ಫೆ. 2ರಿಂದ ಮಾ. 4ರ ವರೆಗೆ ಆರಂಭಗೊಂಡ ಕಲಿಯುಗದ ಕಾಮಧೇನು ಶ್ರೀರಾಮಲಿಂಗೇಶ್ವರ ದರ್ಶನಕ್ಕೆ ದೇಶದ ನಾನಾ ಭಾಗದಿಂದ 6 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿ ದರ್ಶನಾಶೀರ್ವಾದ ಪಡೆದರು.

ನವಲಗುಂದ:

ಹೋಳಿಹಬ್ಬಕ್ಕೆ ದೇಶದೆಲ್ಲೆಡೆ ವಿಶೇಷತೆ ಪಡೆದಿರುವ ಇಲ್ಲಿನ ಹೋಳಿ ಹಬ್ಬಕ್ಕೆ ಗುರುವಾರ ಮಧ್ಯಾಹ್ನ ರಾಮಲಿಂಗೇಶ್ವರ ಕಾಮಣ್ಣನ ದಹನ ಮಾಡುವ ಮೂಲಕ ಬಣ್ಣದ ಹಬ್ಬಕ್ಕೆ ಭಕ್ತಿ ಪೂರ್ವಕ ವಿದಾಯ ಹೇಳಲಾಯಿತು.

ಫೆ. 2ರಿಂದ ಮಾ. 4ರ ವರೆಗೆ ಆರಂಭಗೊಂಡ ಕಲಿಯುಗದ ಕಾಮಧೇನು ಶ್ರೀರಾಮಲಿಂಗೇಶ್ವರ ದರ್ಶನಕ್ಕೆ ದೇಶದ ನಾನಾ ಭಾಗದಿಂದ 6 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿ ದರ್ಶನಾಶೀರ್ವಾದ ಪಡೆದರು.

ಜಾತಿ, ಮತ ಮೀರಿ ಭಾವೈಕ್ಯತೆಯಿಂದ ಆಚರಿಸುವ ಈ ಹೋಳಿ ಹಬ್ಬದಲ್ಲಿ ಮಹಿಳೆಯರು. ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಐದು ದಿನವೂ 24 ಗಂಟೆಯೂ ರಾಮಲಿಂಗೇಶ್ವರ ಕಾಮದೇವರ ದರ್ಶನ ನಡೆದರೆ, ನಿರಂತರ ಪ್ರಸಾದದ ವ್ಯವಸ್ಥೆಯೂ ಅಚ್ಚುಕಟ್ಟಾಗಿ ಮಾಡಿದ್ದು ಭಕ್ತರನ್ನು ಸೆಳೆಯಿತು.

ಕಾಮದಹನ:

ಬುಧವಾರ ರಾತ್ರಿ ಆರಂಭಗೊಂಡ ಕಾಮದೇವರ ಮೆರವಣೆಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮೆರವಣಿಗೆ ಬರುವ ಮಾರ್ಗದಲ್ಲೆಲ್ಲ ಭಕ್ತರು ರಸ್ತೆ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿದ್ದರು. ಹೂವಿನ ಅಲಂಕಾರದಿಂದ ಸಿಂಗರಿಸಿ, ಸ್ವಾಗತಿಸಿ ಪೂಜೆ ಸಲ್ಲಿಸಿದರು. ಗುರುವಾರ ಮಧ್ಯಾಹ್ನ 3ಕ್ಕೆ ಮೆರವಣಿಗೆ ಮರಳಿ ದೇವಸ್ಥಾನ ತಲುಪಿತು.

ಬಳಿಕ ದಲಿತ ಕಾಮದೇವರ ಚಿತೆಯಿಂದ ರಾಮಲಿಂಗ ಕಾಮದೇವರಿಗೆ ಬೆಂಕಿ ತಂದು ಪೂಜೆ ಸಲ್ಲಿಸಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕಾಮದಹನ ಮಾಡಲಾಯಿತು. ಜಗ್ಗಲಗಿ, ಮಜಲುಗಳೊಂದಿಗೆ ಪ್ರದಕ್ಷಿಣೆ ಮಾಡಲಾಯಿತು.

ಯಗಾದಿ ಪಾಢ್ಯದಂದು ಕಾಮದೇವರ ಮರು ಹುಟ್ಟಿನ ಪ್ರತೀಕವಾಗಿ ಪುನಃ ರಾಮಲಿಂಗ ಕಾಮದೇವರನ್ನು ಬಾಲ್ಯಾವಸ್ಥೆಯಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ಕಾಮದೇವರ ಪೂಜೆ ನೆರವೇರಿಸುವುದು ಇಲ್ಲಿನ ಪದ್ಧತಿ. ಅಂದೂ ಲಕ್ಷಾಂತರ ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ.