ಸಾರಾಂಶ
ಬುಡಕಟ್ಟು ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದವರ ಮೇಲೆ ಸ್ಥಳೀಯ ಕೆಲವರು ಏಕಾಏಕಿ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ಗುಲ್ವಾಡಿ ಹೊಳೆಯಲ್ಲಿ ತೆಪ್ಪದ ಮೂಲಕ ಮೀನು ಹಿಡಿದು ಗುಡಿಸಲಿನಲ್ಲಿ ಬದುಕುತ್ತಿರುವ ಬುಡಕಟ್ಟು ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದವರ ಮೇಲೆ ಸ್ಥಳೀಯ ಕೆಲವರು ಏಕಾಏಕಿ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೆಂಗಸು ಮಕ್ಕಳೆಂದು ನೋಡದೆ ಎಲ್ಲರ ಮೇಲೂ ಆಯುಧಗಳಿಂದ ಮಾರಣಾಂತಿಕ ಹಲ್ಲೆ, ದಾಂದಲೆ ನಡೆಸಿದ್ದಾರೆ. ಈ ರೀತಿ ದೌರ್ಜನ್ಯ ಮೆರೆದ ತಪ್ಪಿತಸ್ಥ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರಾವಳಿ ವೃತ್ತಿ ನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಕೆಲವು ದಿನಗಳ ಹಿಂದೆ ಈ ಜನರು ಗುಲ್ವಾಡಿ ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದಾಗ ಸ್ಥಳೀಯ ಯುವಕರು ಬಂದು ಮೀನು ಹಿಡಿಯಲು ನೀರಿಗಿಳಿಯದಂತೆ ನಿರ್ಬಂಧ ಹೇರಿ, ಜೀವ ಬೆದರಿಕೆ ಒಡ್ಡಿದ ಬಗ್ಗೆ ಸ್ಥಳೀಯ ಪೊಲೀಸ್ ಮತ್ತು ಮೀನುಗಾರಿಕಾ ಇಲಾಖೆಗೆ ದೂರು ನೀಡಲಾಗಿತ್ತು.ಗುರುವಾರ ಬೆಳಗ್ಗೆ 10.30ಕ್ಕೆ ನಾಲ್ಕೈದು ಯುವಕರು ದೊಣ್ಣೆಗಳನ್ನು ಹಿಡಿದು ಬಂದು ಬಲೆಯಿಂದ ಮೀನು ಬಿಡಿಸುತ್ತಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ.
ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಕರಾವಳಿ ವೃತ್ತಿ ನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಸಮಿತಿಯ ರಾಜ್ಯ ಮುಖಂಡ ಸಂತೋಷ್ ಬಜಾಲ್, ಉಡುಪಿ ಜಿಲ್ಲಾ ಮೀನುಗಾರರ ಸಂಘಟನೆಯ ಮುಖಂಡ ಕವಿರಾಜ್ ಕಾಂಚನ್ ಘಟನೆಯನ್ನು ಒತ್ತಾಯಿಸಿದ್ದಾರೆ.