ವಿವಿಗಳಿಂದ ಡಿಗ್ರಿ ಪಡೆದ ಯುವಕರು ಉದ್ಯೋಗಿಗಳಾಗುವುದಷ್ಟೇ ಅಲ್ಲ; ಉದ್ಯೋಗದಾತರಾಗಿ. ಉದ್ಯಮಶೀಲತೆಯಿಂದ ಹೊಸ ಸ್ಟಾರ್ಟಪ್, ನಾವೀನ್ಯತೆ ಹುಟ್ಟುಹಾಕುವ ಮೂಲಕ ಇತರರಿಗೆ ಅವಕಾಶ ಸೃಷ್ಟಿಸುವವರಾಗಿ.
ಬಳ್ಳಾರಿ: ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಪಡೆದಿರುವ ಪದವಿಗಳು ಕೇವಲ ಕಾಗದದ ತುಂಡಲ್ಲ. ಅದು ಅವರ ಪರಿಶ್ರಮದ ಫಲಿತದ ಪ್ರಮಾಣಪತ್ರ ಹಾಗೂ ಸಮಾಜದ ಮೇಲಿನ ಜವಾಬ್ದಾರಿಯ ಪಾಸ್ ಪೋರ್ಟ್ ಆಗಿದೆ ಎಂದು ರಾಜ್ಯಪಾಲ ಡಾ. ಸುಧಾ ಯಾದವ್ ಅವರು ಹೇಳಿದರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ 2024-25ನೇ ಸಾಲಿನ 14ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿವಿಗಳಿಂದ ಡಿಗ್ರಿ ಪಡೆದ ಯುವಕರು ಉದ್ಯೋಗಿಗಳಾಗುವುದಷ್ಟೇ ಅಲ್ಲ; ಉದ್ಯೋಗದಾತರಾಗಿ. ಉದ್ಯಮಶೀಲತೆಯಿಂದ ಹೊಸ ಸ್ಟಾರ್ಟಪ್, ನಾವೀನ್ಯತೆ ಹುಟ್ಟುಹಾಕುವ ಮೂಲಕ ಇತರರಿಗೆ ಅವಕಾಶ ಸೃಷ್ಟಿಸುವವರಾಗಿ ಎಂದರು.ನಿರಂತರ ಕಲಿಕೆಯ ಹಂಬಲ ಇರಲಿ. ತಂತ್ರಜ್ಞಾನ ಪ್ರತಿದಿನ ಬದಲಾಗುತ್ತಿದೆ. ಎಐ ಮತ್ತು ಡಿಜಿಟಲ್ ಯುಗದಲ್ಲಿ ಪ್ರತಿದಿನ ನೀವು ಅಪ್ಡೇಟ್ ಮಾಡಿಕೊಳ್ಳಿ. ಪ್ರಕೃತಿಯ ರಕ್ಷಕರಾಗಿ - ಪರಿಸರ ಅಸಮತೋಲನ ಇಂದಿನ ಅತಿ ದೊಡ್ಡ ಸವಾಲಾಗಿದ್ದು ಪ್ರಕೃತಿ ಸಂರಕ್ಷಣೆ ಕಾರ್ಯ ನಿಮ್ಮ ಜೀವನಶೈಲಿಯಾಗಲಿ. ಸ್ವಾಮಿ ವಿವೇಕಾನಂದರ ಸ್ಪಷ್ಟ ಸಂದೇಶದಂತೆ ಚರಿತ್ರೆ, ಮಾನಸಿಕ ವಿಕಾಸ, ಮತ್ತು ಬುದ್ಧಿಯ ವಿಕಾಸವನ್ನುಂಟುಮಾಡುವ ಶಿಕ್ಷಣ ಇಂದಿನ ಯುವ ಸಮುದಾಯಕ್ಕೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಎಐಯಿಂದ ಬುದ್ಧಿಶಕ್ತಿಯನ್ನು ದುರ್ಬಲಗೊಳಿಸುವ ಅಪಾಯ: ಘಟಿಕೋತ್ಸವ ಭಾಷಣ ಮಾಡಿದ ಕರ್ನಾಟಕ ಮತ್ತು ಒಡಿಶಾ ಉಚ್ಚ ನ್ಯಾಯಾಲಯಗಳ ನಿವೃತ್ತ ನ್ಯಾಯಾಧೀಶ ಡಾ.ಕೃಷ್ಣ ಎಸ್. ದೀಕ್ಷಿತ್ ಅವರು ಇಂದು ಜಗತ್ತು ಕೃತಕ ಬುದ್ಧಿಮತ್ತೆಯ (ಎಐ) ಸುನಾಮಿಯನ್ನು ಎದುರಿಸುತ್ತಿದೆ. ಇದು ಮನುಷ್ಯನ ಸಹಜ ಬುದ್ಧಿಶಕ್ತಿಯನ್ನೇ ದುರ್ಬಲಗೊಳಿಸುವ ಅಪಾಯ ತಂದೊಡ್ಡಿದೆ. ವಿದ್ಯಾರ್ಥಿಗಳು ಎಐ ತಂತ್ರಜ್ಞಾನವನ್ನು ಕಲಿಯಬೇಕು ಮತ್ತು ಬಳಸಬೆಕು. ಆದರೆ, ಅದರಿಂದ ನಮ್ಮ ಮೆದುಳು ಯೋಚಿಸುವುದನ್ನು ನಿಲ್ಲಿಸುವಂತಾಗಬಾರದು. ಎಐ ಮಾನವನ ಸೇವೆ ಮಾಡುವ ಸಾಧನವಾಗಬೇಕೇ ಹೊರತು, ಮಾನವನೇ ಎಐಗೆ ಸೇವಕನಾದರೆ ಅದು ಮನುಕುಲಕ್ಕೆ ವಿನಾಶಕಾರಿ ಎಂದರು.