ಸಾರಾಂಶ
ಕೊನೆ ಹಂತದವರೆಗೂ ನೀರು ತಲುಪಲಿದೆ ಎಂದು ರೈತರಿಗೆ ಭರವಸೆ ನೀಡಿದ ಹಿನ್ನೆಲೆ ರೈತರು ರಸ್ತೆ ತಡೆ ವಾಪಸ್
ಕನ್ನಡಪ್ರಭ ವಾರ್ತೆ ಬನ್ನೂರು
ರಾಜ್ಯದಲ್ಲಿ ಉತ್ತಮ ಮಳೆಯಿಂದ ಎಲ್ಲ ಅಣೆಕಟ್ಟುಗಳು ತುಂಬಿ ರೈತರ ಮನಸ್ಸಿಗೆ ಮುದ ನೀಡಿದ್ದರೆ, ಇಲ್ಲಿ ಅಧಿಕಾರಿಗಳು ನಾಲೆ ಮತ್ತು ಕೆರೆಕಟ್ಟೆಗಳಿಗೆ ನೀರು ತುಂಬಿಸದೆ ಬೇಜವಾಬ್ದಾರಿಯಿಂದ ರೈತರ ಮೇಲೆ ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆಯ ಸದಸ್ಯರು, ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟಿಸಿದರು.ಪಟ್ಟಣದ ಸಂತೆಮಾಳದಲ್ಲಿ ಎಲ್ಲ ರೈತರು ಒಂದೆಡೆ ಸೇರಿ ಮೈಸೂರು, ಮಳವಳ್ಳಿ, ನರಸೀಪುರ, ಮಂಡ್ಯ ರಸ್ತೆಯ ವರ್ತುಲ ರಸ್ತೆಯನ್ನು ತಡೆದು ಪ್ರತಿಭಟಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆ ಅಧ್ಯಕ್ಷ ನಾರಾಯಣ, ತುರಗನೂರು ಬ್ರಾಂಚ್ ಉಕ್ಕಲಗೆರೆ ನಾಲೆ ಹಾಗೂ ಕೆರೆಕಟ್ಟೆಗಳಿಗೆ ನೀರು ತುಂಬಿಸುವಂತೆ ಸಂಬಂಧಿಸಿದ ನೀರಾವರಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದೆ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಇದರಿಂದ ವ್ಯವಸಾಯ ನಂಬಿ ಕುಳಿತ ರೈತರಿಗೆ ನಾಟಿ ಮಾಡಲು ಸಾಧ್ಯವಾಗಿಲ್ಲ. ಅಲ್ಲದೇ ನಾಲೆಗಳಲ್ಲಿ ಜೊಂಡು ಸೇರಿದಂತೆ ಕಸದ ರಾಶಿಯಿಂದ ನೀರು ಸಮರ್ಪಕವಾಗಿ ಕೊನೆ ಹಂತವನ್ನು ತಲುಪದೇ ರೈತರು ಪರಿತಪಿಸುವಂತಾಗಿದೆ ಎಂದು ತಿಳಿಸಿದರು.ಸ್ಥಳಕ್ಕೆ ಆಗಮಿಸಿದ ಕಾರ್ಯಪಾಲಕ ಎಂಜಿನಿಯರ್ವಾಸುದೇವು ಮಾತನಾಡಿ, ಕೂಡಲೆ ನೀರನ್ನು ಬಿಡುವುದಾಗಿ ಭರವಸೆ ನೀಡಿ, ಕಾಲುವೆಯನ್ನು ಜೊಂಡುಗಳಿಂದ ತೆರವುಗೊಳಿಸುವಂತ ಕಾರ್ಯ ಪ್ರಗತಿಯಲ್ಲಿದ್ದು, ಕೊನೆ ಹಂತದವರೆಗೂ ನೀರು ತಲುಪಲಿದೆ ಎಂದು ರೈತರಿಗೆ ಭರವಸೆ ನೀಡಿದ ಹಿನ್ನೆಲೆ ರೈತರು ರಸ್ತೆ ತಡೆ ವಾಪಸ್ ಪಡೆದರು.
ನಂತರ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ರಂಗಸ್ವಾಮಿ, ಶಿವರಾಮು, ಲಿಂಗರಾಜು, ಪ್ರಕಾಶ್, ಕುಮಾರ್, ವೆಂಟಕರಂಗಶೆಟ್ಟಿ, ಚಿಕ್ಕಸ್ವಾಮಿ, ರಾಜಣ್ಣ, ರಾಜಕುಮಾರ, ನಾಗೇಶ್, ಪಾರ್ಥ, ಕೃಷ್ಣೇಗೌಡ, ರೈತರು ಇದ್ದರು.