ಗದಗ: ನ್ಯಾಯಾಂಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಕೇವಲ ಪದವಿ ಸಾಕಾಗುವುದಿಲ್ಲ. ಕಾನೂನು ಜ್ಞಾನ, ವಾದ ಸಾಮರ್ಥ್ಯ, ನೈತಿಕತೆ ಮತ್ತು ಸಮಾಜದ ಮೇಲಿನ ಹೊಣೆಗಾರಿಕೆ ಅಗತ್ಯ ಎಂದು ಕರ್ನಾಟಕ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಬಿ.ಎ. ಪಾಟೀಲ ತಿಳಿಸಿದರು.ನಗರದ ಕೆಎಲ್‌ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಕೆಎಲ್ಇ ಕಾನೂನು ಅಕಾಡೆಮಿಯ 3ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಇಂದಿನ ದಿನಗಳಲ್ಲಿ ಕಾನೂನು ಕ್ಷೇತ್ರದಲ್ಲಿ ಸ್ಪರ್ಧೆ ಹೆಚ್ಚುತ್ತಿದೆ. ಕೇವಲ ಪದವಿ ಪಡೆದು ಯಶಸ್ವಿ ವಕೀಲರಾಗುವುದು ಸಾಧ್ಯವಿಲ್ಲ ಎಂದರು.
ವಾಗ್ಮಿತೆ, ತಾರ್ಕಿಕ ಚಿಂತನೆ, ಆತ್ಮವಿಶ್ವಾಸ, ಸಂಶೋಧನಾ ಸಾಮರ್ಥ್ಯ ಹಾಗೂ ಕ್ಷಣಾರ್ಧದಲ್ಲಿ ಕಾನೂನು ಅಂಶಗಳನ್ನು ಮಂಡಿಸುವ ಕೌಶಲ್ಯ ಅಗತ್ಯವಾಗಿದೆ. ಈ ಎಲ್ಲ ಗುಣಗಳನ್ನು ಬೆಳೆಸುವ ಅತ್ಯುತ್ತಮ ವೇದಿಕೆಯೇ ಅಣಕು ನ್ಯಾಯಾಲಯ. ವಿದ್ಯಾರ್ಥಿಗಳು ಇಲ್ಲಿ ಸೋಲು- ಗೆಲುವಿಗಿಂತ ಹೆಚ್ಚು ಅನುಭವವನ್ನು ಸಂಪಾದಿಸುತ್ತಾರೆ ಎಂದರು.ಹೈಕೋರ್ಟ್ ಮಾಜಿ ನ್ಯಾಯಾಧೀಶ ಉಮೇಶ್ ಅಡಿಗ ಮಾತನಾಡಿ, ಅಣಕು ನ್ಯಾಯಾಲಯ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ನ್ಯಾಯಾಂಗದ ಬಗ್ಗೆ ಆತ್ಮವಿಶ್ವಾಸ ಬೆಳೆಸುವುದರ ಜತೆಗೆ ನ್ಯಾಯಾಲಯದ ಪ್ರಾಯೋಗಿಕ ಅನುಭವವನ್ನು ನೀಡುತ್ತವೆ. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳನ್ನು ಭವಿಷ್ಯದ ಸಮರ್ಥ ವಕೀಲರು ಹಾಗೂ ನ್ಯಾಯಾಧೀಶರನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.ಜಿಲ್ಲಾ ಗ್ರಾಹಕ ಪರಿಹಾರ ಆಯೋಗದ ಅಧ್ಯಕ್ಷ ಎಂ.ಐ. ಶಿಗ್ಲಿ ಮಾತನಾಡಿ, ಕಾನೂನು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಅಣಕು ನ್ಯಾಯಾಲಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನ್ಯಾಯಾಂಗದ ಭವಿಷ್ಯ ಯುವಕರ ಕೈಯಲ್ಲಿದೆ. ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ಸಂವಿಧಾನದ ಮೌಲ್ಯಗಳನ್ನು ಉಳಿಸುವ ಜವಾಬ್ದಾರಿ ಇವರ ಮೇಲಿದೆ. ಇಂತಹ ಸ್ಪರ್ಧೆಗಳು ಕೇವಲ ಟ್ರೋಫಿ ಗೆಲ್ಲುವ ವೇದಿಕೆಗಳಲ್ಲ. ಅವು ದೇಶದ ಭವಿಷ್ಯದ ನ್ಯಾಯಾಧೀಶರು, ವಕೀಲರು ಮತ್ತು ಕಾನೂನು ತಜ್ಞರನ್ನು ರೂಪಿಸುವ ಶಕ್ತಿ ಕೇಂದ್ರಗಳಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಕೆಎಲ್ಇ ಕಾನೂನು ಕಾಲೇಜಿನ ಪ್ರಾ. ಪ್ರೊ. ಡಾ. ಜೆ.ಎಂ. ಮಲ್ಲಿಕಾರ್ಜುನಯ್ಯ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಾಧಾರಿತ ಜ್ಞಾನಕ್ಕೆ ಸೀಮಿತವಾಗದೆ, ನ್ಯಾಯಾಂಗದ ನೈಜ ಪ್ರಕ್ರಿಯೆಗಳನ್ನು ಅರಿತುಕೊಳ್ಳಲು ಇಂತಹ ಸ್ಪರ್ಧೆಗಳು ಅತ್ಯಂತ ಅಗತ್ಯವಿದೆ ಎಂದರು.ಈ ವೇಳೆ ಸ್ಥಾನಿಕ ಮಂಡಳಿಯ ಅಧ್ಯಕ್ಷ ಎಸ್.ಎ. ಮಾನ್ವಿ, ಸದಸ್ಯರಾದ ಎಸ್.ಎಫ್. ಹಾದಿಮನಿ, ಎಸ್.ಜಿ. ಶಿಳ್ಳಿಕೇರಿ, ಡಾ. ಸಂಜೀವ ಹುಲ್ಲೂರ, ಡಾ. ವಿಜಯ ಮುರದಂಡೆ, ಡಾ. ಶ್ರೀನಿವಾಸ ಪಾಲ್ಗೊಂಡ, ಡಾ. ಜ್ಯೋತಿ ಸಿ.ವಿ., ಡಾ. ಸಿ.ವಿ. ರಣಗಟ್ಟಿಮಠ ಸೇರಿದಂತೆ ವಕೀಲರು ಹಾಗೂ ವಿದ್ಯಾರ್ಥಿಗಳು ಇದ್ದರು.
ಬಿಎಂಎಸ್ ಕಾಲೇಜು ಅತ್ಯುತ್ತಮ ಪ್ರದರ್ಶನ
ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜು ಅತ್ಯುತ್ತಮ ಪ್ರದರ್ಶನ ನೀಡಿ ವಿಜೇತಪಟ್ಟ ತನ್ನದಾಗಿಸಿಕೊಂಡಿತು. ಹುಬ್ಬಳ್ಳಿಯ ಕೆಎಲ್ಇ ಸೊಸೈಟಿಯ ಜಿಕೆ ಕಾನೂನು ಕಾಲೇಜು ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.
ಅತ್ಯುತ್ತಮ ಮೆಮೋರಿಯಲ್ ಪ್ರಶಸ್ತಿಯನ್ನು ಬೆಂಗಳೂರಿನ ಕೆಎಲ್ಇ ಕಾನೂನು ಕಾಲೇಜು ಪಡೆದರೆ, ಅತ್ಯುತ್ತಮ ಮಹಿಳಾ ನ್ಯಾಯವಾದಿ ಪ್ರಶಸ್ತಿ ಬೆಂಗಳೂರಿನ ವಿವೇಕಾನಂದ ಕಾನೂನು ಕಾಲೇಜಿನ ವಿಜುಷಾ ಅವರಿಗೆ ದೊರೆಯಿತು. ಅತ್ಯುತ್ತಮ ಪುರುಷ ನ್ಯಾಯವಾದಿ ಪ್ರಶಸ್ತಿಯನ್ನು ಹುಬ್ಬಳ್ಳಿಯ ಕೆಎಸ್‌ಎಲ್‌ಯು ಕಾನೂನು ಕಾಲೇಜಿನ ದರ್ಶನ್ ಪಡೆದು ಗಮನ ಸೆಳೆದರು.