ಭಾರತದಲ್ಲಿ ಪ್ರತಿಭಾ ಪಲಾಯನ ನಿರಂತರವಾಗಿ ನಡೆಯುತ್ತಿದೆ. ಭಾರತದಲ್ಲಿ ಉನ್ನತ ಶಿಕ್ಷಣ ಪಡೆದ ಸುಮಾರು ಆರು ಲಕ್ಷ ಪ್ರತಿಭಾನ್ವಿತರು ಪ್ರತಿವರ್ಷ ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಶಿಕ್ಷಣ ಉದ್ದೇಶ ಕೇವಲ ಮಾಹಿತಿ ಕೊಡುವುದಲ್ಲ. ಆ ಮಾಹಿತಿಯನ್ನು ನಿಜವಾದ ಜ್ಞಾನವನ್ನಾಗಿ, ನಂತರ ಸಮಾಜದ ಒಳಿತಿಗಾಗಿ ಬಳಸಬಹುದಾದ ವಿವೇಕವನ್ನಾಗಿ ಬದಲಾಯಿಸುವುದಾಗಿದೆ. ಜ್ಞಾನದ ರಾಶಿಯಲ್ಲಿ ನಾವು ವಿವೇಕವನ್ನು ಕಳೆದುಕೊಂಡಿದ್ದೇವೆ. ಮಾಹಿತಿಯ ರಾಶಿಯ ನಡುವೆ ಜ್ಞಾನವನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಿದರಲ್ಲದೆ, ಚಾರಿತ್ರ್ಯ ನಿರ್ಮಾಣದಲ್ಲಿ ನೈತಿಕ ಶಿಕ್ಷಣ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ರಾಷ್ಟ್ರೀಯತೆ, ದೇಶಭಕ್ತಿ, ಭ್ರಾತೃತ್ವ ಹಾಗೂ ಎಲ್ಲರನ್ನೂ ಒಪ್ಪಿಕೊಳ್ಳುವ ವಿಶಾಲ ಮನೋಭಾವ ಬೆಳೆಸಬೇಕು ಎಂದರು.ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಮುನಿರಾಜು ಅವರು ಪ್ರಾಸ್ತಾವಿಕ ಮಾತನಾಡಿದರು. ಕುಲಸಚಿವ ಪ್ರೊ. ವಿ.ಲೋಕೇಶ್ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ. ಪಿ.ಕಣ್ಣನ್ ಸೇರಿದಂತೆ ವಿವಿಯ ಎಲ್ಲಾ ನಿಕಾಯಗಳ ಡೀನರು, ಮುಖ್ಯಸ್ಥರು, ವಿವಿಧ ಮಹಾವಿದ್ಯಾಲಯದ ಪ್ರಾಂಶುಪಾಲರು, ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 14 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಒಟ್ಟಾರೆಯಾಗಿ ಶೇ. 95.33ರಷ್ಟು ಫಲಿತಾಂಶ ದಾಖಲಾಗಿದ್ದು, ವಿವಿಧ ವಿಭಾಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡಲಾಯಿತು. ಚಿನ್ನದ ಪದಕಗಳು: ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು ಒಟ್ಟು 50 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು. ಪಿಎಚ್ಡಿ ಪದವಿ: ವಿವಿಧ ವಿಭಾಗಗಳ ಒಟ್ಟು 52 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆದರು. ಸ್ನಾತಕ ಪದವಿಯಿಂದ 66 ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿಯಿಂದ 71 ವಿದ್ಯಾರ್ಥಿಗಳು ಸೇರಿ ಒಟ್ಟು 137 ವಿದ್ಯಾರ್ಥಿಗಳು ರ್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆದುಕೊಂಡರು.ಸಿ.