ವೈಚಾರಿಕ ಭಕ್ತಿಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶರಣರು: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

| Published : Aug 26 2025, 02:00 AM IST

ವೈಚಾರಿಕ ಭಕ್ತಿಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶರಣರು: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಭಕ್ತಿಯ ತಳಹದಿಯಲ್ಲಿ ಸಾಮಾಜ, ಧಾರ್ಮಿಕ ಸುಧಾರಣೆ ತಂದವರು ಬಸವಾದಿ ಶರಣರು. ಶರಣರು ವೈಚಾರಿಕ ಭಕ್ತಿಯ ಮೂಲಕ ಸಮಾನತೆ, ಮಾನವೀಯತೆ, ಜಾತ್ಯತೀತ ಸಮಾಜ ನಿರ್ಮಾಣದಲ್ಲಿ ಅವರ ಸಾರ್ಥಕತೆ ಅಡಗಿತ್ತು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಕ್ತಿಯ ತಳಹದಿಯಲ್ಲಿ ಸಾಮಾಜ, ಧಾರ್ಮಿಕ ಸುಧಾರಣೆ ತಂದವರು ಬಸವಾದಿ ಶರಣರು. ಶರಣರು ವೈಚಾರಿಕ ಭಕ್ತಿಯ ಮೂಲಕ ಸಮಾನತೆ, ಮಾನವೀಯತೆ, ಜಾತ್ಯತೀತ ಸಮಾಜ ನಿರ್ಮಾಣದಲ್ಲಿ ಅವರ ಸಾರ್ಥಕತೆ ಅಡಗಿತ್ತು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಶ್ರೀ ಶರಣಬಸವಾಶ್ರಮದಲ್ಲಿ ಜರುಗಿದ ಪ್ರವಚನ ಮಹಾಮಂಗಲ ಹಾಗೂ ಸಹಸ್ರ ವಚನ ಕುಂಭಮೇಳದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ವಚನ ಸಾಹಿತ್ಯ ವ್ಯಕ್ತಿಗತ ಹಾಗೂ ಸಾಮಾಜಿಕ ಮಟ್ಟದಲ್ಲಿ ನೈತಿಕ ಸ್ವಚ್ಛತೆಗೆ, ಮಾನವೀಯತೆಗೆ ಬಲ ನೀಡುವ ಮಹತ್ವದ ಮಾರ್ಗದರ್ಶಕವಾಗಿದ್ದು, ಪ್ರತಿವ್ಯಕ್ತಿ ಅದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.

ಇಳಕಲ್ಲ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಶ್ರೀಗಳು ಮಾತನಾಡಿ, ಬಸವಾದಿ ಪ್ರಮಥರು ತಮ್ಮ ಆತ್ಮಕಲ್ಯಾಣದ ಜೊತೆಗೆ ಲೋಕಕಲ್ಯಾಣ ಮಾಡಿದವರು. ಬಸವಣ್ಣನವರ ತತ್ವ ಸಿದ್ಧಾಂತಗಳಿಗೆ ಆಕರ್ಷಣೆಯಾಗಿ ನಾಡಿನ ನಾನಾ ಭಾಗದ ಶಿವಶರಣರು ಅನುಭವ ಮಂಟಪಕ್ಕೆ ಬಂದಿದ್ದರು. ಅವರಲ್ಲಿ ಅಗ್ರಗಣ್ಯನೆಂದರೆ ಸೊನ್ನಲಿಗೆ ಶಿವಯೋಗಿ ಸಿದ್ದರಾಮೇಶ್ವರರು. ಸಿದ್ಧರಾಮೇಶ್ವರರು ಶಿವಯೋಗ ಸಾಧನೆ ಮಾಡಿ ಆತ್ಮಕಲ್ಯಾಣ ಮಾಡಿಕೊಂಡಿದ್ದರು. ಇದರೊಂದಿಗೆ ಕೆರೆಕಟ್ಟೆ ಕಟ್ಟುವುದು, ಆಲಯ ಕಟ್ಟುವುದು, ಗಿಡಮರಗಳನ್ನು ನೆಡುವುದು, ಬಡವರ ದೀನದಲಿತರ ಸಾಮೂಹಿಕ ಮದುವೆ ಮಾಡುವುದರ ಮೂಲಕ ಲೋಕಕಲ್ಯಾಣ ಮಾಡಿದರು.21ನೇ ಶತಮಾನದಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರು ಶರಣರ ಕಾರ್ಯ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಬಣ್ಣಿಸಿದರು.

ಭಾರತೀಯ ರೈಲ್ವೆ ಬೊರ್ಡ ಸದಸ್ಯ ಅಶೋಕ್ ಲಿಂಬಾವಳಿ ಮಾತನಾಡಿ, ನೆರೆಪ್ರದೇಶದಲ್ಲಿ ಆಶ್ರಮವಿದ್ದರೂ ಅದು ತನ್ನ ಹಳೆಯ ವೈಭವವನ್ನು ಆಧ್ಯಾತ್ಮದ ಸಂಭ್ರಮವನ್ನು ಕಳೆದುಕೊಂಡಿಲ್ಲ, ಆಶ್ರಮದ ಪ್ರಥಮ ಪೀಠಾಧಿಪತಿಗಳಾದ ಶರಣಬಸಪ್ಪ ಅಪ್ಪಗಳು ಹಾಕಿ ಕೊಟ್ಟಿರುವ ಧಾರ್ಮಿಕ ಆದ್ಯಾತ್ಮಿಕ ಕಾರ್ಯಕ್ರಮಗಳು ಯಾವುದೇ ಧರ್ಮ ಜಾತಿ ಭೇದ ಇಲ್ಲದೆ ಸರ್ವರನ್ನು ತಮ್ಮ ಜೊತೆ ಕರೆದುಕೊಂಡು ಹೋಗುವ ಸಂಪ್ರದಾಯವನ್ನು ಸತ್ ಪರಂಪರೆಯನ್ನು ಈಗಿನ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಯಥಾವತ್ತಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದರು.

