ಕನ್ನಡಪ್ರಭ ವಾರ್ತೆ ಹುಣಸೂರುಪಟ್ಟಣದ ಪ. ಜಾತಿ, ವರ್ಗಗಳ ಮಹಿಳೆಯರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಕ್ಕೆ ಉಪವಿಭಾಗಾಧಿಕಾರಿ ಕೆ.ವಿ. ಕಾವ್ಯರಾಣಿ ಮಂಗಳವಾರ ಸಂಜೆ ದಿಢೀರ್ ಭೇಟಿ ನೀಡಿ ಹಾಸ್ಟೆಲ್ ನ ಅವ್ಯವಸ್ಥೆ ಕಂಡು ಅವಾಕ್ಕಾದರು.., ವಿದ್ಯಾರ್ಥಿನಿಯರು ದೂರುಗಳ ಸುರಿಮಳೆಯನ್ನೇ ಸುರಿಸಿದರು., ನಂತರ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.. ಪಟ್ಟಣದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಳಿಯಿರುವ ಹಾಸ್ಟೆಲ್ಗೆ ಉಪವಿಭಾಗಾಧಿಕಾರಿ ಮಂಗಳವಾರ ಸಂಜೆ 7ರ ಸಮಯದಲ್ಲಿ ದಿಢೀರ್ ಭೇಟಿ ನೀಡಿದಾಗ ಹಾಸ್ಟೆಲ್ಲಿನ ಅಶಿಸ್ತಿನ ನಿರ್ವಹಣೆ ಕಣ್ಣಿಗೆ ರಾಚಿತು. ಶುದ್ಧ ಕುಡಿಯುವ ನೀರಿನ ಘಟಕ ಶುಚಿತ್ವದ ಕೊರತೆಯಿಂದ ಧೂಳು ಮೆತ್ತಿಕೊಂಡಿತ್ತು. ರಾತ್ರಿ ಊಟಕ್ಕಾಗಿ ಬೇಯಿಸಿದ ಅನ್ನ ಮುದ್ದೆಯಂತಾಗಿತ್ತು. ಉಗ್ರಾಣದಲ್ಲಿ ತರಕಾರಿಯೆಂದರೆ ಟೊಮ್ಯಾಟೋ, ಬದನೆಕಾಯಿ ಮಾತ್ರ ಎನ್ನುವಂತಿತ್ತು. ವಿದ್ಯಾರ್ಥಿನಿಯರು ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಜನವರಿ ತಿಂಗಳಿನಿಂದ ಪ್ಯಾಡ್ ನೀಡಿಲ್ಲ. ಊಟದ ಮೆನುವಿನಂತೆ ಊಟ ನೀಡುತ್ತಾರೆ. ಆದರೆ ಶುಚಿ, ರುಚಿ ಅಷ್ಟರಲ್ಲೇ. 60 ವಿದ್ಯಾರ್ಥಿನಿಯರಿಗೆ ಅಗತ್ಯ ಪ್ರಮಾಣದ ಚಿಕನ್ ಊಟ ನೀಡುತ್ತಿಲ್ಲ. ಡೈನಿಂಗ್ ಟೇಬಲ್ ಶುಚಿಯಾಗಿರುವುದಿಲ್ಲ. ಅಡುಗೆ ಸಹಾಯಕರು ನಾಲ್ವರು ಇದ್ದರೂ ಶುಚಿತ್ವವನ್ನು ಕಾಪಾಡುತ್ತಿಲ್ಲ. ರಾತ್ರಿ ಊಟದ ವೇಳೆ ಕಾರಣಾಂತರಗಳಿಂದ ತಡವಾಗಿ ಬಂದರೆ ಬಾಳೆ ಹಣ್ಣು, ಮೊಟ್ಟೆ ಸಿಗುವುದೇ ಇಲ್ಲ ಎಂದು ದೂರಿದರು.ವಿದ್ಯಾರ್ಥಿನಿಲಯದ ವಾರ್ಡನ್ ಪುಷ್ಪ ಮಾತನಾಡಿ, ಇಬ್ಬರು ಕಾಯಂ ಅಡುಗೆ ಸಹಾಯಕರು ಮತ್ತು ಇಬ್ಬರು ಹೊರ ಗುತ್ತಿಗೆಯವರು ಕಾರ್ಯ ನಿರ್ವಹಿಸುತ್ತಿದ್ದು, ಅವರ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ಕೆಲವೊಮ್ಮೆ ತೊಂದರೆಗಳಾಗುತ್ತಿದೆ. ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಸರ್ಕಾರದಿಂದ ಪ್ಯಾಡ್ ವಿತರಣೆ ವಿಳಂಬವಾದ ಕಾರಣ ತಾತ್ಕಾಲಿಕವಾಗಿ ಸ್ಥಳೀಯವಾಗಿ ಖರೀದಿಸಿ ವಿತರಿಸಲು ಹಿರಿಯ ಅಧಿಕಾರಿಗಳ ಅನುಮತಿ ಪಡೆದು ವಿತರಿಸುವ ವ್ಯವಸ್ಥೆ ಮಾಡುತ್ತೇನೆ. ಸರ್ಕಾರ ಸೂಚಿಸಿರುವ ಮೆನುವಿನಂತೆಯೇ ಊಟ, ತಿಂಡಿ ನೀಡಲಾಗುತ್ತಿದೆ ಎಂದು ತಿಳಿಸಿದರು.ಉಪವಿಭಾಗಾಧಿಕಾರಿ ಕೆ.ವಿ. ಕಾವ್ಯರಾಣಿ ಮಾತನಾಡಿ, ಹಾಸ್ಟೆಲ್ ನಲ್ಲಿನ ಅವ್ಯವಸ್ಥೆ ಬಗ್ಗೆ ದೂರುಗಳು ಬಂದ ಹಿನ್ನೆಲೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದೇನೆ. ವ್ಯವಸ್ಥೆ ಸಮಾಧಾನಕರವಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಅಡುಗೆ ಸಹಾಯಕರಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ವರ್ಗಾವಣೆ ಮಾಡಿರಿ. ಗುತ್ತಿಗೆ ನೌಕರರು ಸರಿಯಾಗಿ ಕರ್ತವ್ಯ ನಿರ್ವಹಿಸಿದ್ದರೆ, ಕೆಲಸದಿಂದ ವಜಾಗೊಳಿಸಿ ಹೊಸಬರನ್ನು ನೇಮಿಸಿಕೊಳ್ಳಬೇಕು.ಬಡ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಉಪಕ್ರಮಗಳನ್ನು ಶೀಘ್ರ ಕೈಗೊಳ್ಳಿರಿ. ಶುಚಿತ್ವ ಮತ್ತು ನೈರ್ಮಲ್ಯ ಪರಿಸರ ನಿರ್ಮಿಸಿಕೊಳ್ಳಿ .. ತಿಂಗಳ ನಂತರ ಮತ್ತೆ ಭೇಟಿ ನೀಡುತ್ತೇನೆ. ಆಗಲೂ ಪರಿಸ್ಥಿತಿ ಹೀಗೇ ಮುಂದುವರೆದಿದ್ದಲ್ಲಿ ಶಿಸ್ತಿನ ಕ್ರಮಕ್ಕೆ ಮುಂದಾಗುತ್ತೇನೆಂದು ಎಚ್ಚರಿಸಿದರು. ವಿದ್ಯಾರ್ಥಿನಿಯರೂ ಕೂಡ ವ್ಯಾಸಂಗವನ್ನು ಹೊರತುಪಡಿಸಿ ಇನ್ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಬಾರದು. ಸಮಯದ ಪಾಲನೆ ನಿಮ್ಮಿಂದಲೂ ಅಗಬೇಕು. ನಿಮ್ಮ ಮೇಲಿರುವ ಆರೋಪಗಳೂ ಕೂಡ ಮುಂದೆ ಆಗದಂತೆ ಎಚ್ಚರವಹಿಸಿ ಎಂದರು. ಭೇಟಿ ವೇಳೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರೇಣುಕಾಪ್ರಸಾದ್ ಇದ್ದರು.-------------------
ಮಹಿಳೆಯರ ಹಾಸ್ಟೆಲ್ ಎಸಿ ಕೆ.ವಿ. ಕಾವ್ಯರಾಣಿ ದಿಢೀರ್ ಭೇಟಿ
ಜನವರಿ ತಿಂಗಳಿನಿಂದ ಪ್ಯಾಡ್ ನೀಡಿಲ್ಲ. ಊಟದ ಮೆನುವಿನಂತೆ ಊಟ ನೀಡುತ್ತಾರೆ. ಆದರೆ ಶುಚಿ, ರುಚಿ ಅಷ್ಟರಲ್ಲೇ. 60 ವಿದ್ಯಾರ್ಥಿನಿಯರಿಗೆ ಅಗತ್ಯ ಪ್ರಮಾಣದ ಚಿಕನ್ ಊಟ ನೀಡುತ್ತಿಲ್ಲ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.