ಚನ್ನಬಸವಣ್ಣ, ಹೆನ್ರಿ ಡಿಸೋಜಾ, ಗೀತಾ ನಾಗಪಾಲ್ರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ 2024-25ನೇ ಸಾಲಿನ 14ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ನಾಡಿನ ಹಿರಿಯ ಚಿಂತಕ ಹಾಗೂ ಲೋಹಿಯಾ ಪ್ರಕಾಶನದ ಮುಖ್ಯಸ್ಥ ಸಿ.ಚನ್ನಬಸವಣ್ಣ, ಶಿಕ್ಷಣ ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಕ್ರೈಸ್ತ ಧರ್ಮಗುರು ಡಾ.ಹೆನ್ರಿ ಡಿಸೋಜಾ ಹಾಗೂ ಶಿಕ್ಷಣ, ಕಲೆ ಹಾಗೂ ಸಮಾಜಸೇವೆಯಲ್ಲಿರುವ ಗೀತಾ ನಾಗಪಾಲ್ ಅವರಿಗೆ ರಾಜ್ಯಪಾಲ ಡಾ. ಸುಧಾ ಯಾದವ್ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಕರ್ನಾಟಕ ಮತ್ತು ಒಡಿಶಾ ಉಚ್ಚ ನ್ಯಾಯಾಲಯಗಳ ನಿವೃತ್ತ ನ್ಯಾಯಾಧೀಶ ಡಾ.ಕೃಷ್ಣ ಎಸ್. ದೀಕ್ಷಿತ್, ಕುಲಸಚಿವ ಪ್ರೊ. ವಿ.ಲೋಕೇಶ್ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ. ಪಿ.ಕಣ್ಣನ್ ಅವರು ಉಪಸ್ಥಿತರಿದ್ದರು.ಚಿನ್ನದ ಪದಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳ ಪಟ್ಟಿ:ಸ್ನಾತಕೋತ್ತರ ಪದವಿ ವಿಭಾಗ:
4 ಚಿನ್ನದ ಪದಕಗಳು: ಸವಿತಾ (ವಾಣಿಜ್ಯಶಾಸ್ತ್ರ ವಿಭಾಗ) - ಶ್ರೀ ಗುರು ತಿಪ್ಪೇರುದ್ರ ಕಾಲೇಜು, ಬಳ್ಳಾರಿ.3 ಚಿನ್ನದ ಪದಕಗಳು: ತಸ್ಮಿಯಾಬಾನು ಆರ್ (ಔದ್ಯೋಗಿಕ ರಸಾಯನಶಾಸ್ತ್ರ) - ವಿಶ್ರೀಕೃವಿವಿ ಮುಖ್ಯ ಆವರಣ, ಬಳ್ಳಾರಿ.2 ಚಿನ್ನದ ಪದಕಗಳು:ಉಜ್ಜನಿ ಈಶ್ವರ (ಭೌತಶಾಸ್ತ್ರ) - ವಿಶ್ರೀಕೃವಿವಿ ಮುಖ್ಯ ಆವರಣ, ಬಳ್ಳಾರಿ.
ಸಮ್ರೀನ್ (ರಸಾಯನಶಾಸ್ತ್ರ) - ವಿಶ್ರೀಕೃವಿವಿ ಮುಖ್ಯ ಆವರಣ, ಬಳ್ಳಾರಿ.ಪದ್ಮಾವತಿ ಕೆ (ಸಮಾಜಕಾರ್ಯ) - ವಿಶ್ರೀಕೃವಿವಿ ಮುಖ್ಯ ಆವರಣ, ಬಳ್ಳಾರಿ.ಮಹಾಲಿಂಗಪ್ಪ ತಂಬ್ರಹಳ್ಳಿ (ಇತಿಹಾಸ ಮತ್ತು ಪುರಾತತ್ವ) - ಸ್ನಾತಕೋತ್ತರ ಕೇಂದ್ರ, ನಂದಿಹಳ್ಳಿ.ಸ್ನಾತಕ ಪದವಿ ವಿಭಾಗ:
ಪೂಜಾ (ಬಿ.ಕಾಂ) - ಬಿಬಿಸಿ ಕಾಲೇಜು, ಬಳ್ಳಾರಿ.ಅಜಯ್ (ಬಿ.ಎಸ್ಸಿ) - ಜಿವಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಗರಿಬೊಮ್ಮನಹಳ್ಳಿ.ಬಸಮ್ಮ (ಬಿ.ಎ.) - ಜ್ಞಾನ ಭಾರತಿ ಡಿಗ್ರಿ ಕಾಲೇಜು, ಬಳ್ಳಾರಿ.ಬಿ ಕಾವ್ಯ (ಬಿ.ಎಸ್.ಡಬ್ಲ್ಯೂ) - ಗಂಗೋತ್ರಿ ಪದವಿ ಕಾಲೇಜು, ಕೊಟ್ಟೂರು.
ಈ ಬಾರಿ ವಿಶ್ವವಿದ್ಯಾಲಯವು ಒಟ್ಟಾರೆಯಾಗಿ ಶೇ. 95.33ರಷ್ಟು ಉತ್ತಮ ಫಲಿತಾಂಶ ದಾಖಲಿಸಿದೆ. ಪರೀಕ್ಷೆಯಲ್ಲಿ ಸ್ನಾತಕ ಪದವಿಯಲ್ಲಿ 13,346 ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಮತ್ತು ಡಿಪ್ಲೋಮಾ ವಿಭಾಗದಲ್ಲಿ 1,448 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ.