ಕೊಲ್ಕತ್ತಾ ವೈದ್ಯೆ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹ

| Published : Sep 04 2024, 01:52 AM IST

ಸಾರಾಂಶ

ಶಿವಮೊಗ್ಗ ಸೀನಪ್ಪಶೆಟ್ಟಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಲ್ಕತ್ತಾದ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ರೋಟರಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೊಲ್ಕತ್ತಾದ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ರೋಟರಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಶಿವಮೊಗ್ಗ ನಗರದ ಎಂಟು ರೋಟರಿ ಕ್ಲಬ್ ಹಾಗೂ 5 ಇನ್ನರ್‌ವ್ಹೀಲ್ ಸಂಸ್ಥೆಗಳು, ಒಕ್ಕಲಿಗರ ಮಹಿಳಾ ವೇದಿಕೆ, ಕದಳಿ ಸಮಾಜ, ದೈವಜ್ಞ ಮಹಿಳಾ ಮಂಡಳಿ, ಪ್ರೇರಣ ಮಹಿಳಾ ಮಂಡಳಿ, ಭೂಮಿಕಾ ಮಹಿಳಾ ಸಂಘ, ಅನ್ಸ್ ಕ್ಲಬ್, ಶರಾವತಿ ಮಹಿಳಾ ಸಂಘ, ಮಹಿಳಾ ಒಕ್ಕಲಿಗರ ಹಾಗೂ ತಾಲೂಕು ಮಹಿಳಾ ಒಕ್ಕಲಿಗರ ವೇದಿಕೆ ಭದ್ರಾವತಿ ಸೇರಿದಂತೆ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ನಗರದ ಅಮೀರ್ ಅಹ್ಮದ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ಭಿತ್ತಿ ಪತ್ರದೊಂದಿಗೆ ಪ್ರತಿಭಟನೆ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಪ್ರತಿನಿಧಿ ತಹಸೀಲ್ದಾರ್ ಪ್ರದೀಪ್ ಮೂಲಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ರೋಟರಿ ವಲಯ ಹನ್ನೊಂದರ ಸಹಾಯಕ ಗವರ್ನರ್ ಎಚ್.ಎಂ.ಸುರೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರದ ಪ್ರಕರಣಗಳು ನಿರಂತರವಾಗಿ ನಡೆಯುತ್ತಿರುವುದು ಮನುಕುಲಕ್ಕೆ ಹೇಸಿಗೆ ಎನಿಸಿದೆ. ಈ ನಿಟ್ಟಿನಲ್ಲಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುವ ಮೂಲಕ ಇಂಥ ಪ್ರಕರಣಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ಇಂಥ ಹೀನ ಕೃತ್ಯಗಳನ್ನು ನಮ್ಮ ರೋಟರಿ ಸಂಸ್ಥೆಗಳು ಸದಾ ಖಂಡಿಸುತ್ತವೆ. ಈ ನಿಟ್ಟಿನಲ್ಲಿ ಸರ್ಕಾರಗಳು ಇಂತಹ ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡುವುದರ ಮುಖಾಂತರ ಇಂತಹ ಪ್ರಕರಣಗಳು ನಿಲ್ಲಿಸಬೇಕು ಎಂದರು.

ಮೆರವಣಿಗೆಯಲ್ಲಿ ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಇನ್ನರ್ ವ್ಹೀಲ್ ಕ್ಲಬ್ಬಿನ ಅಧ್ಯಕ್ಷೆ ವಾಗ್ದೇವಿ ಬಸವರಾಜ್, ಶಿವಮೊಗ್ಗ ಕ್ಲಬ್‌ನ ಸೂರ್ಯ ನಾರಾಯಣ ಉಡುಪ, ರೋಟರಿ ಉತ್ತರದ ಅಧ್ಯಕ್ಷ ಸುಂದರ್ ರಾಮ್, ಮಲ್ನಾಡ್ ಕ್ಲಬ್ಬಿನ ಅಧ್ಯಕ್ಷ ಮುಸ್ತಾಕ್ ಅಲಿ, ಸುರೇಶ್‌ಕುಮಾರ್. ರಿವರ್ಸ್ ಸೈಡ್ ಕ್ಲಬ್ಬಿನ ಬಸವರಾಜ್, ಕೋಣಂದೂರು ಕ್ಲಬ್‌ನ ಗಿರೀಶ್, ಕೆ.ಪಿ.ಶೆಟ್ಟಿ , ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್ , ಜಿ.ವಿಜಯಕುಮಾರ್, ಜಿ.ರವಿ, ಎ.ಎಸ್.ಚಂದ್ರಶೇಖರ್, ಎಚ್.ಎಲ್.ರವಿ, ಭಾರತಿ ಚಂದ್ರಶೇಖರ್, ವಾರಿಜಾ ಜಗದೀಶ್, ಬಿ.ಜಿ. ಧನರಾಜ್, ಬಿಂದು ವಿಜಯ ಕುಮಾರ್, ಶಬರಿ ಕಡಿದಾಳ್, ಮಂಜುನಾಥ್ ರಾವ್ ಕದಂ ಮತ್ತಿತರರಿದ್ದರು.