿರ್ಮಾಣಕ್ಕೆ ಬುನಾದಿ. ನಮ್ಮ ಹಿರಿಯರು ಬೆಳೆಸಿಕೊಂಡು ಬಂದಿರುವ ಮೌಲ್ಯಗಳು, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಯುವ ಜನತೆ ಹಾಗೂ ಮಕ್ಕಳಿಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು. ವಿಶ್ವಜ್ಯೋತಿ ಮಹಿಳಾ ಮಂಡಳಿ ಅಧ್ಯಕ್ಷೆ ವಿದ್ಯಾ ರತ್ನಾಕರ್ ಆಚಾರ್ಯ ಉಪಸ್ಥಿತರಿದ್ದರು.ಆನೆಗುಂದಿ ಗುರುಸೇವಾ ಪರಿಷತ್, ಬಂಟ್ವಾಳ ಘಟಕದ ಕಾರ್ಯದರ್ಶಿ ರಮೇಶ್ ಪುರೋಹಿತ್ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಉಮೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವಕರ್ಮ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಮನೋಜ್ ಆಚಾರ್ಯ ವಂದಿಸಿದರು. ಉಪಾಧ್ಯಕ್ಷ ಸಂದೀಪ್ ಆಚಾರ್ಯ ಅತಿಥಿಗಳನ್ನು ಪರಿಚಯಿಸಿದರು. ಸುಮನಾ ರಾಜೇಶ್ ಆಚಾರ್ಯ ನಿರ್ವಹಿಸಿದರು. ಜಯಚಂದ್ರ ಆಚಾರ್ಯ, ಪ್ರಕಾಶ್ ಆಚಾರ್ಯ, ಪವಿತ್ರ ಆಚಾರ್ಯ, ಸುಮ ಯುವರಾಜ್, ಅನುಷಾ, ವಿದ್ಯಾ ಆಚಾರ್ಯ, ದಿವ್ಯ ಸುಧಾಕರ ಆಚಾರ್ಯ, ಪ್ರಭಾಕರ್ ಆಚಾರ್ಯ ಸಹಕರಿಸಿದರು. ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಕೇಶವ ಆಚಾರ್ಯ, ಓಂ ಪ್ರಕಾಶ್ ಆಚಾರ್ಯ, ಸೌಭಾಗ್ಯ ಆಚಾರ್ಯ ಹಾಗೂ ವಾಣಿ ರಾವ್ ಸಹಕರಿಸಿದರು.
ಮಹಿಳೆಯರ ಕೈರುಚಿ: ‘ಶ್ರಾವಣದಲ್ಲಿ ಒಂದು ದಿನ’ದ ಪ್ರಮುಖ ಆಕರ್ಷಣೆಯೇ ಸಮಾಜದ ಮಹಿಳಾ ಸದಸ್ಯರು ಹಾಗೂ ಸಮಾಜ ಬಾಂಧವರು ಮನೆಗಳಲ್ಲಿ ತಯಾರಿಸಿ ತಂದಿದ್ದ ವೈವಿಧ್ಯಮಯ ಖಾದ್ಯಗಳು. ನೀರ್‌ಪುಂಡಿ, ಕ್ಯಾಪ್ಸಿಕಂ ಪಲ್ಯ, ಕ್ಯಾರೆಟ್ ಹಲ್ವ, ಕಾಶಿ ಹಲ್ವ, ಸಬ್ಬಸಿಗೆ ಇಡ್ಲಿ, ಹೆಸರು-ಬಟಾಟೆ ಗಸಿ, ರಾಗಿ ಮಣ್ಣಿ, ಪುಲಾವ್, ಪತ್ರೊಡೆ ಫ್ರೈ, ಅಂಬಡೆ, ಅಡ್ಕಬಾರೆ ಪಲ್ಯ, ತೊಂಡೆಕಾಯಿ ಎಲೆ ಚಟ್ನಿ, ಹುರುಳಿ ಚಟ್ನಿ, ಹುರುಳಿ-ಬಾಳೆಪೂಂಬೆ ಪಲ್ಯ, ಲಡ್ಡು, ಚಟ್ಟೆಸೊಪ್ಪಿನ ಪಲ್ಯ, ಶೇಮಿಗೆ-ತೋವೆ, ಅಕ್ಕಿ ಉಂಡೆ, ಕೆಸುವಿನ ಚಟ್ನಿ, ಬೆಳ್ಳುಳ್ಳಿ ಚಟ್ನಿ, ಗುಜರಾತಿ ಡೋಕ್ಲಾ, ಮಸಾಲಾ ವಡೆ, ಪುಳಿಯೊಗರೆ, ಉಪ್ಪಡ್ ಪಚ್ಚಿರ್, ಕೊಬ್ಬರಿ ಮಿಠಾಯಿ, ಬಾಳೆದಿಂಡಿನ ಪಲ್ಯ, ಮದ್ದೂರ್ ವಡೆ, ಚಿಗುರಿನ ಚಟ್ನಿ, ಚಟ್ಟಂಬಡೆ ಸೇರಿದಂತೆ ಹಲವು ಬಗೆಯ ಖಾದ್ಯಗಳು ಶ್ರಾವಣದ ಆಹಾರ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪರಿಚಯಿಸಿದವು.ಮಹಿಳೆಯರು, ಮಕ್ಕಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿಶ್ವಕರ್ಮ ಸೇವಾ ಸಂಘ, ಆನೆಗುಂದಿ ಸಂಸ್ಥಾನ ಗುರು ಸೇವಾ ಪರಿಷತ್, ವಿಶ್ವಜ್ಯೋತಿ ಮಹಿಳಾ ಮಂಡಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜ ಬಾಂಧವರು ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಿದರು.