ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸಿದ್ದು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿ ಸ್ವಾಗತದ ಮೂಲಕ ತಮ್ಮ ನೆಚ್ಚಿನ ನಾಯಕನನ್ನು ಬರಮಾಡಿಕೊಂಡರು. ಅರಸೀಕೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದರ ಜೊತೆಗೆ, ತಮಗೆ ವಹಿಸಿರುವ ಇಲಾಖೆಯ ವ್ಯಾಪ್ತಿಯಲ್ಲಿ ರಾಜ್ಯದ ಜನತೆಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸುವುದಾಗಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ದಶಕಗಳ ರಾಜಕೀಯ ಹೋರಾಟದ ಮೂಲಕ ಕ್ಷೇತ್ರದ ಜನತೆಯ ವಿಶ್ವಾಸ ಗಳಿಸಿಕೊಂಡಿರುವ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸಿದ್ದು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿ ಸ್ವಾಗತದ ಮೂಲಕ ತಮ್ಮ ನೆಚ್ಚಿನ ನಾಯಕನನ್ನು ಬರಮಾಡಿಕೊಂಡರು.ನಗರದ ಪಿಪಿ ವೃತ್ತದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ನೂತನ ಸಚಿವ ಕೆ.ಎಂ. ಶಿವಲಿಂಗೇಗೌಡ, ಕ್ಷೇತ್ರದ ಜನತೆ ಹಾಗೂ ಪಕ್ಷದ ನಾಯಕರು ತಮ್ಮ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು. ಸಚಿವ ಸ್ಥಾನ ದೊರೆತಿರುವುದು ಕೇವಲ ತಮ್ಮ ವೈಯಕ್ತಿಕ ಸಾಧನೆಯಲ್ಲ , ಕ್ಷೇತ್ರದ ಜನತೆ ಹಲವು ವರ್ಷಗಳಿಂದ ನೀಡಿದ ನಿರಂತರ ಬೆಂಬಲ, ಆಶೀರ್ವಾದ ಮತ್ತು ವಿಶ್ವಾಸದ ಫಲವಾಗಿದೆ. ಕ್ಷೇತ್ರದ ಜನರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಇನ್ನಷ್ಟು ಜವಾಬ್ದಾರಿಯಿಂದ ಕೆಲಸ ಮಾಡುವುದಾಗಿ ಶಿವಲಿಂಗೇಗೌಡ ಹೇಳಿದರು.“ಇಂದು ನಾನು ಏನಾಗಿದ್ದೇನೋ ಅದಕ್ಕೆ ಕ್ಷೇತ್ರದ ಜನತೆಯೇ ಕಾರಣ. ಅವರ ಆಶೀರ್ವಾದ ಮತ್ತು ನಿರಂತರ ಬೆಂಬಲದಿಂದಲೇ ಸಚಿವ ಸ್ಥಾನದ ಕನಸು ನನಸಾಗಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಎಲ್ಲ ನಾಯಕರು ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ನಾನು ಕೃತಜ್ಞನಾಗಿದ್ದೇನೆ” ಎಂದು ಹೇಳಿದರು. ಅರಸೀಕೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದರ ಜೊತೆಗೆ, ತಮಗೆ ವಹಿಸಿರುವ ಇಲಾಖೆಯ ವ್ಯಾಪ್ತಿಯಲ್ಲಿ ರಾಜ್ಯದ ಜನತೆಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸುವುದಾಗಿ ತಿಳಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಸಮೀವುಲ್ಲಾ ಮಾತನಾಡಿ, ಶಿವಲಿಂಗೇಗೌಡರ ಹೆಸರು ಅರಸೀಕೆರೆ ರಾಜಕೀಯ ಇತಿಹಾಸದಲ್ಲಿ ಅಜರಾಮರವಾಗಿದೆ. ಶಾಸಕರಾಗಿ ಕ್ಷೇತ್ರದ ಜನತೆಯ ವಿಶ್ವಾಸ ಗಳಿಸಿರುವ ಅವರು ಸಚಿವರಾಗಿಯೂ ಜನಪರ ಕಾರ್ಯಗಳ ಮೂಲಕ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರಗತಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಬಿ. ಶಶಿಧರ್, ಗಂಜಿಗೆರೆ ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋಬಾಬು, ಬಿಳಿ ಚೌಡಯ್ಯ, ಗೊಲ್ಲರಹಳ್ಳಿ ಹನುಮಪ್ಪ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.ಅಭಿಮಾನಿಗಳ ಹರ್ಷೋದ್ಘಾರ: ಅದ್ಧೂರಿ ಮೆರವಣಿಗೆ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ನಗರ ಪ್ರವೇಶಿಸುತ್ತಿದ್ದಂತೆಯೇ ಅವರನ್ನು ಸ್ವಾಗತಿಸಲು ಭಾರೀ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮಿಸಿದರು. ಸಚಿವರ ಆಗಮನದ ವೇಳೆ ಮೊಳಗಿದ ಘೋಷಣೆಗಳು, ಹರ್ಷೋದ್ಘಾರಗಳು ನಗರದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದವು. ನಂತರ ಸಚಿವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಹಾಸನ ರಸ್ತೆ ಮಾರ್ಗವಾಗಿ ಆರಂಭಗೊಂಡ ಮೆರವಣಿಗೆ ಡಾ. ಬಿ. ಆರ್. ಅಂಬೇಡ್ಕರ್ ವೃತ್ತ, ಪಿಪಿ ವೃತ್ತದ ಮೂಲಕ ಸಾಗಿತು. ದಾರಿಯುದ್ದಕ್ಕೂ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಚಿವರಿಗೆ ಪುಷ್ಪಹಾರ, ಬೃಹತ್ ಸೇಬಿನ ಹಾರ ಸೇರಿದಂತೆ ವಿವಿಧ ಬಗೆಯ ಹಾರಗಳನ್ನು ಹಾಕಿ ಅಭಿನಂದಿಸಿದರು. .ಈ ಸಂದರ್ಭದಲ್ಲಿ ಹಾಸನ ವೃತ್ತದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆ, ಪಿಪಿ ವೃತ್ತದಲ್ಲಿರುವ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಹಾಗೂ ಬಸ್ ನಿಲ್ದಾಣದ ಸಮೀಪದಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗಳಿಗೆ ಸಚಿವ ಶಿವಲಿಂಗೇಗೌಡ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.