ಪ್ರವಚನಕರರಾದ ರಾಚಯ್ಯ ಶಾಸ್ತ್ರಿಗಳು ಮಾತನಾಡಿದರು. ಕೊರಟಗೆರೆ ಶ್ರೀ ಮಹಾಲಿಂಗ ಸ್ವಾಮೀಜಿ, ಹಾವೇರಿ ಶಾಂತಲಿಂಗ ಸ್ವಾಮೀಜಿ, ತುರುವೇಕೆರೆ ತಿಪ್ಪೇರುದ್ರ ಸ್ವಾಮೀಜಿ, ವಿಜಯಪುರ ಆತ್ಮರಾಮ ಸ್ವಾಮೀಜಿ, ಶಿವಮೊಗ್ಗ ನವಲಿಂಗ ಶರಣರು ಸಮ್ಮುಖ ವಹಿಸಿದ್ದರು. ಬಸವಕಲ್ಯಾಣದ ಸತ್ಯಕ್ಕ, ಮುಧೋಳಿನ ಸತೀಶ ಬಂಡಿ, ಹಾವೇರಿ ರವಿ ಪೂಜಾರಿ, ನವಲಗುಂದ ಜಯಪ್ರಕಾಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಸಹಸ್ರ ವಚನ ಕುಂಭಮೇಳದಲ್ಲಿ ಸಾವಿರಾರು ಮಹಿಳೆಯರು ವಚನ ಗ್ರಂಥಗಳೊಂದಿಗೆ ಕುಂಭಮೇಳದಲ್ಲಿ ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮಂಡ್ಯದಿಂದ ಪೂಜಾ ಕುಣಿತ, ಮೈಸೂರಿನಿಂದ ನಗಾರಿ ವಾದ್ಯ, ಹೊಸಪೇಟೆಯ ಮರಗಾಲು ಕುಣಿತ, ಚಿಕ್ಕಬುಳ್ಳಾಪುರದ ಜಾಂಜಾ ಮೇಳ, ಆರೂಂಡಿಯ ಡೊಳ್ಳು ಕುಣಿತ, ಸಾಗರದ ಮಹಿಳಾ ಡೊಳ್ಳು ಕುಣಿತ, ಅರಸಿಕೆರೆಯ ತಮಟೆ ವಾದನ, ಹರಿಹರ ಕ್ಯಾತನಹಳ್ಳಿಯ ವೀರಗಾಸೆ ಉಡುಪಿಯ ಹುಲಿವೇಷ, ಮಂಗಳೂರಿನ ಚೇಂಡೆ ವಾದನ ಹಾಗೂ ಸ್ಥಳಿಯ ಜಾನಪದ ಕಲಾತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರಗು ತಂದವು. ಬಸವಾದಿ ಶರಣರ ಭಾವಚಿತ್ರಗಳು ಹಾಗೂ ವಚನ ಸಂದೇಶಗಳೊಂದಿಗೆ ಸಹಸ್ರ ವಚನ ಕುಂಭಮೇಳ ಶ್ರೀ ಶರಣ ಅಪ್ಪಂಗಳವರ ಆಶ್ರಮದಿಂದ ಪ್ರಾರಂಭವಾಗಿ ಹಳೆ ಪ್ರಾವಸಿ ಮಂದಿರ, ಬಗಣಿ ಸಮಾಜ, ಕೃಷ್ಣ ಚಿತ್ರಮಂದಿರ, ವಲ್ಲಭಾಯಿ ಚೌಕ, ಬಸವೇಶ್ವರ ವೃತ್ತ, ಐಡಿಬಿಐ ಬ್ಯಾಂಕ್, ಸೆಂಟಲ್ ಮೆಂಟ್ ಏರಿಯಾ ಮೂಲಕ ಶ್ರಿ ಮಠಕ್ಕೆ ತಲುಪಿತು.

ಭಾರತೀಯರದು ಮುಕ್ತಿ, ಮೋಕ್ಷ ಹೊಂದುವುದೇ ಕೊನೆ ಆಸೆಯಾಗಿದೆ. ಜಗತ್ತಿನ ಕಲ್ಯಾಣವೇ ಮೋಕ್ಷ. ಜನ ಸೇವೆಯೇ ಜನಾರ್ಧನ ಸೇವೆ. ದೇಶ ಸೇವೆಯೇ ಈಶ ಸೇವೆ. ಜನರ ಸಂಕಷ್ಟ, ನೋವುಗಳಿಗೆ ಸ್ಪಂದಿಸಿ ಜನರ ಕಣ್ಣೀರು ಒರೆಸಬೇಕು. ಶರಣರ ಸಂತರ ಸಂದೇಶವನ್ನು ಪಾಲಿಸಿ ನಮ್ಮ ಸಮಾಜದಲ್ಲಿರುವ ಜಾತಿಭೇದ ತಾರತಮ್ಯ ತೊಡೆದು ಹಾಕಬೇಕು. ನಾವೆಲ್ಲರೂ ಪರಮಾತ್ಮನ ಮಕ್ಕಳೆಂದು ತಿಳಿದು ಸಹೋದರತೆಯಿಂದ ಭಾತೃತ್ವದಿಂದ ಬಾಳಬೇಕು.

- ನಾರಾಯಣಸ ಬಾಂಡಗೆ ರಾಜ್ಯಸಭಾ ಸದಸ್ಯ