ಸಾರಾಂಶ
ಗದಗ: ರೇಬಿಸ್ ವೈರಾಣುವಿನಿಂದ ಹರಡುವ ಮಾರಕ ಕಾಯಿಲೆಯಾಗಿದ್ದು, ಇದರ ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ರೋಗವನ್ನು ಸೋಲಿಸುವಲ್ಲಿ ಪ್ರಗತಿ ಸಾಧಿಸಲು ಈ ದಿನವನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಿ.ಸಿ. ಕರಿಗೌಡರ ಹೇಳಿದರು.
ನಗರದ ಜಿಮ್ಸ್ ಸರ್ಕಾರಿ ನರ್ಸಿಂಗ್ ಕಾಲೇಜ್‌ನಲ್ಲಿ ಜಿಲ್ಲಾಡಳಿತ, ಜಿಪಂ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಮಾಹಿತಿ ಶಿಕ್ಷಣ ಮತ್ತು ಸಂವಹನ ವಿಭಾಗದ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ರೇಬಿಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಠೋಡ ಮಾತನಾಡಿ, ರೇಬಿಸ್ ಲಸಿಕೆ ಅಭಿವೃದ್ಧಿಪಡಿಸಿದ ಸೂಕ್ಷ್ಮ ಜೀವ ಶಾಸ್ತ್ರಜ್ಞ ಲೂಯಿಸ್ ಪಾಶ್ಚರ್ ಮರಣದ ವಾರ್ಷಿಕೋತ್ಸವವನ್ನು ವಿಶ್ವ ರೇಬಿಸ್ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.ಪ್ರತಿ ವರ್ಷದಂತೆ ಈ ವರ್ಷದಲ್ಲಿ ರೇಬಿಸ್ ಗಡಿಗಳನ್ನು ಮೀರಿ ಮುಂದುವರೆಯೋಣ ಎಂಬ ಘೋಷವಾಕ್ಯದೊಂದಿಗೆ ವಿಶ್ವ ರೇಬಿಸ್ ದಿನ ಆಚರಿಸುತ್ತಿದ್ದೇವೆ. ಇದೊಂದು ಮಾರಕ ರೋಗವಾಗಿದ್ದು, ಇದನ್ನು ತಡೆಗಟ್ಟಬಹುದಾಗಿದೆ. ವರ್ಷಕ್ಕೆ 20 ಸಾವಿರ ಸಾವುಗಳು ಭಾರತದಲ್ಲಿ ರೇಬಿಸ್‌ನಿಂದ ಆಗುತ್ತಿವೆ. ರೇಬಿಸ್ ಲಸಿಕೆಯ ಬಗ್ಗೆ ಭಯ ಬಿಟ್ಟು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ಕರಿಗೌಡರ ಮಾತನಾಡಿ, ಹಾಲುಣಿಸುವ ತಾಯಂದಿರು 1 ವರ್ಷದೊಳಗಿನ ಮಕ್ಕಳು ಮತ್ತು ವಯಸ್ಕರು ಸಹ ಪ್ರಾಣಿಗಳು ಕಡಿದಾಗ ರೇಬಿಸ್ ವಿರುದ್ಧ ಲಸಿಕೆ ತಪ್ಪದೇ ತೆಗೆದುಕೊಳ್ಳುವ ಮೂಲಕ ಪ್ರತಿಯೊಬ್ಬರೂ ಮುಂಜಾಗ್ರತೆ ವಹಿಸಬೇಕು ಹಾಗೂ ಸಾಕು ಪ್ರಾಣಿಗಳಿಗೂ ಕೂಡ ತಪ್ಪದೇ ಪ್ರತಿ ವರ್ಷ ಲಸಿಕೆ ಹಾಕಿಸಿ ಎಂದರು.ಈ ವೇಳೆ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಸಂಗಮೇಶ ಅಸೂಟಿ, ಡಾ.ಶ್ರೀನಿವಾಸ ಆರೇರ, ರೂಪಸೇನ ಚವ್ಹಾಣ ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು. ಎಂ.ಎಸ್. ರಬ್ಬನಗೌಡ್ರ ನಿರೂಪಿಸಿ, ವಂದಿಸಿದರು.