ಹೂವಿನಹಡಗಲಿ: ಭಾರತವನ್ನು ಬ್ರಿಟಿಷರಿಂದ ಮುಕ್ತ ಮಾಡಲು ಹತ್ತಾರು ಹರತಾಳ, ಚಳುವಳಿ, ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಟಗಾರರ ತ್ಯಾಗ ಬಲಿದಾನವನ್ನು ಸ್ಮರಿಸಿ ಗೌರವಿಸುವ ಪವಿತ್ರ ದಿನವೇ ಸ್ವಾತಂತ್ರ್ಯ ದಿನಾಚರಣೆ ಎಂದು ತಹಸೀಲ್ದಾರ್‌ ಕೆ.ಎಂ. ಗುರುಬಸವರಾಜ ಹೇಳಿದರು.

ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ, 80ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ವ್ಯಾಪಾರ ಉದ್ದೇಶಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ನಮ್ಮ ದೇಶದ ಅಸಮರ್ಥತೆ, ಅರಾಜಕತೆಯ ಲಾಭ ಪಡೆಯಲು, ದೇಶ ಸಣ್ಣ ಸಣ್ಣ ಪ್ರದೇಶಗಳನ್ನು ತಮ್ಮ ವ್ಯಾಪ್ತಿಗೆ ಪಡೆದು, ತಮ್ಮದೇ ಆದ ಕಾಯ್ದೆ ಕಾನೂನುಗಳನ್ನು ಜಾರಿಗೆ ತಂದು ನಮ್ಮನ್ನು ಆಳುವ ಮಟ್ಟಕ್ಕೆ ಬೆಳೆದಿದ್ದರು, ಬ್ರಿಟಿಷರು ಈ ದೇಶದಲ್ಲಿ ತಮ್ಮ ಪಾರುಪತ್ಯಕ್ಕೆ ಕೊನೆಗೊಳಿಸಲು ಹೋರಾಟಗಾರರ ದಿಟ್ಟ ನಿರ್ಧಾರದಿಂದ ನಮಗೆ ಸ್ವಾತಂತ್ರ್ಯ ಬಂದಿದೆ. ಆದರೆ ಇಂದು ಸ್ವಾತಂತ್ರ್ಯ ಸ್ವೇಚಾಚಾರವಾಗಿದೆ ಕಾಯ್ದೆ ಕಾನೂನುಗಳ ಉಲ್ಲಂಘಟನೆ ನಡೆಯುತ್ತಿದೆ. ಆದರಿಂದ ಈ ದೇಶದ ಸಂ‍ವಿಧಾನದ ಆಶಯಗಳಿಗೆ ಧಕ್ಕೆ ತರದಂತೆ ನಡೆದುಕೊಳ್ಳಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೃಷ್ಣನಾಯ್ಕ, ವಿಶ್ವದಲ್ಲೇ ಆರ್ಥಿಕತೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ವಿಕಸಿತ ಭಾರತದ ಪರಿಣಾಮವಾಗಿ 4ನೇ ಸ್ಥಾನಕ್ಕೆ ಬಂದಿದೆ. 2047ರ ವೇಳೆ ಮೊದಲ ಸ್ಥಾನದಲ್ಲಿ ಭಾರತ ಬರಲಿದೆ. ಭವಿಷ್ಯದ ಭಾರತ ನಿರ್ಮಾಣಕ್ಕೆ ಎಲ್ಲರೂ ಪಣತೊಡಬೇಕಿದೆ ಎಂದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿದರು. ತಾಪಂ ಇಒ ಜಿ. ಪರಮೇಶ್ವರ, ಸಿಪಿಐ ಮಲ್ಲಪ್ಪ ಎಸ್‌. ಹೂಗಾರ, ಬಿಇಒ ಮಂಗಳಾ ಕೆ., ಪುರಸಭೆ ಮುಖ್ಯಾಧಿಕಾರಿ ಜಿ. ಹನುಮಂತಪ್ಪ, ಕೆ. ಮುದುಕಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ. ಕೊಟ್ರಗೌಡ, ಎನ್‌. ಕೋಟೆಪ್ಪ, ಲಕ್ಷ್ಣಣನಾಯ್ಕ, ಬೀರಬ್ಬಿ ಬಸವರಾಜ, ಟಿ. ಮಹಾಂತೇಶ, ಡಿ. ಪುನೀತ್‌, ಎಚ್‌. ಪೂಜೆಪ್ಪ, ಕೆ. ಕೋಟ್ರೇಶ, ಪುತ್ರೇಶ ಸೇರಿದಂತೆ ಇತರರಿದ್ದರು.

ಇದೇ ವೇಳೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಜರುಗಿತು. ಮಕ್ಕಳಿಂದ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಎಸ್‌.ದ್ವಾರಕೀಶ ರಡ್ಡಿ ನಿರೂಪಿಸಿದರು. ಶಾಲಾ ಮಕ್ಕಳು ಪ್ರಾರ್ಥಿಸಿದರು.